ತುಮಕೂರು

ಷಡ್ಯಂತ್ರಕ್ಕೆ ಒಡೆವ ಹೇಮಾವತಿ ನಾಲಾ

Published On :

ತುಮಕೂರು: ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸುವ ಕಾಲುವೆ ಪ್ರತಿವರ್ಷ ಒಡೆದು ಹೋಗುವುದರ ಹಿಂದೆ ಒಂದುತಂಡದ ಕೈವಾಡವಿದೆ ಎಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ನೇರವಾಗಿ ಆಪಾದಿಸಿದ್ದಾರೆ. ಅವರು ನಾಲೆ ಒಡೆದ ಸ್ಥಳಕ್ಕೆ ಭೇಟಿ ನೀಡಿದ ನಂತರ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ನಾಲೆ ಒಡೆದಿರುವ ಹಿನ್ನೆಲೆಯಲ್ಲಿ ಅಲ್ಲಿನ ತಪ್ಪಿತಸ್ಥ ಎಂಜಿನಿಯರ್‌ಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಉನ್ನತ ಮಟ್ಟದ ತನಿಖೆಯನ್ನು ಮಾಡುವುದು ಅಗತ್ಯವಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಸಮುದ್ರ ಕೆರೆಯಪಕ್ಕ ಹೇಮಾವತಿ ನಾಲಾ ಒಡೆದು ಹೋಗಿರುವ ಸ್ಥಳವನ್ನು ವೀಕ್ಷಣೆ ಮಾಡಿದಾಗ ಈ ವರ್ಷ ಎಂಜಿನಿಯರ್‌ಗಳು ಕೈಗೊಂಡಿರುವ ಕಾಮಗಾರಿ ಹಿಂದೆ ಒಂದು ದುರುದ್ದೇಶವಿದೆ ಎಂದು ತಿಳಿಸಿದ್ದಾರೆ.
ಆಧುನೀಕರಣ: ನಾಗಸಮುದ್ರದ ಒಂದು ಕಟ್ಟೆಯಂತಿರುವ ಪ್ರದೇಶ ಇದುವರೆಗೂ ಒಂದು ಬ್ಯಾಲೆನ್ಸಿಂಗ್ ಜಲ ಸಂಗ್ರಹಗಾರದಂತಿದೆ. ಯಾವುದೇ ತೊಂದರೆ ಇಲ್ಲದಂತೆ ನೀರು ಸರಾಗವಾಗಿ ಹರಿಯುತ್ತಿದ್ದುದು ಕಾಣಲಿದೆ. 0 ಕಿ.ಮೀನಿಂದ 72ನೇ ಕಿ.ಮೀವರೆಗೆ ಕಾಲುವೆಯ ಆಧುನಿಕರಣಕ್ಕಾಗಿ ಸುಮಾರು ರು. 525 ಕೋಟಿ ಅಂದಾಜು ಪಟ್ಟಿ ಸಿದ್ದಪಡಿಸಿದ್ದು, ಮುಂದಿನ ವರ್ಷ ನಾಲಾ ಆಧುನೀಕರಣ ಕೈಗೊಳ್ಳಲು ಉದ್ದೇಶಿಸಿದೆ. ಆದರೆ ಅನಗತ್ಯವಾಗಿ ಈ ಕೆರೆಯ ಪ್ರದೇಶದಲ್ಲಿನ ಒಂದು ಭಾಗದಲ್ಲಿ ಹೊಸದಾಗಿ ಕಾಲುವೆಯನ್ನು ನಿರ್ಮಾಣ ಮಾಡುವ ಅಗತ್ಯವೇ ಇರಲಿಲ್ಲ. ಒಂದು ವೇಳೆ ಅಗತ್ಯವಿದ್ದರೂ, ಕಳೆದ ಬಾರಿ ನೀರು ನಿಲ್ಲಿಸುವ ವೇಳೆಗೆ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬಹುದಾಗಿತ್ತು.  ಸುಮಾರು ರು. 3 ಕೋಟಿ ವೆಚ್ಚದ ಕಾಮಗಾರಿಯನ್ನು ಎಂಜಿನಿಯರ್‌ಗಳು ಆತುರಾತುರವಾಗಿ ಕಳೆದ ಹದಿನೈದು ದಿವಸದಲ್ಲಿ ಕಾಮಗಾರಿ ಆರಂಭಿಸಿ ಹೊಸದಾಗಿ ಎಂಬ್ಯಾಕ್‌ಮೆಂಟ್ ನಿರ್ಮಿಸಿ, ಹಿಂದೆಯೇ ಲೈನಿಂಗ್ ಮಾಡಿ, ಕ್ಯೂರಿಂಗ್ ಮಾಡದೆ ಹಾಗೂ ಪೂರ್ಣವಾಗಿ ಕಾಮಗಾರಿಯನ್ನು ಮುಗಿಸದೆ ಇರುವುದೇ ನಾಲೆ ಒಡೆಯಲು ಕಾರಣವಾಗಿದೆ. ಬಹುಶಃ ಇದನ್ನೆಲ್ಲ ಗಮನಿಸಿದರೆ ಉದ್ದೇಶಪೂರ್ವಕವಾಗಿಯೇ ಕಾಮಗಾರಿ ವಿಳಂಬವಾಗಿ ಆರಂಭಿಸಿದ್ದಾರೆ.

ಹೇಮಾವತಿ ನೀರು ಹರಿಸದಿದ್ದರೆ ಹೋರಾಟ: ಪಂಚಾಕ್ಷರಿ
ಗುಬ್ಬಿ: ತುಮಕೂರು ಜಿಲ್ಲೆಗೆ ನಿಯಮಾನುಸಾರ ಹೇಮಾವತಿ ನೀರನ್ನು ಜುಲೈ ತಿಂಗಳಲ್ಲಿಯೇ ಹರಿಸಬೇಕು. ಆದರೆ ಜುಲೈ ತಿಂಗಳು ಅಂತ್ಯಗೊಂಡರೂ ಇದುವರೆಗೂ ನೀರು ಹರಿಸುವಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಪಂಚಾಕ್ಷರಿ ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೇಮಾವತಿ ಜಲಾಶಯ ಭರ್ತಿಯಾಗುತ್ತಿರುವಾಗಲೇ ಹಾಸನ ಜಿಲ್ಲೆಯಲ್ಲಿ ಜಲಾಶಯದ ಕಾಲುವೆ ಒಡೆದು ನೀರು ಪೋಲಾಗುತ್ತಿದೆ. ಇದರಲ್ಲಿ ಷಡ್ಯಂತ್ರವಿದೆ. ಪ್ರತಿ ವರ್ಷವೂ ಹಾಸನ ಜಿಲ್ಲೆಯಲ್ಲಿಯೇ ನಾಲಾ ಕಾಲುವೆ ಒಡೆದು ನೀರು ಪೋಲಾಗುವುದರಲ್ಲಿ ಅಲ್ಲಿನ ರಾಜಕಾರಣಿಗಳ ಕೈವಾಡವಿದೆ ಎಂದರು.
ತುಮಕೂರು ಜಿಲ್ಲೆಗೆ ನಿಯಮಾನುಸಾರ 24 ಟಿಎಂಸಿ ನೀರು ಹರಿಸಬೇಕು. ಕುಂಟು ನೆಪ ಹೇಳಿ ಜಿಲ್ಲೆಗೆ ಬಿಡಬೇಕಾದ ನೀರನ್ನು ಹರಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ರಾಜಕಾರಣಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಾಲೆಯ ಬಲದಂಡೆಗೆ ಮಾತ್ರ ನೀರು ಹರಿಸಬೇಕೆಂಬ ನಿಯಮವಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ನಿಯಮವನ್ನು ಉಲ್ಲಂಘಿಸಿ ಬಲದಂಡೆಗೆ ಹೇಮಾವತಿ ನೀರು ಹರಿಸಿ ಶಿರಾ ತಾಲೂಕಿನ ಕೆರೆಗಳಿಗೆ ನೀರು ಹರಿಸಿಕೊಳ್ಳುತ್ತಿರುವುದರಿಂದ ಗುಬ್ಬಿ ತಾಲೂಕಿಗೆ ಅನ್ಯಾಯವಾಗುತ್ತಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಬಿಜೆಪಿ ತಾಲೂಕಾಧ್ಯಕ್ಷ ಎಚ್.ಟಿ.ಬೈರಪ್ಪ ಮಾತನಾಡಿ, ಪ್ರತಿ ವರ್ಷವೂ ಹೇಮಾವತಿ ನಾಲೆ ಹಾಸನ ಜಿಲ್ಲೆಯಲ್ಲಿಯೇ ಒಡೆದು ಜಲಾಶಯದ ನೀರು ಪೋಲಾಗುತ್ತಿರುವುದನ್ನು ಗಮನಿಸಿದರೆ ಆ ಭಾಗದ ರಾಜಕಾರಣಿಗಳ ಕೈವಾಡವಿದೆ ಎಂಬುದು ಸ್ಪಷ್ಟವಾಗುತ್ತದೆ. ಕಳೆದ ಭಾರಿಯೂ ಸಮರ್ಪಕವಾಗಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಯದೆ ಅಂತರ್ಜಲ ಕುಸಿತಗೊಂಡಿದೆ. ತಾಲೂಕಿನ ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿದೆ. ಅಲ್ಲದೇ ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ ಎಂದರು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದರಾಮಣ, ಜಿಲ್ಲಾ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ಲೋಕೇಶ್ ಇದ್ದರು.

ನಾಲಾ ಶುದ್ಧೀಕರಣ ಇಲ್ಲ
ಹೊಸದಾಗಿ ಎಂಬ್ಯಾಕ್‌ಮೆಂಟ್ ನಿರ್ಮಿಸಿದ್ದರೂ, ಹಳೆಯ ಕಾಲುವೆಯನ್ನು ಒಡೆದು ಹಾಕುವ ಅವಶ್ಯಕತೆ ಇರಲಿಲ್ಲ. ಆದರೂ ಕಾಲುವೆಯ ಭಾಗವನ್ನು ಒಡೆದು ಹಾಕಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಎಂಜಿನಿಯರ್‌ಗಳು ಪ್ರತಿ ವರ್ಷ ನೀರು ಬಿಡುವ ಮುಂಚೆ ಕಾಲುವೆ ಸ್ವಚ್ಛಗೊಳಿಸಲು ಮತ್ತು ದುರಸ್ತಿಗೊಳಿಸಲು ನಿಗದಿಪಡಿಸಿರುವ ಹಣವನ್ನು ನೀರು ಬಿಟ್ಟ ನಂತರ ಬಿಲ್ ಮಾಡಿಕೊಳ್ಳಲು ಉಪಯೋಗಿಸುವುದೇ ಅವರ ಸಾಧನೆಯಾಗಿದೆ. ನೀರು ಬಿಡುವ 2-3 ತಿಂಗಳ ಮುಂಚೆ ಕಾಲುವೆ ಶುದ್ಧಗೊಳಿಸಿ ಉನ್ನತ ಮಟ್ಟದ ಅಧಿಕಾರಿಗಳು ತಪಾಸಣೆ ನಡೆಸುವುದು ನಿಯಮ. ಆದರೆ ಇದನ್ನೆಲ್ಲಾ ಗಾಳಿಗೆ ತೂರಿ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ಪ್ರತಿವರ್ಷ ಈ ರೀತಿ ಅನಾಹುತ ನಡೆಸುತ್ತಿರುವುದು ತುಮಕೂರು ಜಿಲ್ಲೆಯ ದೌರ್ಬಾಗ್ಯವೇ ಸರಿ ಎಂದು ರಮೇಶ್ ವಿಷಾದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.