ಸಾವಯವ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ
ಕನ್ನಡಪ್ರಭ ವಾರ್ತೆ ತುಮಕೂರು ಮಾ.2
ಇತ್ತೀಚಿನ ದಿನಗಳಲ್ಲಿ ಕೃಷಿ ಲಾಭದಾಯಕವಲ್ಲ. ಬೇಸಾಯ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಈ ಪ್ರಕ್ರಿಯೆ ಹೀಗೇ ಮುಂದುವರೆದರೆ, ಅಭಿವೃದ್ಧಿ ಶೂನ್ಯವಾಗಿ ತಿನ್ನುವ ಅನ್ನಕ್ಕೂ ತತ್ವಾರ ಬರುವ ದಿನಗಳು ದೂರ ಇಲ್ಲ ಎಂದು ಜಲಾನಯನ ಹಾಗೂ ಕೃಷಿ ಅಧಿಕಾರಿಗಳಿಗೆ ರಾಜ್ಯ ಜಲಾನಯನ ಇಲಾಖೆಯ ಆಯುಕ್ತ ಡಾ.ಶಿವಾನಂದ ಮೂರ್ತಿ ಕರೆ ನೀಡಿದರು.
ಅವರು ಶ್ರೀ ಸಿದ್ಧಗಂಗಾ ಕೃಷಿ ಮತ್ತು ಕೈಗಾರಿಕ ವಸ್ತು ಪ್ರದರ್ಶನದಲ್ಲಿ ಜಲಾನಯನ ಇಲಾಖೆಯ ಮಾದರಿಯನ್ನು ವೀಕ್ಷಿಸಿ ಮಾತನಾಡಿದರು. ಹಾಗಾಗಿ ಈಗ ಚಾಲ್ತಿಯಲ್ಲಿರುವ ಏಕ ಬೆಳೆ ಪದ್ಧತಿ ಮತ್ತು ಅತ್ಯಧಿಕ ರಾಸಾಯನಿಕಗಳ ಬಳಕೆಗಳನ್ನು ನಿಲ್ಲಿಸಿ, ರೈತಾಪಿವರ್ಗದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂತಹ ಸಮಗ್ರ ಕೃಷಿ ಪದ್ಧತಿಗಳತ್ತ
ರೈತಾಪಿವರ್ಗವನ್ನು ಪ್ರೇರೇಪಿಸಿ, ತನ್ಮೂಲಕ ರೈತರ ಬಾಳು ಹಸನಾಗುವಂತಹ ಕೆಲಸ ಮಾಡುವಂತೆ ತಿಳಿಸಿದರು.
ಪ್ರಶಂಸೆ: ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಹಾಗೂ ಅರಣ್ಯ ಇಲಾಖೆಗಳ ಪ್ರಾತ್ಯಕ್ಷಿಕೆ ಮತ್ತು ಮಳಿಗೆಗಳನ್ನು ವೀಕ್ಷಿಸಿದರು. ಜಲಾನಯನ ಇಲಾಖೆಯ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತಪಡಿಸುತ್ತಾ, ಆದಷ್ಟೂ ರೈತರ ಹೊಲಗಳಲ್ಲಿ ಮಣ್ಣು ಮತ್ತು ನೀರು ಸಂರಕ್ಷಣ ಕಾಮಗಾರಿಗಳ ಜೊತೆಯಲ್ಲಿ, ಕೃಷಿ ಅರಣ್ಯೀಕರಣ, ಹಸಿರೆಲೆ ಮತ್ತು ಕೊಟ್ಟಿಗೆ ಗೊಬ್ಬರಗಳ ಬಳಕೆಗಳಂತಹ ಸಾಂಪ್ರದಾಯಿಕ ಪದ್ಧತಿಗಳ ಪುನರುಜ್ಜೀವನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕೆಂದು ಸಲಹೆ ನೀಡಿದರು.
ಕೃಷಿಯಿಂದ ಬೇಸತ್ತು ನಗರಗಳಿಗೆ ವಲಸೆ ಹೋಗುವ ಜನರನ್ನು ತಡೆದು ಮತ್ತೊಮ್ಮೆ ಬೇಸಾಯದ ಕಡೆಗೆ ಮುಖ ಮಾಡುವಂತೆ ಮಾಡುವುದೇ ನಮ್ಮ ಗುರಿಯಗಿರಬೇಕು. ರೈತರ ಜೊತೆ ಚರ್ಚಿಸಿ ಅವರಿಗೆ ಬೇಕಾದ ಮತ್ತು ಪೂರಕವಾದ ಯೋಜನೆಗಳನ್ನು ತಯಾರಿಸಿ ಅನುಷ್ಠಾನಗೊಳಿಸಿದರೆ ಸುಸ್ಥಿರತೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಗಿಡನೆಡಿ: ಉರುವಲು, ಮೇವು ಮತ್ತು ಆರ್ಥಿಕವಾಗಿ ಪ್ರಾಮುಖ್ಯತೆಯುಳ್ಳ ಗಿಡಮರಗಳನ್ನು ನೆಡುವಂತೆ ರೈತರಿಗೆ ಮನವರಿಕೆ ಮಾಡಿಕೊಡಬೇಕಾದ ಅನಿವಾರ್ಯತೆ ಇದ್ದು, ಪರಿಸರ ಸ್ನೇಹೀ ಕೃಷಿ ಪದ್ಧತಿಗಳನ್ನು ಪರಿಚಯಿಸಿಕೊಡಬೇಕೆಂದು ಸೂಚಿಸಿದರು.
ಜಿಲ್ಲಾ ಜಲಾನಯನ ಇಲಾಖೆಗೆ ಭೇಟಿ ನೀಡಿ ಜಿಲ್ಲೆಯ ಎಲ್ಲಾ ತಾಲೂಕುಗಳ ಜಲಾನಯನ ಅಧಿಕಾರಿಗಳ ಜೊತೆ ಸಂವಾದ ಮತ್ತು ಕಚೇರಿಯ ಕಡತಗಳನ್ನು ತಪಾಸಣೆ ಮಾಡಿ ಸೂಕ್ತ ಮಾರ್ಗದರ್ಶನವನ್ನು ನೀಡಿದರು.
ಜಿಲ್ಲಾ ಜಲಾನಯನ ಅಭಿವೃಧ್ಧಿ ಅಧಿಕಾರಿಗಳಾದ ಡಾ.ಆರ್. ಪಿ. ರಾಮಯ್ಯ, ಸಹಾಯಕ ನಿರ್ದೇಶಕರಾದ ಡಾ. ಲಕ್ಷ್ಮಣ, ಡಾ.ಅಶೋಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಗಡೆ, ತೋಟಗಾರಿಕೆ ವಿಭಾಗದ ಡಾ.ರಾಜಪ್ಪನವರು, ತಾಂತ್ರಿಕ ಅಧಿಕಾರಿ ಡಾ.ಪ್ರಸಾದ್, ರೀಡ್ಸ್ ಸಂಸ್ಥೆಯ ಈಶ್ವರ್, ಮೂರ್ತಿ, ಶಂಕರ್ ಇದೇ ಸಂದರ್ಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

