ತುಮಕೂರು

ಸರ್ಕಾರಿ ಕಚೇರಿಗೆ ಬೀಗ ಹಾಕಿದ ಶಾಸಕ ರಾಜಣ್ಣ!

Published On :

ಕನ್ನಡಪ್ರಭ ವಾರ್ತೆ, ತುಮಕೂರು, ಜೂ.20
ಅದಕ್ಷತೆ, ದುರಾಡಳಿತದಿಂದ ಬೇಸತ್ತ ಆಡಳಿತ ಪಕ್ಷದ ಶಾಸಕರೇ ಸರ್ಕಾರಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ತುಮಕೂರಿನಲ್ಲಿ ಶುಕ್ರವಾರ ಸಂಜೆ 4-30 ರ ವೇಳೆಗೆ ನಡೆಯಿತು.
ಕುಣಿಗಲ್ ರಸ್ತೆಯಲ್ಲಿರುವ ತುಮಕೂರು ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಎಂಜಿನಿಯರ್(ಎಕ್ಸಿಕ್ಯುಟಿವ್ ಎಂಜಿನಿಯರ್) ಅವರ ಕಚೇರಿಗೆ ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಬೀಗ ಜಡಿಯುವುದರ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಎನ್. ರಾಜಣ್ಣ ಉದ್ಘಾಟನೆಯಾಗಿ ತಿಂಗಳು ಕಳೆಯುತ್ತಾ ಬಂದರೂ ಕಾರ್ಯನಿರ್ವಹಿಸದ ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಎಂಜಿನಿಯರ್ ಅವರ ಕಚೇರಿ, ಕಚೇರಿಗೇ ಬಾರದ ಇಇ ಅಮೃತ್ ಕುಮಾರ್ ಸೋಲಂಕಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಸ್ಥಳದಲ್ಲೇ ಇದ್ದ ಕಚೇರಿ ಇತರೆ ಸಿಬ್ಬಂದಿ ವಿಜಯ್‌ಕುಮಾರ್, ಗಾಯತ್ರಿ, ಮಂಜುನಾಥ್ ಅವರಿಂದ ಮಾಹಿತಿ ಪಡೆದರು. ಕಚೇರಿಗೆ  ಇದೇ ಮೊದಲ ಬಾರಿಗೆ ಬಂದಿರುವುದಾಗಿ ಇವರೆಲ್ಲರೂ ರಾಜಣ್ಣನವರ ಎದುರು ಒಪ್ಪಿಕೊಂಡರು.
ಹಾಲಿ ಕಾರ್ಯದೊತ್ತಡ ಕಡಿಮೆಯಿರುವ ಕೆಲಮೊಂದು ರಾಷ್ಟ್ರೀಯ ಹೆದ್ದಾರಿ ವಿಭಾಗ, ವಿಶೇಷ ವಿಭಾಗ, ಉಪವಿಭಾಗ ಕಚೇರಿಗಳನ್ನು ಹುದ್ದೆ ಸಮೇತ ಸ್ಥಳಾಂತರಿಸಲಾಗಿದೆ. ಈ ಪ್ರಕಾರ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವಿಶೇಷ ವಿಭಾಗವನ್ನು ತುಮಕೂರಿಗೆ ಸ್ಥಳಾಂತರಗೊಳಿಸಿ ಮರು ನಾಮಕರಣಗೊಳಿಸುವಂತೆ ಕಳೆದ 6-5-2014 ರಂದು ಆದೇಶಿಸಲಾಗಿದ್ದು, 26-5-2014 ಸಂಜೆಯೊಳಗೆ ಹೊಸದಾಗಿ ಕಚೇರಿಯನ್ನು ಆರಂಭಿಸಿದ ಅಧಿಸೂಚನೆ, ನಾಮಫಲಕದ ಭಾವಚಿತ್ರ ಇವುಗಳನ್ನು ಕೇಂದ್ರ ಕಚೇರಿಯ ನಿಬಂಧಕರಿಗೆ ಇ-ಮೇಲ್ ಮೂಲಕ ಸಲ್ಲಿಸುವಂತೆ ಬೆಂಗಳೂರಿನ ಮುಖ್ಯ ಇಂಜಿನಿಯರ್ ಅವರ ಕಚೇರಿ ಆದೇಶಿಸಿದೆ.
ಆದರೆ ಕಚೇರಿಯನ್ನೇ ಆರಂಭಿಸಿದೆ, ಫ್ಲೆಕ್ಸ್ ಹಾಕಿ, ( ನಾಮಫಲಕವನ್ನೂ ಹಾಕಿಲ್ಲ) ಭಾವಚಿತ್ರಗಳನ್ನು ಮಾತ್ರ ತೆಗೆದು ಇ - ಮೇಲ್ ಮಾಡಿರುವುದು ಕೆ.ಎನ್. ರಾಜಣ್ಣ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೋಚರಿಸಿತು. ರಾಜಣ್ಣ ಶುಕ್ರವಾರ ಸಂಜೆ 4 ರ ವೇಳೆಗೆ ಕಚೇರಿಗೆ ಬರುತ್ತಾರೆಂಬ ಸುದ್ದಿ ತಿಳಿದ ಕಚೇರಿ ಸಿಬ್ಬಂದಿ, ಕಸ ಹೊಡೆದು, ನೆಲ ತೊಳೆದಿದ್ದರು. ಆದರೆ ಕಚೇರಿಯಲ್ಲಿ ಕುರ್ಚಿ, ಟೇಬಲ್ ಸೇರಿದಂತೆ ಯಾವೊಂದು ಪೀಠೋಪಕರಣಗಳು, ಕಚೇರಿ ಕಡತಗಳು ಇಲ್ಲದೆ ಇರುವುದು ಕಂಡು ಬಂದಿದ್ದು, ಕಚೇರಿ ಅಧಿಕೃತವಾಗಿ ಕಾರ್ಯಾರಂಭವನ್ನೇ ಮಾಡಿಲ್ಲ ಎಂಬುದು ಗೋಚರಿಸಿತು.
ಅಪಘಾತ, ರಸ್ತೆ ತಡೆ: ಮಧುಗಿರಿ ಕ್ಷೇತ್ರದ ದಬ್ಬೇಘಟ್ಟ, ದೊಡ್ಡೇರಿ ಬಳಿ ಪದೇ ಪದೇ ರಸ್ತೆ ಅಪಘಾತಗಳು ಜರುಗುತ್ತಿದ್ದು, ಕೆಲ ದಿನಗಳ ಹಿಂದೆ ಇಬ್ಬರು ಪ್ರತ್ಯೇಕ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ರೀತಿಯ ಅವಘಡಗಳು ನಡೆದಾಗಲೆಲ್ಲಾ ಜನತೆ ರಸ್ತೆ ತಡೆ ನಡೆಸುವುದು ಸಾಮಾನ್ಯವಾಗಿದೆ. ಜನತೆ, ಪ್ರಯಾಣಿಕರು ಬೇಸತ್ತು ಹೋಗಿದ್ದಾರೆ. ಆದರೆ ರಸ್ತೆ ದುರಸ್ತಿ, ಸಂಬಂಧಪಟ್ಟ ಕಾಮಗಾರಿ ನಡೆಯುತ್ತಿಲ್ಲ ಎಂದು ಆ ಕ್ರೋಶ ವ್ಯಕ್ತಪಡಿಸಿದರು. ಎನ್.ಎಚ್. 234 ಮಂಗಳೂರಿನಿಂದ ತಿರುವಣ್ಣಾಮಲೈ 219.08 ಕಿಮೀ ರಸ್ತೆ ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಎಂದು ಮಾಹಿತಿ ನೀಡಿದರು.
ಜನಪರ ಚಿಂತನೆ ಅನಿವಾರ್ಯ: ಆಡಳಿತ ಪಕ್ಷದ ಶಾಸಕನಾಗಿ ಕಚೇರಿಗೆ ಬೀಗ ಜಡಿಯಬಾರದಿತ್ತು. ಆದರೆ ಜನಪರ ಚಿಂತನೆ ಅನಿವಾರ್ಯ. ಅಧಿಕಾರಿಗಳು ಇರುವುದು ಜನಸಾಮಾನ್ಯರಿಗಾಗಿ. ಈ ಹಿನ್ನೆಲೆಯಲ್ಲಿ ಈ ಕೆಲಸ ಮಾಡಿರುವುದಾಗಿ ಕೆ.ಎನ್. ರಾಜಣ್ಣ ತಿಳಿಸಿದರು.
ಅಮಾನತ್ತಿಗೆ, ಲೋಕಾಯುಕ್ತ ತನಿಖೆಗೆ ಆಗ್ರಹ: ಈಗಾಗಲೇ ಭ್ರಷ್ಟಾಚಾರದ ಆರೋಪ ಹೊತ್ತಿರುವ ಇಇ ಅಮೃತ್ ಕುಮಾರ್ ಸೋಲಂಕಿ ಅವರನ್ನು ಸರ್ಕಾರ ಕೂಡಲೇ ಅಮಾನತುಪಡಿಸಬೇಕು. ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು. ಇಲ್ಲದೇ ಹೋದಲ್ಲಿ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಎಚ್ಚರಿಕೆಯನ್ನು ನೀಡಿದರು. ಕಚೇರಿಗೆ ಬೀಗ ಜಡಿದಿದ್ದು, ಕೀಲಿಯನ್ನು ಇಲಾಖೆಯ ಮೇಲಧಿಕಾರಿಗಳಿಗೆ ಹಸ್ತಾಂತರಿಸುವುದಾಗಿ ತಿಳಿಸಿದ ರಾಜಣ್ಣ, ಲೋಕೋಪಯೋಗಿ ಇಲಾಖೆ ಸಚಿವರ ಗಮನಕ್ಕೂ ತರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇಇ ಕಿರುಕುಳದಿಂದ ಅಧಿಕಾರಿಯೊಬ್ಬರು ಕೆಲಸ ಬಿಟ್ಟಿರುವುದಾಗಿಯೂ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.