ಜ್ಞಾನದ ವ್ಯಾಖ್ಯೆ ಬದಲಿಸೋಣ: ಡಾ. ಅನಂತಮೂರ್ತಿ
ತುಮಕೂರು: ಕೇವಲ ಮೆದುಳಿಗೆ ಆದ್ಯತೆ ನೀಡುತ್ತಿರುವ ಇಂದಿನ ಜ್ಞಾನದ ವ್ಯಾಖ್ಯೆಯನ್ನು ಬದಲಿಸಬೇಕಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಪ್ರತಿಪಾದಿಸಿದರು.
ಅವರು ತುಮಕೂರು ವಿವಿಯಲ್ಲಿ ಏರ್ಪಾಟಾಗಿದ್ದ ಸಾಹಿತ್ಯ, ಭಾಷೆ, ಸಂಸ್ಕೃತಿ, ರಾಜಕೀಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಞಾನ ಕೇವಲ ಮೆದುಳಿನಲ್ಲಿ ಮಾತ್ರ ಇಲ್ಲ. ದೇಹದ ಎಲ್ಲ ಅಂಗಗಳಲ್ಲೂ ಇದೆ. ಕಮ್ಮಾರ, ಚಮ್ಮಾರ, ಕುಂಬಾರ, ಅಕ್ಕಸಾಲಿಗ, ರೈತ ಸೇರಿದಂತೆ ಕುಲ ಕಸುಬುಗಳನ್ನು ಮಾಡುವ ಎಲ್ಲರೂ ಜ್ಞಾನಿಗಳೇ. ಅವರ ಜ್ಞಾನವನ್ನು ಗುರುತಿಸುವ ಕೆಲಸ ಮಾಡಬೇಕು. ಈ ಪ್ರಕ್ರಿಯೆ ಎಸ್ಎಸ್ಎಲ್ಸಿ ಹಂತದೊಳಗೆ ಆದರೆ ಉತ್ತಮ. ಕೇವಲ ಗಣಿತ, ಇಂಗ್ಲಿಷ್ ಫೇಲಾದರು ಎಂಬ ಕಾರಣಕ್ಕೇ ಅವರನ್ನು ಕೆಲಸಕ್ಕೆ ಬಾರದವರು ಎಂದು ತೀರ್ಮಾನಿಸಿ, ಅವರ ವಿಶೇಷ ಜ್ಞಾನವನ್ನು ಅಲ್ಲಗಳೆಯುವ ಕೆಲಸ ನಿರಂತರವಾಗಿ ನಡೆದುಕೊಂಡೇ ಬಂದಿದೆ. ಫೇಲಾದವರಲ್ಲಿರುವ ವಿಶೇಷ ಜ್ಞಾನವನ್ನು ಗುರುತಿಸುವ, ಆ ಮಾರ್ಗದಲ್ಲೇ ಅವರನ್ನು ಮುಂದುವರೆಯುಂತೆ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡುವಂತೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಚಿಂತಿಸುವ ತುರ್ತಿದೆ. ಒಟ್ಟಾರೆ ಸದ್ಯ ಚಾಲ್ತಿಯಲ್ಲಿರುವ ಜ್ಞಾನದ ವ್ಯಾಖ್ಯೆಯನ್ನು ಬದಲಿಸುವ ಅವಶ್ಯಕತೆಯಿದೆ ಎಂದರು.
ಮೆದುಳಿಗೆ ಸಂಬಂಧಿಸಿದ ಸಾಫ್ಟವೇರ್ ಮಾತ್ರ ಶ್ರೇಷ್ಟ. ಇಡೀ ದೇಹಕ್ಕೆ ಸಂಬಂಧಿಸಿದ ಹಾರ್ಡ್ವೇರ್ ಕನಿಷ್ಟ ಎಂಬ ಸ್ಥಿತಿ ನಿರ್ಮಿಸಲಾಗಿದೆ. ಸಾಪ್ಟ್ವೇರ್ ಸೃಷ್ಟಿಸಲು ಕೇವಲ ಮೆದುಳು ಸಾಕು. ಹಾರ್ಡ್ವೇರ್ ಸೃಷ್ಟಿಸಲು ಇಡೀ ದೇಹ ಬೇಕು. ಹಾರ್ಡ್ವೇರ್ ದೇಶವಿದ್ದಂತೆ. ಬಹಳ ಮುಖ್ಯ. ಹಾರ್ಡ್ವೇರ್ ಅಂದರೆ ದೈಹಿಕ ಶ್ರಮ ಬೇಡುವ ಎಲ್ಲ ಅಂಗಗಳನ್ನು ಕೇಂದ್ರೀಕರಿಸುವ ಕುಂಬಾರ, ಕಮ್ಮಾರ, ಚಮ್ಮಾರ ಸೇರಿದಂತೆ ಪ್ರತಿಯೊಂದು ವರ್ಗದ ಜನತೆ ಬರುತ್ತಾರೆ. ದೇಶಕ್ಕೆ ಕೊಡುಗೆ ನೀಡುತ್ತಾರೆ. ಹಾರ್ಡ್ವೇರ್ ರೂಪಿಸುವ ಪಠ್ಯಕ್ರಮ ಇಂದಿನ ತುರ್ತು. ಆಗ ನಿಜವಾದ ಜ್ಞಾನ ಮುನ್ನಲೆಗೆ ಬರುತ್ತೆ. ಆದರೆ ಇಂದು ಕೇವಲ ಸಾಪ್ಟ್ವೇರ್ ಮಾತ್ರ ಶ್ರೇಷ್ಠ, ಹಾರ್ಡ್ವೇರ್ ಕನಿಷ್ಟ ಎಂಬ ಭ್ರಮೆ ಬಿತ್ತಲಾಗಿದೆ. ಇದು ಸರಿಯಲ್ಲ. ಇಂಗ್ಲೆಂಡಿನಲ್ಲಿ ಕೈಗಾರಿಕಾ ಕ್ರಾಂತಿ ಸಂಭವಿಸಿದ ಸಂದರ್ಭದಲ್ಲಿ ಎಲ್ಲ ವರ್ಗಗಳ ಜ್ಞಾನವನ್ನು ಬಳಸಲಾಯಿತು. ಇಂದು ಇಂಡಿಯಾದಲ್ಲಿ ಸುಳ್ಳು ಪಾಂಡಿತ್ಯ ಸೃಷ್ಟಿಸಲು ಮಾಡಿರುವ ವಿದ್ಯಾಕ್ರಮದಲ್ಲಿ, ಈ ದೇಶಕ್ಕೆ ಏನೇನೂ ನೀಡಲಾಗದ ಜನತೆ ಬುದ್ದಿವಂತರೆನಿಸಿಕೊಂಡಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಅಧ್ಯಾಪಕರು ಭೂ ಉದ್ಯಮಿಗಳಾಗಬಾರದು: ವಿವಿಗೆ ಹಣ ತರುವವನೇ ಉತ್ತಮ ಕುಲಪತಿ ಎಂಬಂತಾಗಿದೆ. ಇದೊಂದು ವಿಷಾದನೀಯ ಸಂಗತಿ. ವಿಶ್ವ ವಿದ್ಯಾಲಯಗಳಿಗೆ ಒಳ್ಳೆಯ ಹೆಸರು ಬರುವುದೇ ಅಲ್ಲಿನ ಶ್ರೇಷ್ಠ ಅಧ್ಯಾಪಕ ವರ್ಗದಿಂದ ಎಂಬುದನ್ನು ಮರೆಯಲಾಗಿದೆ.
ಇತ್ತೀಚೆಗೆ ಗ್ರಂಥಾಲಯಗಳತ್ತ ಅಧ್ಯಾಪಕರು ಸುಳಿಯುತ್ತಿಲ್ಲ ಎಂಬುದು ಬೇಸರದ ವಿಷಯ ಎಂದ ಅನಂತಮೂರ್ತಿ, ವಿಶ್ವ ವಿದ್ಯಾಲಯಗಳು ವಿದ್ವಾಂಸರನ್ನು ಗುರುತಿಸುವ ಕೆಲಸ ಮಾಡಬೇಕಿದೆ. ಅಧ್ಯಾಪಕರು ಎಂದೂ ಭೂ ಉದ್ಯಮಿಗಳಾಗಬಾರದು ಎಂದು ಕಿವಿ ಮಾತು ಹೇಳಿದರು.
ಸಾಹಿತ್ಯ, ವಿಜ್ಞಾನ ಎರಡನ್ನು ವಿವಿಗಳು ಸೃಷ್ಟಿಸಬೇಕು. ತಾಂತ್ರಿಕತೆ, ತಾತ್ವಿಕತೆ ಎರಡೂ ಹುಟ್ಟಿದ ಪರಿಣಾಮ ಇಂಗ್ಲೆಂಡಿನಲ್ಲಿ ಕೈಗಾರಿಕಾ ಕ್ರಾಂತಿಯಾಯಿತು. ಆದರೆ ಭಾರತದಲ್ಲಿ ತಾತ್ವಿಕತೆ ಮಾತ್ರ ಬೆಳೆದು, ತಾಂತ್ರಿಕತೆ ಬೆಳೆಯಲಿಲ್ಲ. ಇದೊಂದು ವಿಷಾದನೀಯ ಸಂಗತಿ ಎಂದು ವಿಶ್ಲೇಷಿಸಿದರು. ಇರುವುದೆಲ್ಲವ ತಿಳಿದವರು, ಪಾಂಡಿತ್ಯವುಳ್ಳವರು ಆಚಾರ್ಯರಾದರೆ, ಇರುವುದೆಲ್ಲವನ್ನು ದಿಕ್ಕರಿಸಿ ಹೊಸದನ್ನು ಹೇಳುವವರು ಋಷಿಗಳು. ಆದರೆ ಇವರ ಸಂಖ್ಯೆ ತುಂಬಾ ವಿರಳ ಎಂದರು.
ಹೊರೆ ಅರಿವಿರದ ಗಣಿಧಣಿಗಳು: ಸೂರ್ಯಮುಳುಗದ ನಾಡಿನ (ಇಂಗ್ಲೆಂಡ್) ಹೊರೆ ಇಳಿಸಿ, ಕಣ್ತೆರೆಸಿದ ಕೀರ್ತಿ ಮಹಾತ್ಮಗಾಂಧಿಯವರಿಗೆ ಸಲ್ಲುತ್ತದೆ. ಇಂಗ್ಲೆಂಡ್ ಪಾರ್ಲಿಮೆಂಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಮಹಾತ್ಮಗಾಂಧಿ ಪ್ರತಿಮೆ ಇರಬೇಕಿತ್ತು. ಬದಲಿಗೆ ಅಮೆರಿಕಾ ಅಧ್ಯಕ್ಷ ಅಬ್ರಹಾಂ ಲಿಂಕನ್ ಪ್ರತಿಮೆ ಸ್ಥಾಪಿಸಲಾಗಿದೆ ಎಂದ ಅನಂತಮೂರ್ತಿ, ಬಳ್ಳಾರಿ ಗಣಿಧಣಿಗಳಿಗೆ ಸಂಪತ್ತು ಹೊರೆ ಎಂದು ಅನಿಸಲೇ ಇಲ್ಲ ಮಾರ್ಮಿಕವಾಗಿ ನುಡಿದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ಅಮೀನ್ ಮಟ್ಟು, ಕುಲಪತಿ ಡಾ.ಎ.ಎಚ್. ರಾಜಾಸಾಬ್, ಡಾ.ನಿತ್ಯಾನಂದಶೆಟ್ಟಿ, ಪರೀಕ್ಷಾಂಗ ಕುಲಸಚಿವರು ಇತರರು ಉಪಸ್ಥಿತರಿದ್ದರು. ಇದೇ ವೇಳೆ ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿ ಆಯ್ದ ಭಾಗ ಹಾಗೂ ಅವರ ಕವಿತೆಗಳನ್ನು ವಿವಿ ಅಧ್ಯಾಪಕರು ವಾಚಿಸಿದರು.
ರಾಜ್ಯಪಾಲರಿಗೆ ವಿಧೇಯನಾಗುವ ಅವಶ್ಯಕತೆಯಿಲ್ಲ: ಡಾ. ಯು.ಆರ್.
20 ನೇ ಶತಮಾನದಲ್ಲಿ ಪ್ರಮುಖವಾಗಿ ಸಮಾನತೆಯ ಹಸಿವು, ವಿಧೇಯತೆಯ ಹಸಿವುಗಳು ಕಂಡು ಬಂದವು. ಬಸವಣ್ಣನವರು ತಮ್ಮ ವಚನದಲ್ಲಿ ಎನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲ ಎಂದು ಹೇಳುವ ಮೂಲಕ ಒಂದು ಇನ್ನೊಂದನ್ನು ಹೊಡೆದು ಹಾಕುವಂತೆ ಮಾಡಿದರು. ಇದು ಪ್ರಜಾಪ್ರಭುತ್ವ ಮಾದರಿಗೆ ಅತ್ಯುತ್ತಮ ಉದಾಹರಣೆ. ಆದರೆ ಸರ್ವಾಧಿಕಾರಿಗೆ ವಿಧೇಯತೆ ಗೊತ್ತಿಲ್ಲ. ಏಕೆಂದರೆ ತನಗಿಂತ ಮೇಲೆ ಇನ್ನಾರು ಇಲ್ಲ ಎಂದು ಸರ್ವಾಧಿಕಾರಿಗಳು ಭ್ರಮಿಸಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ವಿಧೇಯತೆಗೆ ತನ್ನದೇ ಆದ ಅರ್ಥವಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ವಿಧೇಯತೆಯ ಅರಿವಿರದ ಕರ್ನಾಟಕದ ರಾಜ್ಯಪಾಲ ಹೆಚ್.ಆರ್. ಭಾರದ್ವಾಜ್ ತಮ್ಮ ವೈಯಕ್ತಿಕ ಕಾಯಿಲೆಯ ಬಗ್ಗೆ ಕೂಡ ಬೇಕಾ ಬಿಟ್ಟಿಯಾಗಿ ಮಾತನಾಡುತ್ತಾರೆ. ಹೀಗಾಗಿ ಅವರಿಗೆ ವಿಧೇಯನಾಗುವ ಅವಶ್ಯಕತೆ ತಮಗಿಲ್ಲ. ರಾಜ್ಯಪಾಲರಿಗೆ ವಿಧೇಯನಾಗಿರುವುದರಿಂದ ಹೊರ ಬಂದಿದ್ದೇನೆ ಎಂದು ಅನಂತಮೂರ್ತಿ ಮಾರ್ಮಿಕವಾಗಿ ಅನಂತಮೂರ್ತಿ ನುಡಿದರು.
ಜ್ಞಾನ ಎಲ್ಲೆಡೆ ಪೂಜನೀಯವಲ್ಲ
ಜ್ಞಾನ ಎಲ್ಲೆಡೆ ಪೂಜನೀಯ ಎಂದು ಹೇಳಲಾಗುತ್ತದೆ. ಆದರೆ ಇದು ಸರಿಯಲ್ಲ. ಭಾರತದಂತಹ ದೇಶದಲ್ಲಿ ಪೂಜನೀಯ ಅಂತ ಗುರುತಿಸಲು ವಯಸ್ಸಾಗಿರಬೇಕು. ಇನ್ನು ಜ್ಞಾನ-ವಿಜ್ಞಾನ-ತತ್ವಜ್ಞಾನದಲ್ಲಿ ಹೆಸರು ಮಾಡಿ, ಜಗತ್ತಿಗೆ ಮಾರ್ಗದರ್ಶನ ಮಾಡಿದ ಗ್ರೀಕ್ ದೇಶದಲ್ಲೂ ತತ್ವಜ್ಞಾನಿ, ವಿದ್ವಾಂಸ ಸಾಕಟ್ರಿಸ್ನಿಗೆ ವಿಷ ಕುಡಿಸಲಾಯಿತು. ಹೀಗಾಗಿ ಜ್ಞಾನ ಎಲ್ಲೆಡೆ ಪೂಜನೀಯ ಅಲ್ಲ ಎಂಬುದು ಸಾಬೀತಾಗಿದೆ ಎಂದು ಮಾರ್ಮಿಕವಾಗಿ ನುಡಿದರು. 20 ನೇ ಶತಮಾನದ ಹಸಿವು: 20 ನೇ ಶತಮಾನದಲ್ಲಿ ಎರಡು ರೀತಿಯ ಹಸಿವುಗಳಿವೆ. ಒಂದು ಸಮಾನತೆಯ ಹಸಿವು. ಇನ್ನೊಂದು ವಿಧೇಯತೆಯ ಹಸಿವು. ಸಮಾನತೆ, ವಿಧೇಯತೆ ಹಸಿವಿನ ಹಿನ್ನೆಲೆಯಲ್ಲಿ ಬಸವತತ್ವ ಬಹಳ ಮುಖ್ಯ ಬಸವಣ್ಣ ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಹೇಳುವ ಮೂಲಕ ಸಮಾನತೆಯ ಹಸಿವಿಗೆ ದೊಡ್ಡ, ಶ್ರೇಷ್ಠ ವ್ಯಾಖ್ಯಾನ ನೀಡಿದ. ಪ್ರಜಾಪ್ರಭುತ್ವಕ್ಕೆ ಮಾದರಿಯಾದ. ಆದರೆ ಸರ್ವಾಧಿಕಾರಿ ದೇಶಗಳಲ್ಲಿ ಸಮಾನತೆಯೂ ಇರಲ್ಲ. ವಿಧೇಯತೆ ಇದ್ದರೂ ಅದು ತೋರಿಕೆಗಷ್ಟೇ. ಒಳಗೊಳಗೇ ಬೈದುಕೊಳ್ಳುತ್ತಾ ಕಾಲದೂಡಿರುವುದು, ದೂಡುತ್ತಿರುವುದು ಜಗಜ್ಜಾಹೀರಿನ ಸಂಗತಿ. ಇನ್ನು ಸರ್ವಾಧಿಕಾರಿ ಯಾರಿಗೂ ವಿಧೇಯನಾಗಿರಲ್ಲ. ಸರ್ವಾಧಿಕಾರಿ ದೇಶಗಳಲ್ಲಿ ಸರ್ವಾಧಿಕಾರಿಗಿಂತ ಮೇಲೆ ಯಾರೂ ಇರಲು ಸಾಧ್ಯವಿಲ್ಲ. ಅಲ್ಲಿ ವಿಧೇಯತೆಗೆ ಅರ್ಥವಿಲ್ಲ ಎಂದು ಅನಂತಮೂರ್ತಿ ವಿಶ್ಲೇಷಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

