ತುಮಕೂರು

ಗುಬ್ಬಿ ಪೊಲೀಸರಿಂದ ಸಾರ್ವಜನಿಕ ಸಭೆ

Published On :

ಗುಬ್ಬಿ: ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ತಿರುಗುವ ಅಪರಿಚಿತರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದು ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ ತಕ್ಷಣವೇ ಠಾಣೆಗೆ ಮಾಹಿತಿ ನೀಡುವಂತೆ ಗುಬ್ಬಿ ಪೊಲೀಸರು ವಾರ್ಡ್ ಸಭೆ ನಡೆಸುವ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದರು. ಪಟ್ಟಣದ 17 ವಾರ್ಡ್‌ಗಳಲ್ಲಿ ಸಭೆಗಳನ್ನು ನಡೆಸಿದ ಪೊಲೀಸರು ಕಳವು ಪ್ರಕರಣಗಳು ಹೆಚ್ಚಾಗಲು ಕಾರಣಗಳ ಬಗ್ಗೆ ಮಾಹಿತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ಬಗ್ಗೆ ಸಿಪಿಐ ಕುಮಾರಪ್ಪ ಮಾರ್ಗದರ್ಶನದಂತೆ ತಿಳಿಸಿದರು. ಭಿಕ್ಷಾಟನೆ, ಭವಿಷ್ಯ ಹೇಳುವ ಹಾಗೂ ಒಡವೆಗಳಿಗೆ ಪಾಲೀಷ್ ಮಾಡುವ ನೆಪದಲ್ಲಿ ತಿರುಗಾಡುವ ವ್ಯಕ್ತಿಗಳ ಬಗ್ಗೆ ಗಮನ ಇಡಬೇಕಿದೆ. ಅಂತಹವರ ಬಗ್ಗೆ ಎಚ್ಚರಿಕೆ ವಹಿಸಲು ತಿಳಿಸಿದರು. ವಾರ್ಷಿಕ ಜಾತ್ರಾ ಮಹೋತ್ಸವಗಳು ತಾಲೂಕಿನಲ್ಲಿ ಆರಂಭವಾಗಿದ್ದು, ಇಂತಹ ಸಂದರ್ಭವನ್ನು ಬಳಸಿಕೊಳ್ಳುವ  ಕಳ್ಳರು ಚಿನ್ನಾಭರಣ ಕದಿಯಲು ಮುಂದಾಗುತ್ತಾರೆ. ಜಾತ್ರೆಯಲ್ಲಿ ಕಿಕ್ಕಿರಿದ ಜನರ ಮಧ್ಯೆ ಕಿಸೆ ಕಳ್ಳರ ಕಾಟದ ಬಗ್ಗೆ ಎಚ್ಚರಿಕೆ ವಹಿಸಲು ತಿಳಿಸಿದ ಅವರು ಅಪರಿಚಿತರ ಬಗ್ಗೆ ಅನುಮಾನ ಬಂದಲ್ಲಿ ಕೂಡಲೇ ಪೋಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಸಬಲೀಕರಣಕ್ಕಾಗಿ ಉದ್ಯಮ ವಿಶೇಷ ಉಪನ್ಯಾಸ ಇಂದು
ಹುಳಿಯಾರು:  ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಹೋಬಳಿಯ ಯಗಚಿಹಳ್ಳಿಯಲ್ಲಿ ನಡೆಯುತ್ತಿರುವ ಸ್ವಯಂಸೇವಾ ಶಿಬಿರದಲ್ಲಿಂದು ಸೋಮವಾರ ರಾಜ್ಯ ತೆಂಗಿನನಾರು ಉತ್ಪಾದಕರ ಸಂಘದ ಉಪಾಧ್ಯಕ್ಷ ಹುಳಿಯಾರಿನ ಎಲ್.ಆರ್. ಚಂದ್ರಶೇಖರ್ ಅವರು ಸಬಲೀಕರಣಕ್ಕಾಗಿ ಉದ್ಯಮ  ವಿಷಯ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ.  ಉಪನ್ಯಾಸಕ ಉಮೇಶ್ ಅಧ್ಯಕ್ಷತೆ ವಹಿಸಲಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರೋಹಿತಾಕ್ಷ ಗ್ರಾಮದ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಸಂಸ್ಥೆಯ ಯೋಜನೆಗಳ ಪಾತ್ರದ ಬಗ್ಗೆ ತಿಳಿಸುವರು. ಹಸಿರುಸೇನೆ ಸಂಚಾಲಕ ಕೆಂಕೆರೆ ಸತೀಶ್, ಧರ್ಮಸ್ಥಳ ಸಂಸ್ಥೆಯ ಅನಿಲ್, ಮತ್ತಿತರರು ಆಗಮಿಸಲಿದ್ದಾರೆ.


ನಗರ್ತ ವಧು-ವರರ ಸಂಪರ್ಕ ಸಭೆ
ಹೊಸಕೋಟೆ: ತಾಲೂಕು ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಸಂಘ, ನಗರ್ತ ಮಹಿಳಾ ಸಂಘ ಹಾಗೂ ವಿಜಯಪುರದ ನಗರ್ತ ವಧು-ವರರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಮಾ.23ರ ಭಾನುವಾರ ತಾಲೂಕಿನ ಸರಕಾರ್ ಗುಟ್ಟಹಳ್ಳಿಯ ಜ್ಯೋತಿ ಶಾಲೆ ಆವರಣದಲ್ಲಿ ನಗರ್ತ ವಧು-ವರರ ಸಂಪರ್ಕ ಸಭೆ ಏರ್ಪಡಿಸಲಾಗಿದೆ.ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪಟ್ಟಣದ ಹಳೆ ಬಸ್ ಸ್ಟಾಂಡ್ ಹಾಗೂ ವಿಶ್ವೇಶ್ವರಯ್ಯ ಬಡಾವಣೆಯ ಅಯ್ಯಪ್ಪಸ್ವಾಮಿ ದೇವಾಲಯದ ಬಳಿಯಿಂದ ಉಚಿತ ವಾಹನ ಸೌಲಭ್ಯ ಕಲ್ಪಿಸಲಾಗಿದೆ.ಹೆಚ್ಚಿನ ವಿವರಗಳಿಗೆ ದೂ.9880201339 ಸಂಪರ್ಕಿಸ ಬಹುದಾಗಿದೆ.

ಕುಂಬಾರರ ಸಂಘಕ್ಕೆ ಪದಾಧಿಕಾರಿಗಳು
ದೊಡ್ಡಬಳ್ಳಾಪುರ:ತಾಲೂಕು ಸರ್ವಜ್ಞ ಕುಂಬಾರರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ವೆಂಕಟಾಚಲಯ್ಯ, ಅಧ್ಯಕ್ಷರಾಗಿ ಪಿ.ಜಯರಾಮಯ್ಯ, ಉಪಾಧ್ಯಕ್ಷರಾಗಿ ಎಸ್.ಚೌಡಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ನಾಗರಾಜ್, ಖಜಾಂಚಿಯಾಗಿ ಜಿ.ರಾಮಮೂರ್ತಿ, ಸಂಘಟನಾ ಕಾರ್ಯದರ್ಶಿಯಾಗಿ ಜಿ.ಚಂದ್ರಶೇಖರ್, ಸಹಕಾರ್ಯದರ್ಶಿಯಾಗಿ ಜಿ.ನಟರಾಜ್, ನಿರ್ದೇಶಕರಾಗಿ ಡಿ.ಆರ್.ಶಶಿಧರ್, ಆರ್.ಶ್ರೀಧರ್, ಬೈರಾಪುರ ಪುಟ್ಟಣ್ಣ, ಹೊಸಹಳ್ಳಿ ಅಮರನಾರಾಯಣ, ಕಂಟನಕುಂಟೆಯ ಪಾಪಣ್ಣ, ಎಚ್.ಪ್ರಮೀಳಾ, ಗೀತಾ ಆಯ್ಕೆಯಾಗಿದ್ದಾರೆ.

ಹೊನ್ನಗೊಂಡನಹಳ್ಳಿ: ಬೃಹತ್ ರಥೋತ್ಸವ
ತುಮಕೂರು: ಶಿರಾ ತಾಲೂಕಿನ ಹೊನ್ನಗೊಂಡನಹಳ್ಳಿ ಗೊಲ್ಲರಹಟ್ಟಿಯಲ್ಲಿ ಶ್ರೀ ಕದರಿ ನರಸಿಂಹಸ್ವಾಮಿ, ಲಕ್ಕದಾಸಗೊಂಡಸ್ವಾಮಿ ಮತ್ತು  ಈರಮುದ್ದಣ್ಣಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಾಮಿಯ ಬೃಹತ್ ರಥೋತ್ಸವ ಮಾ.10 ರಂದು ಸಂಜೆ 3 ಗಂಟೆಗೆ ನಡೆಯಲಿದೆ. ಜಾತ್ರೆಯ ಅಂಗವಾಗಿ ಕರ್ನಾಟಕ ಲಲಿತ ಕಲಾ ಸಮಿತಿಯ ನೂತನ ಸದಸ್ಯರಾದ ಸಿ.ಚಿಕ್ಕಣ್ಣ, ಜುಂಜಪ್ಪ ಸ್ವಾಮಿ ಕಾವ್ಯ ಗಾಯಕರಾದ ಕೊರಲೆ ತಿಮ್ಮಯ್ಯ, ಕರ್ನಾಟಕ ಜನಪದ ವಿಶ್ವವಿದ್ಯಾನಿಲಯದ ಸೊಬಾನೆ ಹಾಡುಗಾರ ಮತ್ತು ಜನಪದ ಕಲಾವಿದ ಮೋಹನ್ ಕುಮಾರ್, ಸೋಬಾನೆ ಗಾಯಕಿ ಶ್ರೀಮತಿ ದೊಡ್ಡಬಾಣಗೆರೆ ಮಾರಕ್ಕ ಅವರನ್ನು ಸನ್ಮಾನಿಸುವ ಸಮಾರಂಭ ದೇವಸ್ಥಾನದ ಆವರಣದಲ್ಲಿ ಸಂಜೆ 4 ಗಂಟೆಗೆ ಏರ್ಪಡಿಸಿದೆ. ಹೊನ್ನಗೊಂಡನಹಳ್ಳಿಯ ಶ್ರೀ ಕದರಿ ನರಸಿಂಹಸ್ವಾಮಿ, ಶ್ರೀ ಲಕ್ಕದಾಸಗೊಂಡಸ್ವಾಮಿ, ಶ್ರೀ ಈರಮುದ್ದಣ್ಣಸ್ವಾಮಿ ಕಟ್ಟಡ ಸಮಿತಿ, ಮೈಸೂರಿನ ಶ್ರೀ ಲಕ್ಷೀ ನರಸಿಂಹ ಚಾರಿಟಬಲ್ ಟ್ರಸ್ಟ್, ತುಮಕೂರು ಜಿಲ್ಲೆ ಮತ್ತು ಶಿರಾ ತಾಲೂಕು ಕಾಡುಗೊಲ್ಲರ ಹಿತರಕ್ಷಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಈ ಸಮಾರಂಭ ಹಮ್ಮಿಕೊಂಡಿದೆ. 0ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸಮಾರಂಭ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವರಾದ ಎಚ್.ಎಂ.ರೇವಣ್ಣ ಅವರು ಕಲಾವಿದರಿಗೆ ಸನ್ಮಾನಿಸಲಿದ್ದು, ಚಿತ್ರದುರ್ಗದ ಅಖಿಲ ಭಾರತ ಯಾದವ ಮಹಾಸಂಸ್ಥಾನದ ಶ್ರೀಕೃಷ್ಣ ಯಾದವಾನಂದ ಮಹಾಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದಾರೆ.

ಟಿಎಂಸಿ ಬ್ಯಾಂಕಿನಲ್ಲಿ ಮಹಿಳಾ ದಿನಾಚರಣೆ
ದೊಡ್ಡಬಳ್ಳಾಪುರ: ಇಲ್ಲಿನ ದಿ ಟೆಕ್ಸ್‌ಟೈಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಟಿಎಂಸಿ ಬ್ಯಾಂಕ್) ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಬ್ಯಾಂಕಿನ ಸಿಬ್ಬಂದಿಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರೇ ಇರುವುದು ಕಾರ್ಯಕ್ರಮದ ಔಚಿತ್ಯಕ್ಕೆ ಪೂರಕವಾಗಿತ್ತು. ಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮಾತನಾಡಿದ ಮಾಜಿ ನಗರಸಭಾ ಸದಸ್ಯೆ ಕೆ.ಸಿ.ಗೌರಮ್ಮ ಮತ್ತು ಬ್ಯಾಂಕಿನ ನಿರ್ದೇಶಕಿ ಡಾ.ಮಂಜುಳಾ, ಮಹಿಳೆಯರಿಗೆ ಸಮಾನತೆಯ ಹೆಸರಿನಲ್ಲಿ ವಂಚನೆಯಾಗುತ್ತಿದೆ. ಪುರುಷ ಪ್ರಧಾನ ವ್ಯವಸ್ಥೆ ಇಂದಿಗೂ ತನ್ನ ಪ್ರಾಬಲ್ಯ ಬಿಟ್ಟುಕೊಟ್ಟಿಲ್ಲ.
  ಸಂವಿಧಾನಾತ್ಮಕವಾಗಿ ಲಭ್ಯವಾಗಿರುವ ಅವಕಾಶಗಳನ್ನೂ ಪರಿಪೂರ್ಣವಾಗಿ ಮಹಿಳೆಯರಿಗೆ ನೀಡಿಲ್ಲ ಎಂದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ಮಹಿಳಾ ಸಿಬ್ಬಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಮಂಜುನಾಥ್‌ಗೆ ಗೌರವ ಸಮರ್ಪಣೆ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಆವತಿ ಗ್ರಾಮದ ಮಂಜುನಾಥ್ 60 ಸಾವಿರ ಪುಸ್ತಕಗಳನ್ನು ಸಂಗ್ರಹಿಸಿ ದೊಡ್ಡ ಪುಸ್ತಕ ಭಂಡಾರವನ್ನೇ ಸ್ಥಾಪಿಸಿದ್ದಾರೆ. ಅವರನ್ನು ಬೆಂಗಳೂರಿನ ಎ.ಎಸ್.ವಿ ನಗರ್ತ ಸಂಘದ ಹಿರಿಯ ವಿದ್ಯಾರ್ಥಿಗಳ ಸಂಘದವರು ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
 ನಗರ್ತ ಮಾತೃ ಸಂಘದ ಅಧ್ಯಕ್ಷ ಎಚ್.ಎಸ್.ಬಸವರಾಜು, ಪೊಲೀಸ್ ಅಧಿಕಾರಿ ಶಶಿಕಲಾ ಹಾಗೂ ಡಾ. ಮುನಿಚೂಡಪ್ಪ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.