ವರ್ತಮಾನದ ತಲ್ಲಣ ಪರಿಹಾರವಾದರೆ ಸುಸ್ಥಿರ ಸಮಾಜ
ತುಮಕೂರು: ವರ್ತಮಾನದ ತಲ್ಲಣಗಳು ಪರಿಹಾರವಾದರೆ ಮಾತ್ರ ಸುಸ್ಥಿರ ಸಮಾಜ ಸಾಧ್ಯ ಎಂದು ಹರಿಕಥಾ ವಿದ್ವಾನ್ ಕಲಾಶ್ರೀ ಡಾ. ಲಕ್ಷ್ಮಣದಾಸ್ ಪ್ರತಿಪಾದಿಸಿದರು.
ಅವರು ತುಮಕೂರಿನ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಏರ್ಪಾಟಾಗಿದ್ದ 4 ನೇ ತುಮಕೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನನಾಯಕರಾಡುವ ಮಾತುಗಳು, ನೀಡುವ ಉಪದೇಶಗಳು ಬರೀ ಕಳೆದುಹೋದ ಕಾಲವನ್ನು ನೆನಪಿಸುವ ಹಾಗೂ ಭವಿಷ್ಯದ ಭರವಸೆಯ ಪೊಳ್ಳು ಆಶ್ವಾಸನೆಗಳಾಗದೆ, ವರ್ತಮಾನದ ತಲ್ಲಣಗಳನ್ನು, ಸಮಸ್ಯೆಗಳನ್ನು ಪರಿಹರಿಸುವ ಮಾರ್ಗೋಪಾಯಗಳಾಗಿ ಪರಿವರ್ತಿತವಾದರೆ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಲಕ್ಷ್ಮಣದಾಸ್ ಅಭಿಪ್ರಾಯಪಟ್ಟರು.
ಸರ್ವಾಂಗೀಣ ಅಭಿವೃದ್ಧಿಗೆ ಸಾಮಾಜಿಕ ನ್ಯಾಯದ ಅನುಪಾಲನೆ ಬಹುಮುಖ್ಯ. ಸಮಬಾಳು, ಸಮಪಾಲು ಈ ತತ್ವಗಳ ಅನುಸರಣೆ ಅನುಸಂಧಾನವಾಗುತ್ತಿರಬೇಕು. ಅಕ್ಷರವಂಚಿತರ, ದಲಿತರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಬದುಕು ಹಸನಾಗುವಂತಹ, ಹೆಚ್ಚಾಗಿ ಆರ್ಥಿಕ ಸ್ವಾವಲಂಬನೆಯ ಜತೆಗೆ ಸಾಂಸ್ಕೃತಿಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರನ್ನು ಮುಖ್ಯವಾಹಿನಿಗೆ ತರುವ ಮಹತ್ವದ ಯೋಜನೆಗಳು
ಕಾರ್ಯಗತವಾಗಬೇಕು. ಮೂಢನಂಬಿಕೆ, ಕಂದಾಚಾರಗಳನ್ನು ಹೊರಗಟ್ಟಿ ರಾಷ್ಟ್ರಕವಿ ಕುವೆಂಪು ಸಾರಿದಂತೆ ವಿಜ್ಞಾನದೀವಿಗೆ ಪ್ರಜ್ವಲಿಸಬೇಕು. ಮನುಜಮತ ವಿಶ್ವಪಥ ಅನ್ನುವ ಕವಿವಾಣಿ ಹಾಗೆಯೇ ಅನಿಕೇತನ ಪ್ರಜ್ಞೆಯೂ ಬರೀ ಸಂದೇಶವಾಗದೆ ಆದೇಶವಾಗಬೇಕು ಎಂದರು.
ಸುಧಾರಿಸಿಲ್ಲ: ತಾಂತ್ರಿಕತೆಯ ನಾಗಾಲೋಟದಲ್ಲಿ ಜಾಗತೀಕರಣದ ಈ ಹೊತ್ತಿನಲ್ಲಿ ತುಮಕೂರು ತಾಲೂಕು ಎದುರಿಸುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ರೂಪಿಸುವಲ್ಲಿ ನಾವೆಷ್ಟು ಪ್ರಾಮಾಣಿಕರಾಗಿದ್ದೇವೆ.
ನಾಲ್ಕು ದಶಕದ ಹಿಂದೆ ಇದ್ದು ತುಮಕೂರಿಗೂ, ಈಗಿನ ತುಮಕೂರಿಗೂ ಉಂಟಾಗಿರುವ ಬದಲಾವಣೆಯನ್ನು ಗಮನಿಸಿದಾಗ ನಮ್ಮ ತಾಲೂಕಿನ ಚಿತ್ರಣ ಅಷ್ಟೇನೂ ಸುಧಾರಿಸಿಲ್ಲ. ಶಿಕ್ಷಣದಲ್ಲಿನ ಅಸಮಾನತೆ, ಖಾಸಗಿ ಶಾಲೆಗಳು ಹಾಗೂ ಸರ್ಕಾರಿ ಶಾಲೆಗಳ ನಡುವಿನ ಅಂತರ, ಶಿಕ್ಷಣದ ಗುಣಮಟ್ಟ ಇವುಗಳಲ್ಲಿ ಏಕತೆಯೆನ್ನುವುದು ದೂರಾಗಿದೆ. 1 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕಿದೆ. ಇಂಗ್ಲಿಷ್ ಭಾಷೆಯ ವ್ಯಾಪ್ತಿಯ ಪರಿಣಾಮ ಮತ್ತೊಂದು ರೀತಿಯಲ್ಲಿ ವಸಾಹತುಗೆ ನಾಂದಿಯಾಗುತ್ತಿದೆಯೇನೋ ಎಂಬ ಅನುಮಾನ ಆವರಿಸುತ್ತಿರುವ ಇಂದಿನ ದಿನಗಳಲ್ಲಿ ಕನ್ನಡ ಭಾಷೆಯ ದೇಸಿ ಜ್ಞಾನ ಸಂಪತ್ತನ್ನು ಉಳಿಸಿ ಪೋಷಿಸಬೇಕಾದ ತುರ್ತು ಇಂದಿನದಾಗಿದೆ ಎಂದರು.
ಅಮಾನಿಕೆರೆಗೆ ನೀರಿಲ್ಲ: ತುಮಕೂರು ನಗರಸಭೆ ಮಹಾನಗರಪಾಲಿಕೆಯಾಗಿದೆ. ಸುತ್ತಮುತ್ತಲ ಹಳ್ಳಿಗಳನ್ನೊಳಗೊಂಡಂತೆ ಶುದ್ಧ ಕುಡಿಯುವ ನೀರು, ರಸ್ತೆಗಳು, ಪಾರ್ಕ್ಗಳು, ಇವುಗಳೆಲ್ಲದರದ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ಬಹುಕೋಟಿ ರು.ವೆಚ್ಚದಲ್ಲಿ ನಿರ್ಮಾಣವಾಗಿರುವ ಅಮಾನಿಕೆರೆಗೆ ಹೇಮಾವತಿ ನೀರು ತುಂಬಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ರಮ್ಯ ತಾಣವಾಗಬೇಕಿದ್ದ ಅಮಾನಿಕೆರೆ ಇನ್ನೂ ಖಾಲಿಯಾಗಿಯೇ ಇದೆ. ಸ್ಲಂ ನಿವಾಸಿಗಳ ಬದುಕು ಹಸನಾಗಲು ತುರ್ತು ಕ್ರಮ ಕೈಗೊಳ್ಳಬೇಕು. ಮಹಿಳೆಯರ ಸುರಕ್ಷತೆ ಬಗ್ಗೆ ಎಚ್ಚರವಹಿಸಬೇಕಾದ ತುರ್ತು ಇಂದು ಅತ್ಯಗತ್ಯವಾಗಿದೆ ಎಂದರು.
ಇಚ್ಛಾಶಕ್ತಿ ಅತ್ಯಗತ್ಯ: ರಸ್ತೆ ವಿಸ್ತರಣೆ ಸಮಯದಲ್ಲಿ ಹಾಳುಬಿದ್ದಿರುವ ನಗರದ ರಸ್ತೆಗಳನ್ನು ಸರಿಪಡಿಸುವ ಕಡೆಗೆ ಮಹಾನಗರಪಾಲಿಕೆ ಹಾಗೂ ಜಿಲ್ಲಾಡಳಿತ ಆಸ್ಥೆ ವಹಿಸಬೇಕು. ರಾಷ್ಟ್ರೀಕೃತ ಬ್ಯಾಂಕ್ಗಳು ಹಾಗೂ ಇತರೆ ಬ್ಯಾಂಕ್ಗಳಲ್ಲಿ ಕನ್ನಡ ವ್ಯಾವಹಾರಿಕ ಭಾಷೆಯಾಗಬೇಕು. ಬೆಂಗಳೂರಿನ ಮೆಟ್ರೋ ಯೋಜನೆ ತುಮಕೂರಿಗೂ ವಿಸ್ತರಣೆಯಾಗಬೇಕು. ತುಮಕೂರು ಸುತ್ತಮುತ್ತಲಿನ ಕಾರ್ಖಾನೆಗಳಲ್ಲಿ ನಗರದ ಯುವಜನತೆಗೆ, ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ದೊರೆಯುವಂತಾಗಬೇಕು. ದಶಮಾನೋತ್ಸವ ಹೊಸ್ತಿಲಲ್ಲಿರುವ ತುಮಕೂರು ವಿವಿ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಈಗ ತಾಲೂಕಿನ ಬಿದರಕಟ್ಟೆಯಲ್ಲಿ ಕಾಯಂ ಆಗಿ ಜಾಗ ಮಂಜೂರಾಗಿದ್ದು, ಜಿಲ್ಲೆಯ ಸಾಂಸ್ಕೃತಿಕ ಭಾಗವಾಗಿ ಕಲಾತ್ಮಕವಾಗಿ ವಿಶ್ವ ವಿದ್ಯಾಲಯದ ಕಟ್ಟಡಗಳು ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುವಂತೆ ತಲೆ ಎತ್ತಿ ನಿಲ್ಲಬೇಕಿದೆ. ಅತ್ತ ಕಡೆ ಶಿಕ್ಷಣ ತಜ್ಞರು, ಜನಪ್ರತಿನಿಧಿಗಳು, ಚಿಂತಕರು ಗಮನಹರಿಸಬೇಕಿದ್ದು, ಇಚ್ಚಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಲಕ್ಷ್ಮಣದಾಸ್ ಅಭಿಪ್ರಾಯಪಟ್ಟರು.
ಇತಿಹಾಸ ಪ್ರಶಂಸೆ: ತುಮಕೂರು ಇತಿಹಾಸಕ್ಕೆ ಸಂಬಂಧಿಸಿದಂತೆ ಸಮ್ಮೇಳನಾಧ್ಯಕ್ಷ ಲಕ್ಷ್ಮಣದಾಸ್ ಸಾಹಿತ್ಯ, ಕಲೆ, ಶಿಕ್ಷಣ, ರಂಗಭೂಮಿ, ಜಾನಪದ, ಶಿಲ್ಪ, ರಾಜಕಾರಣ, ಮಠಗಳು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಮಾತನಾಡಿದರು.
ಸಮಾರಂಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಕೆಂ.ಬ ರೇಣುಕಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಆರ್. ರಾಚಪ್ಪ ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸೊಗಡು ವೆಂಕಟೇಶ್, ಕೆ. ಸಣ್ಣಹೊನ್ನಯ್ಯ ಕಂಟಲಗೆರೆ, ತು.ರಾ. ಸುಂದರರಾಜ್, ಡೇವಿಡ್, ವೈ.ಕೆ. ರಾಮರಾಜ್, ಎನ್. ನಾಗಪ್ಪ, ಸಿದ್ದಗಂಗಯ್ಯ ಹೊಲತಾಳ್, ನಿ.ರಾ. ಸದಾನಂದ, ಪ್ರೊ. ಡಿ. ಚಂದ್ರಪ್ಪ ಇತರರು ಉಪಸ್ಥಿತರಿದ್ದರು.
ನೆಲದ ಮರೆಯ ನಿಧಾನ ಕೃತಿಯನ್ನು ಪ್ರೊ. ಕೆ. ಬಿ. ಸಿದ್ದಯ್ಯ, ಆಷಾಢದ ಹಕ್ಕಿಗಳು ಕೃತಿಯನ್ನು ತುಮಕೂರು ತಹಸೀಲ್ದಾರ್ ಮಾರುತಿ ಪ್ರಸನ್ನ ಬಿಡುಗಡೆ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋ.ಮು. ಭಾಸ್ಕರಾಚಾರ್ ಉಸ್ತುವಾರಿ ಹೊತ್ತಿದ್ದರು. ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ವಹಿಸಿದ್ದರು. ಸಾಹಿತಿ ಎಂ.ಸಿ. ಲಲಿತಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 8 ಕ್ಕೆ ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ಧ್ವಜಾರೋಹಣ ನೆರವೇರಿಸಿದರು. ನಂತರ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಸಂ ಇಲಾಖೆ ಉಪನಿರ್ದೇಶಕ ಬಸವರಾಜ ಆಪಿನಕಟ್ಟೆ ಮೆರವಣಿಗೆಗೆ ಚಾಲನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

