ಬಾಲಕಾರ್ಮಿಕ ಪದ್ಧತಿ ಅಭಿವೃದ್ಧಿಗೆ ಮಾರಕ
ತುಮಕೂರು: ಗೌರವಯುತ ಜೀವನವೆಂದರೆ ಸೂಟು ಬೂಟು ಹಾಕಿಕೊಂಡು, ಸೆಂಟ್ ಹೊಡೆದುಕೊಂಡು ಟಾಕು ಟೀಕಾಗಿ ತಿರುಗಾಡುವುದಲ್ಲ. ಬದಲಾಗಿ ಒಬ್ಬ ಮನುಷ್ಯ ತನಗೆ ಸಂವಿಧಾನದತ್ತವಾಗಿ ಬಂದ ಕರ್ತವ್ಯ ನಿಭಾಯಿಸುತ್ತ, ಹಕ್ಕುಗಳನ್ನು ಪಡೆದು ಜೀವನ ಸಾಗಿಸುವುದು ಎಂದು ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್ ಹೇಳಿದರು.
ತುಮಕೂರಿನ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಮಾರಕವಾಗಿದೆ. ಬಾಲಕಾರ್ಮಿಕ ವಿರೋಧಿ ದಿನ ನಮ್ಮ ಜವಾಬ್ದಾರಿಗಳನ್ನು ಎಚ್ಚರಿಸುವ ದಿನವಾಗಿದೆ. ಬಾಲಕಾರ್ಮಿಕರಾಗಿ ದುಡಿಯುವ ಮಕ್ಕಳಿಗೆ ಸಿಗುವ ಸ್ವಲ್ಪ ಹಣದಿಂದ ಅಲ್ಪ ತೃಪ್ತರಾಗಿ ನಿಗಧಿತ ಗುರಿಯಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಮಕ್ಕಳಿಗೆ ಮಾರಕವಾಗಿರುವ ಈ ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಪ್ರಯತ್ನಿಸಬೇಕಾಗಿದೆ ಎಂದರು.
ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಮಾತನಾಡಿ, ಬಾಲಕಾರ್ಮಿಕರನ್ನು ಗುರುತು ಹಚ್ಚಿ ಅವರನ್ನು ಕೆಲಸದಿಂದ ಬಿಡಿಸುವುದಷ್ಟೇ ನಮ್ಮ ಗುರಿಯಾಗಬಾರದು. ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಧಿಕಾರಿ ಬಾಲಕಾರ್ಮಿಕರ ಪತ್ತೆ ಹೆಚ್ಚುವಾಗ ಕೇವಲ ಅಂಕಿ ಅಂಶಗಳಿಗೆ ಗಮನ ನೀಡದೆ ಆತ ಮಾಡುತ್ತಿರುವ ಕೆಲಸದಿಂದ ಆತನ ದೈಹಿಕ, ಮಾನಸಿಕ ಬೆಳವಣಿಗೆ ತೊಂದರೆಯಾಗುತ್ತಿದೆಯೇ, ಮಾಲೀಕರಿಂದ ಶೋಷಣೆಗೆ ಒಳಗಾಗುತಿದ್ದಾನೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ಕೆಲವು ವಿನಾಯಿತಿಗಳನ್ನು ನೀಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ವಿದ್ಯೋದಯ ಕಾನೂನು ಕಾಲೇಜು ಪ್ರಾಧ್ಯಾಪಕ ಎಸ್.ರಮೇಶ್ ಬಾಲ ಕಾರ್ಮಿಕ ಪದ್ಧತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹಿರಿಯ ದಿವಾಣಿ ನ್ಯಾಯಾಧೀಶರಾದ ಸಿದ್ದಲಿಂಗುಪ್ರಭು, ನ್ಯಾಯಾಧೀಶರಾದ ಹಡಗಲಿ ರಾಮು, ವಾಮದೇವನಾಯಕ್, ರಾಮಚಂದ್ರ, ಸಿಇಓ ಗೋವಿಂದರಾಜು, ಎಡಿಸಿ ಪೆದ್ದಪ್ಪಯ್ಯ, ಕಾರ್ಮಿಕ ಅಧಿಕಾರಿ ಚಲಪತಿ,ಡಿಡಿಪಿಐ ಈಶ್ವರಯ್ಯ, ಬಾಲ ಕಾರ್ಮಿಕ ಯೋಜನಾಧಿಕಾರಿ ರವಿ, ಡಿ.ಹೆಚ್.ಓ ಡಾ,ಚನ್ನಮಲ್ಲಯ್ಯ ಮತ್ತಿತರು ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಸಮಾನ ಮಕ್ಕಳ ಮಂಟಪದ ಮಕ್ಕಳಿಂದ ಬಾಲಕಾರ್ಮಿಕ ಪದ್ಧತಿಯ ಅನಾನುಕೂಲತೆ ಕುರಿತ ನಾಟಕ ಪ್ರದರ್ಶನಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

