ತುಮಕೂರು

ನಗುತ್ತಲೇ ಜೇಬಿಗೆ ಕನ್ನ ಹಾಕಿದ ಡೀವಿ

Published On :

ತುಮಕೂರು: ರೇಲ್ವೆ ಇಲಾಖೆ ಅಭಿವೃದ್ಧಿಯ ಹೆಸರಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನತೆಯ ಜೇಬಿಗೆ ನಗು-ನಗುತ್ತಲೇ ಕನ್ನ ಹಾಕಿದೆ ಎಂದು ಸಿಪಿಐಎಂ ಆಕ್ರೋಶ ವ್ಯಕ್ತಪಡಿಸಿದೆ.
ರೈಲು ಪ್ರಯಾಣ ದರ ಮತ್ತು ಸರಕು ಸಾಗಣೆ ದರ ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಕಾರ್ಯಕರ್ತರು ತುಮಕೂರಿನ ಸ್ವಾತಂತ್ರ್ಯ ಚೌಕದಿಂದ ಮೆರವಣಿಗೆ ಮೂಲಕ ತೆರಳಿ ಕೇಂದ್ರ ಸರ್ಕಾರದ ಉದ್ದಿಮೆಯಾದ ಬಿಎಸ್‌ಎನ್‌ಎಲ್ ಕಚೇರಿ ಎದುರು ಪ್ರತತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಬಿ. ಉಮೇಶ್ ಮಾತನಾಡಿ, ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಾವಿರಾರು ಕೋಟಿ ಹಣವನ್ನು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಿಂದ ಖರ್ಚು ಮಾಡಿಸಿ ಈಗ ಅವರ ಋಣ ತೀರಿಸಲು ಹೊರಟಿರುವ ಮೋದಿ ಸರ್ಕಾರ, ಆರಂಭದಲ್ಲೇ ರೇಲ್ವೆ ಪ್ರಯಾಣ ದರವನ್ನು ಹೆಚ್ಚಿಸುವುದರ ಜೊತೆಗೆ ರೇಲ್ವೆಯನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ರೇಲ್ವೆ ಕೇವಲ ಲಾಭ ಗಳಿಸಲು ಮಾತ್ರ ಇರುವ ಸಂಸ್ಥೆಯಲ್ಲ. ಅದು ಜನರ ಸೇವೆ ಮಾಡಲು ಇರುವ ಒಂದು ಸಾಧನ. ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರದ ರೇಲ್ವೆ ಮಂತ್ರಿ ಸದಾನಂದಗೌಡ ನಗು ನಗುತ್ತಲೇ ರಾಜ್ಯದ ಜನರಿಗೆ ದ್ರೋಹ ಬಗೆದರು. ಈಗ ಅದೇ ರೀತಿ ನಗು-ನಗುತ್ತಲೇ ದೇಶದ ಜನರಿಗೆ ದ್ರೋಹ ಬಗೆಯಲು ಹೊರಟಿದ್ದಾರೆ. ನಿಮ್ಮ ನಗು ಎಲ್ಲರಿಗೂ ಸಿಗುವಂತೆ ಆಗಬೇಕಾದರೆ ದೇಶದ ಜನರ ಹಿತವನ್ನು ಮೊದಲು ಕಾಯಬೇಕೇ ಹೊರತು, ಕಾರ್ಪೊರೇಟ್ ಕಂಪನಿಗಳ ಹಿತವನ್ನಲ್ಲ ಎಂದರು.
ಸರಕು ಸಾಗಣೆಯ ಬೆಲೆಯನ್ನು ಹೆಚ್ಚಿಸಿರುವುದರಿಂದ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಳವಾಗುತ್ತವೆ. ಬಿಜೆಪಿ ಅಧಿಕಾರಕ್ಕಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬೆಲೆ ಏರಿಕೆ ನೀತಿಗಳ ವಿರುದ್ಧ ಭಾಷಣಗಳನ್ನು ಮಾಡಿ ಈಗ ಮಾಡಿರುವದಾದರೂ ಏನು? ಸಿಪಿಐಎಂ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳುತ್ತಲೇ ಬಂದಿದೆ. ಇದು ಮತ್ತೆ ಮತ್ತೆ ಸಾಬೀತಾಗಿದೆ. ಈಗ ಮತ್ತೊಮ್ಮೆ ರುಜುವಾತಾಗಿದೆ. ಇವುಗಳು ಜನರ ಹಿತದ ಬದಲಿಗೆ ಕಾರ್ಪೊರೇಟ್ ಕಂಪನಿಗಳ ಹಿತವನ್ನು ಹೆಚ್ಚಿಗೆ ಕಾಯುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐಎಂ ನಗರ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ದುಡಿಯುವ ಜನರ ಹಿತವನ್ನು ಕಾಯಬೇಕಾದ ಸರ್ಕಾರಗಳು ಇಂದು ತಮ್ಮ ಚುನಾವಣೆಗಳಿಗೆ ಹಣದ ಹೊಳೆಯನ್ನು ಹರಿಸಿದ ಕಾರ್ಪೊರೇಟ್ ಕಂಪನಿಗಳ ಹಿತವನ್ನು ಕಾಯುತ್ತಿವೆ. ಮೊದಲಿಗೆ ಶಾಂಪಲ್ ಎಂಬಂತೆ ರೇಲ್ವೆ ಪ್ರಯಾಣ ದರವನ್ನು ಬಿಜೆಪಿ ಸರ್ಕಾರ ಹೆಚ್ಚಿಸಿದೆ. ರೈಲುಗಳಲ್ಲಿ ಸಂಚರಿಸುವ ಸಾವಿರಾರು ಸಂಖ್ಯೆಯ ದುಡಿಯುವ ಜನರ ಬದುಕಿನ ಮೇಲೆ ಬರೆ ಎಳೆದಿದೆ. ಕೂಡಲೇ ಹೆಚ್ಚಿಸಿರುವ ದರವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್, ಆಟೋ ಚಾಲಕರ ಸಂಘದ ಸಿದ್ದರಾಜು, ಪೌರಕಾರ್ಮಿಕರ ಸಂಘದ ಮಂಜುನಾಥ್, ಜೂನಿ, ಕೆಎಸ್‌ಆರ್‌ಟಿಸಿ ನೌಕರರ ಸಂಘದ ದೇವರಾಜು, ಎಸ್‌ಎಫ್‌ಐನ ಶಿವಣ್ಣ, ಸಿಐಟಿಯುನ ನಾಗರಾಜು, ಡಿವೈಎಫ್‌ಐನ ಎಸ್.ರಾಘವೇಂದ್ರ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.