ತುಮಕೂರು

ಭೂರಹಿತ ಕಾರ್ಮಿಕರಿಗೆ ಆರ್ಥಿಕ ನೆರವು

Published On :

ತುಮಕೂರು: ಗ್ರಾಮೀಣ ಪ್ರದೇಶಗಳಲ್ಲಿ ಭೂ ರಹಿತ ಕಾರ್ಮಿಕರಿಗೆ ಹಾಗೂ ಕಸುಬುದಾರರಿಗೆ ಆರ್ಥಿಕ ನೆರವು ನೀಡಲು ಡಿಸಿಸಿ ಬ್ಯಾಂಕ್ ತೀರ್ಮಾನಿಸಿದೆ.
ಭೂರಹಿತರಾಗಿರುವ ಮತ್ತು ವಿವಿಧ ರೀತಿಯ ಕಸುಬುಗಳನ್ನು ಅವಲಂಬಿಸಿರುವ ಸಾಮಾನ್ಯರಿಗೆ ಡಿಸಿಸಿ ಬ್ಯಾಂಕ್‌ನಿಂದ ಜಂಟಿ ಬಾಧ್ಯತ ಗುಂಪುಗಳ ಮೂಲಕ ಸಾಲಸೌಲಭ್ಯವನ್ನು ನೀಡುವ ಯೋಜನೆಯನ್ನು ಬ್ಯಾಂಕ್ ಪ್ರಾರಂಭಿಸಿದ್ದು ಈ ಯೋಜನೆ ಉಪಯೋಗ ಪಡೆದುಕೊಳ್ಳುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಕೆ.ಎನ್. ರಾಜಣ್ಣ ಸಲಹೆ ನೀಡಿದರು.
ಮಧುಗಿರಿ ತಾಲೂಕು ನಿಡುವಳಲು ಗ್ರಾಮದಲ್ಲಿ ಕೃಷಿ ಪತ್ತಿನ ಸಂಘ ನೂತನವಾಗಿ ನಿರ್ಮಿಸಿರುವ ಭದ್ರತಾ ಕೊಠಡಿ ಮತ್ತು ಆಡಳಿತ ಮಂಡಳಿಯ ಸಭಾಗೃಹ ಉದ್ಘಾಟಿಸಿ ಮಾತನಾಡಿ, ಶೇ. 25 ರಷ್ಟು ಹೊಸ ಸದಸ್ಯರಿಗೆ ಸಾಲ ನೀಡಲು ಡಿಸಿಸಿ ಬ್ಯಾಂಕು ತೀರ್ಮಾನಿಸಿದ್ದು ಹೊಸ ರೈತರಿಗೆ ಸಾಲ ನೀಡಿ ಸಂಘವನ್ನು ಬಲಪಡಿಸಿಕೊಳ್ಳಲು ಮನವಿ ಮಾಡಿದರು.
ಸಂಸದ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ರಾಜಕೀಯವನ್ನು ತರೆದೆ ಎಲ್ಲರೂ ಸಹಕಾರ ಮನೋವೃತ್ತಿಯಿಂದ ಕಾರ್ಯ ಮಾಡಿದರೆ ಗ್ರಾಮೀಣಾಭಿವೃದ್ಧಿ ಸಾಧ್ಯವೆಂದು ಅಭಿಪ್ರಾಯಪಟ್ಟರು.
ಅಧ್ಯಕ್ಷ ಎನ್.ವಿ. ಲಕ್ಷ್ಮೀಕಾಂತ್ ಕಳೆದ 5 ವರ್ಷಗಳಲ್ಲಿ ಕಷ್ಟದಲ್ಲಿದ್ದ ಸಹಕಾರ ಸಂಘವನ್ನು ಅಭಿವೃದ್ಧಿಗೊಳಿಸಿ 1 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ನೋಂದಾಯಿಸಿಕೊಂಡು 2 ಕೋಟಿ 44 ಲಕ್ಷದಷ್ಟು ವಿವಿಧ ರೀತಿಯ ಸಾಲವನ್ನು 716 ಸದಸ್ಯರಿಗೆ ವಿತರಣೆ ಮಾಡಿ ನಷ್ಟದಲ್ಲಿದ್ದ ಸಂಘವನ್ನು ಲಾಭದೆಡೆಗೆ ತಂದು 5.38 ಲಕ್ಷದಷ್ಟು ನಿವ್ವಳ ಲಾಭ ಗಳಿಸಿದೆ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಕ್ಷೀರಭಾಗ್ಯ ಯೋಜನೆಗೆ ತುಮಕೂರು ಹಾಲು ಒಕ್ಕೂಟ ಸರ್ವವಿಧದ ಸಹಕಾರ ನೀಡುತ್ತಿದ್ದು ರೈತರು ಹೈನುಗಾರಿಕೆಯನ್ನು ಒಂದು ಉಪಕಸುಬಾಗಿ ಕೈಗೆತ್ತಿಕೊಂಡು ತಮ್ಮ ಆರ್ಥಿಕ ಉನ್ನತಿಯನ್ನು ಸಾಧಿಸಿಕೊಳ್ಳಲು ಮನವಿ ಮಾಡಿದರು.
ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ಎಂ.ಡಿ. ಟಿ.ವಿ. ನರಸಿಂಹಮೂರ್ತಿ, ಬ್ಯಾಂಕಿನ ನಿರ್ದೇಶಕರಾದ ಬಿ.ಸಿ. ಉಮೇಶ್, ನಾರಾಯಣಗೌಡ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಗಂಗಣ್ಣ, ತಾರಾದೇವಿ ಹಾಗೂ ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ಮಧುಸೂಧನ್ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.