ತುಮಕೂರು

ಹೆಸರು ಕೆಡಿಸಿದ ಕೊಂಬಿನ ಹುಳು!

Published On :

ಹುಳಿಯಾರು: ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಬಿತ್ತನೆ ಮಾಡಿದ್ದ ಹೆಸರು ಸಮೃದ್ಧವಾಗಿ ಬೆಳೆದು ಇನ್ನೇನು ಫಸಲು ಕೈಗೆ ಬರುವ ಸಮಯದಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಹೆಸರು ಗಿಡಕ್ಕೆ ಕೊಂಬಿನ ಹುಳುಗಳು ಕಾಟ ತಗುಲಿದೆ. ಹೊಲದಲ್ಲಿ ಹಚ್ಚ ಹಸಿರಾಗಿ ನಳನಳಿಸುತ್ತಿದ್ದ ಗಿಡಗಳು ಕೀಟದ ಬಾಯಿಗೆ ತುತ್ತಾಗಿ ರೈತರನ್ನು ಸಂಕಷ್ಟಕೀಡಾಗುವಂತೆ ಮಾಡಿವೆ.
ಈಗಾಗಲೇ ಹೋಬಳಿಯ ದಸೂಡಿ, ದಬ್ಬಗುಂಟೆ, ಸೋಮನಹಳ್ಳಿ ಭಾಗಗಳಲ್ಲಿ ಪೂರ್ವ ಮುಂಗಾರು ಹಾಗೂ ಅಶ್ವಿನಿ ಮಳೆಗೆ ಹೆಸರು ಬಿತ್ತನೆ ಮಾಡಿದ್ದರಿಂದ ಹೆಸರಿಗೆ ಯಾವುದೇ ಕೀಟಬಾದೆಯಿಲ್ಲದೆ ಹುಲುಸಾಗಿ ಬೆಳೆದು ರೈತರಿಗೆ ಫಸಲು ಸಿಕ್ಕಿದೆ. ಕಳೆದ ಎರಡ್ಮೂರು ದಿನಗಳಿಂದ ಹೆಸರು ಗಿಡಗಳನ್ನು ಕಿತ್ತು ಕಾಳನ್ನು ಬೇರ್ಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.     
ಹೋಬಳಿಯ ದೊಡ್ಡಬಿದರೆ, ಚಿಕ್ಕಬಿದರೆ, ನಂದಿಹಳ್ಳಿ, ಗೂಬೆಹಳ್ಳಿ ಮತ್ತು ಕಂದಿಕೆರೆ ಹೋಬಳಿಯ ಕೆಲವು ಗ್ರಾಮಗಗಳಲ್ಲಿ ಮಳೆಯ ಕೊರತೆಯಿಂದಾಗಿ ಫಸಲಿನ ಇಳುವರಿ ಕಡಿಮೆಯಾಗಿ ಹೆಸರು ಗಿಡಗಳೆಲ್ಲಾ ಒಣಗಿವೆ. ಕೊಂಬಿನ ಹುಳುಗಳ ಕಾಟ ಕೂಡ  ಹೆಚ್ಚಾಗಿ ಗಿಡದ ಎಲೆ, ಚಿಗುರನ್ನು ಭಕ್ಷಿಸುವ ಮೂಲಕ ಉಳಿದ ಗಿಡಗಳು ನಾಶವಾಗುತ್ತಿವೆ.
ಈ ಹುಳುಗಳು ಹಸಿರು ಬಣ್ಣದಿಂದ ಕೂಡಿದ್ದು ತಲೆಯ ಮೇಲೆ ಚಿಕ್ಕದಾದ ಕೊಂಬುನ್ನು ಹೊಂದಿವೆ. ಲಾರ್ವಾವಸ್ಥೆಯಿಂದ ಹೆಸರು ಗಿಡದ ಎಲೆಯನ್ನು ತಿನ್ನುತ್ತಾ ಬೆಳವಣಿಗೆಯಾಗುತ್ತವೆ. ಇವು ಹಸಿರು ಬಣ್ಣದಿಂದ ಕೂಡಿದ್ದು ಎಲೆಗಳ ಮಧ್ಯೆಯಿದ್ದರೂ ಅವುಗಳ ಇರುವಿಕೆ ತಿಳಿಯುವುದಿಲ್ಲ. ಎಲೆಗಳ ಕೆಳಭಾಗದಲ್ಲಿ ಇರುವ ಈ ಕೀಟ ಎಲೆಯನ್ನು ಒಂದು ಕಡೆಯಿಂದ ತಿನ್ನುತ್ತಾ ಸಾಗಿ ನಂತರ ಚಿಗುರು, ಹೂ, ಕಾಯಿಯನ್ನು ತಿಂದು ಗಿಡವನ್ನು ಸಂಪೂರ್ಣ ನಾಶ ಮಾಡುತ್ತದೆ.
ಈ ಹುಳುಗಳು ಸಾಮಾನ್ಯವಾಗಿ ಹೆಸರು, ಎಳ್ಳು, ಉದ್ದು ಬೆಳೆಗಳಲ್ಲಿ ಕಾಣಿಸುತ್ತಿದ್ದು ಕಾಂಡ ಸಮೇತ ಗಿಡಗಳನ್ನು ಭಕ್ಷಿಸುತ್ತಾ ಸಂಪೂರ್ಣ ಬೆಳೆ ನಾಶಪಡಿಸುತ್ತವೆ. ಹುಳುಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಲ್ಯಾನೆಟ್, ಕ್ಲೋರೋಪೈರಿಫಾಸ್ ಅಥವಾ ಕ್ವಿನಾಲ್‌ಫಾಸ್ 20 ಎಂ.ಎಲ್ ಔಷಧಿಯನ್ನು 10 ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದರಿಂದ ಈ ಕೀಟಬಾಧೆಯನ್ನು ಹತೋಟಿಗೆ ತರಬಹುದು. ಮುಂಚಿತವಾಗಿ ಔಷಧಿ ಸಿಂಪರಣೆ ಮಾಡಿದ್ದ ಪಕ್ಷದಲ್ಲಿ ಈ ಹುಳುಗಳನ್ನು ನಾಶಪಡಿಸಬಹುದಾಗಿತ್ತು. ಹುಳುಗಳು ಪ್ರೌಢಾವಸ್ಥೆ ತಲುಪಿರುವುದರಿಂದ ಸ್ಪಲ್ಪಮಟ್ಟಿಗೆ ಹತೋಟಿಗೆ ತರಬಹುದಷ್ಟೆ ಎನ್ನುತ್ತಾರೆ ಇಲ್ಲಿನ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು.


ಡಿ.ಆರ್.ನರೇಂದ್ರಬಾಬು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.