ಅವಸರದ ವೇಗವೆ ಅಪಘಾತಕ್ಕೆ ಕಾರಣ: ಚಂದ್ರಶೇಖರ್
ಕ.ಪ್ರ. ವಾರ್ತೆ ಕೊರಟಗೆರೆ ಮಾ.3
ಅತಿಯಾದ ಹಾಗೂ ಅವಸರದ ವೇಗವೆ ಅಪಘಾತಕ್ಕೆ ಕಾರಣ ಎಂದು ಪೊಲೀಸ್ ಇನ್ಸ್ಪೆಕ್ಟರ್ ಕೆ.ಆರ್. ಚಂದ್ರಶೇಖರ್ ತಿಳಿಸಿದರು.
ಅವರು ಪಟ್ಟಣದಲ್ಲಿ ಫ್ರೆಂಡ್ಸ್ ಗ್ರೂಪ್ ಸೇವಾ ಸಮಿತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮತ್ತು ಜಗ್ಗೇಶ್ ಅಭಿಮಾನಿಗಳ ಸಮಾಜ ಸೇವಾ ಸಂಘ ಏರ್ಪಡಿಸಿದ್ದ ರಸ್ತೆ ಸುರಕ್ಷಾ ಸಪ್ತಾಹ ಮತ್ತು ಪಟ್ಟಣದ ರಸ್ತೆಗಳಲ್ಲಿ ಸೂಚನಾ ಫಲಕಗಳ ಅಳವಡಿಕೆ ಹಾಗೂ ಅಪಘಾತ ರಹಿತ ಹಿರಿಯ ಚಾಲಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಾಹನ ಚಲಾಯಿಸುವ ಚಾಲಕರು ಕುಡಿದು ವಾಹನ ಚಲಾಯಿಸದೆ ಎಚ್ಚರಿಕೆಯಿಂದ ರಸ್ತೆ ಸಂಚಾರಿ ನಿಯಮಗಳನ್ನು ಗಮನದಲ್ಲಿ ಇಟ್ಟುಕೊಂಡು ವಾಹನ ಚಲಾಯಿಸುವ ಮೂಲಕ ಸಾರ್ವಜನಿಕರ ಪ್ರಾಣ ರಕ್ಷಿಸುವ ಮೂಲಕ ಅಪಘಾತ ನಿಯಂತ್ರಿಸಬಹುದು. ಸಾರ್ವಜನಿಕರು ಸಂಘ ಸಂಸ್ಥೆಗಳು ಸಹಕರಿಸಿದರೆ ರಸ್ತೆ ಅಫಘಾತ ತಡೆಯಲು ಸಾಧ್ಯ ಎಂದ ಅವರು 18 ವರ್ಷದೊಳಗಿನವರು ಗೇರ್ ಉಳ್ಳ ವಾಹನ ಉಪಯೋಗಿಸದೆ 18 ರ ನಂತರ ಪರವಾನಗಿ ಪಡೆದು ವಾಹನ ಚಾಲನೆ ಮಾಡಲು ತಿಳಿಸಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸೊಗಡು ವೆಂಕಟೇಶ್ ಮಾತನಾಡಿ ಶಾಲಾ ಕಾಲೇಜುಗಳ ಪಠ್ಯ ಪುಸ್ತಕದಲ್ಲಿ ರಸ್ತೆ ಸುರಕ್ಷತೆ ಹಾಗೂ ನಿಯಮಗಳ ಬಗ್ಗೆ ಪಾಠ ಅಳವಡಿಸುವ ಮೂಲಕ ರಸ್ತೆಗಳಲ್ಲಿ ನಡೆಯುತ್ತಿರುವ ಅಪಘಾತಗಳು ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದರು.
ಮಧುಗಿರಿ ಉಪ ವಿಭಾಗದ ಎಆರ್ಟಿಓ ಬಾಲಕೃಷ್ಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ ಕೊರಟಗೆರೆ ಪಟ್ಟಣದಲ್ಲಿ ಕಿರಿದಾಗಿರುವ ರಸ್ತೆಯಲ್ಲಿ ಓಡಾಡುವ ಪಾದಚಾರಿಗಳಿಗೆ ಫುಟ್ಪಾತ್ ಇಲ್ಲದೆ ಇರುವುದೆ ಅಫಘಾತಕ್ಕೆ ಕಾರಣವಾಗಿದ್ದು ರಸ್ತೆ ಪಕ್ಕದಲ್ಲಿ ಫುಟ್ಪಾತ್ ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾದರಿ: ಸಾನಿಧ್ಯ ವಹಿಸಿದ್ದ ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ವೀರಭದ್ರಶಿವಾಚಾರ್ಯ ಸ್ವಾಮೀಜಿ ವಿವಿಧ ವಿಭಾಗದ ಅಪಘಾತ ರಹಿತ ಹಿರಿಯ ಚಾಲಕರಿಗೆ ಸನ್ಮಾನಿಸಿ ಮಾತನಾಡಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರ ಜೀವ ಉಳಿಸುವ ದೃಷ್ಟಿಯಿಂದ ಸರ್ಕಾರ ಮಾಡುವ ಕಾರ್ಯವನ್ನು ಸ್ಥಳೀಯ ಸಂಘ ಸಂಸ್ಥೆಗಳು ರಸ್ತೆಯಲ್ಲಿ ಸಂಚಾರಿ ನಿಯಮ ಸೂಚನಾ ಫಲಕಗಳನ್ನು ಅಳವಡಿಸಿ ಇತರ ಸಂಘಗಳಿಗೆ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ತಹಸೀಲ್ದಾರ್ ವಹಿಸಿದ್ದರು. ಸಭೆಯಲ್ಲಿ ಲೋಕೋಪಯೋಗಿ ಎಇಇ ಜಗದೀಶ್, ತುಮಕೂರು ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕ ಮಂಜುನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗರುಗದೊಡ್ಡಿ ನಟರಾಜು, ಪ.ಪಂ.ಅಧ್ಯಕ್ಷ ಅಶ್ವತ್ಥಪ್ಪ, ಬಿಇಓ ಮಹೇಶ್, ತಾಲೂಕು ವೈದ್ಯಾಥಿಕಾರಿ ಡಾ.ಮೋಹನ್ ದಾಸ್, ಪ.ಪಂ.ಮುಖ್ಯಾಧಿಕಾರಿ ಶ್ರೀನಿವಾಸ್, ಪ.ಪಂ.ಸದಸ್ಯರಾದ ಲಾರಿ ಸಿದ್ದಪ್ಪ, ಕೆ.ಎಲ್. ಆನಂದ್, ನಾಮಿನಿ ಸದಸ್ಯ ಕೆ.ವಿ. ಪುರುಷೋತ್ತಮ್, ಕೆ.ಬಿ.ಲೋಕೇಶ್, ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಜಗ್ಗೇಶ್ ಅಭಿಮಾನಿ ಸಂಘದ ಅಧ್ಯಕ್ಷ ಮಲ್ಲಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

