ತುಮಕೂರು

ವರ್ತಕರೇ ರೈತರ ವಿರೋಧ ಒಳ್ಳೆಯದಲ್ಲ

Published On :

ತಿಪಟೂರು: ರೈತರು ತಾವು ಬೆಳೆದ ಉತ್ಪನ್ನಗಳ ಮಾರಾಟ ವೇಳೆ ಮಧ್ಯವರ್ತಿಗಳ ಕೈಗೆ ಸಿಲುಕಿ ನಷ್ಟಕ್ಕೀಡಾಗಬಾರದು ಎಂಬ ಉದ್ದೇಶ ಮತ್ತು ಕೃಷಿ ವಹಿವಾಟು ಸ್ಪರ್ಧಾತ್ಮಕವಾಗಿ ನಡೆಯುವ ಮೂಲಕ ರೈತರು ಕೃಷಿಯಲ್ಲಿ ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆನ್‌ಲೈನ್  ವ್ಯವಸ್ಥೆಯನ್ನು ಇಲ್ಲಿನ ಕೊಬ್ಬರಿ ವರ್ತಕರು ವಿರೋಧಿಸಿ ಕೊಬ್ಬರಿ ಕೊಳ್ಳುವುದನ್ನು ನಿಲ್ಲಿಸಿರುವುದು ಸಮಂಜಸವಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ಭರಿತವಾಗಿ ಹೇಳಿದರು.
 ಪಟ್ಟಣದ ಎಪಿಎಂಸಿ ಆವರಣದ ರೈತ ಭವನದಲ್ಲಿ ರೈತಸಂಘದ ಪದಾಧಿಕಾರಿಗಳು ಮತ್ತು ರೈತರನ್ನು ಉದ್ದೇಶಿಸಿ ಸಭೆಯಲ್ಲಿ ಮಾತನಾಡಿದ ಅವರು ಆನ್ ಲೈನ್ ವ್ಯವಸ್ಥೆಯಿಂದ ರೈತರು ದಲ್ಲಾಳಿ ಮತ್ತು ಕಮಿಷನ್ ಏಜೆಂಟರಿಂದ ಮುಕ್ತಿ ಹೊಂದಿರಬಹುದು. ಬಹಳ ಕಾಲದಿಂದಲೂ ವರ್ತಕರು ಮಾರುಕಟ್ಟೆಯಲ್ಲಿ ರೈತರನ್ನು ಒಂದಲ್ಲ ಒಂದು ರೀತಿ ನಿರಂತರವಾಗಿ ಶೋಷಣೆ ಮಾಡಿಕೊಂಡು ಬರುತ್ತಿದ್ದು, ಈಗ ಜಾರಿಗೆ ಬಂದಿರುವ ಆನ್‌ಲೈನ್ ಪದ್ಧತಿಯಲ್ಲಿ ಶೋಷಣೆಗೆ ಹೆಚ್ಚು ಅವಕಾಶವಿಲ್ಲದ್ದನ್ನು ವರ್ತಕರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಇವೆಲ್ಲದರಿಂದ ವರ್ತಕರು ಕಾನೂನು ಬಾಹಿರವಾಗಿ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದು, ಇದಕ್ಕೆಲ್ಲಾ ಸರ್ಕಾರ ಮತ್ತು ರೈತರು ಮಣೆಹಾಕಬಾರದು.
 ಆನ್‌ಲೈನ್ ಪದ್ಧತಿಯಲ್ಲಿ ರೈತರು ಕೊಬ್ಬರಿ ಮಾರಿದರೆ ತೊಂದರೆಯಾಗಲಿದೆ ಎಂದು ಸುಳ್ಳು ಕರಪತ್ರಗಳನ್ನು ವರ್ತಕರ ಸಂಘ ಹಂಚುತ್ತಿದ್ದು, ಇವರ ಕುತಂತ್ರಗಳಿಗೆ ಬಲಿಯಾಗಬಾರದು. ಮುಂದಿನ ಕೆಲವೇ ದಿನಗಳಲ್ಲಿ ಇದೆಲ್ಲಾ ಸರಿಹೋಗಲಿದೆ. ಸರ್ಕಾರವೇನಾದರೂ ಈ ಪದ್ಧತಿಯನ್ನು ಕೈಬಿಟ್ಟಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರರ್ತಿಳಿಸಿದರು.
 ಜಿಲ್ಲಾಧ್ಯಕ್ಷ ದೇವರಾಜು,ಎಪಿಎಂಸಿ ಮಾಜಿ ಅಧ್ಯಕ್ಷರಾದ ಸಂಗಮೇಶ್, ದಿವಾಕರ್, ರೈತ ಮುಖಂಡರಾದ ಶಂಕರಣ್ಣ, ಸಿದ್ದರಾಮಣ್ಣ ಮಾತನಾಡಿ ತಿಪಟೂರು ಕೃಷಿ ಮಾರುಕಟ್ಟೆಗೆ ಸಾಕಷ್ಟು ಇತಿಹಾಸವಿದೆ. ವರ್ತಕರು ರೈತರು, ಅಣ್ಣ ತಮ್ಮಂದಿರಂತೆ ಇರಬೇಕು. ರೈತರ ಉತ್ಪನ್ನಗಳು ಅಂತರರಾಷ್ಟ್ರೀಯ ಮಾರುಕಟ್ಟೆ ತಲುಪಲು ಆನ್‌ಲೈ ರೈತ ಸ್ನೇಹಿಯಾಗಲಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಪ್ರಕಾಶ್ ಮಾತನಾಡಿ ವಾರ್ಷಿಕ 900ಕೋಟಿ ರು. ವಹಿವಾಟನ್ನು ತಿಪಟೂರು ಎಪಿಎಂಸಿ ಹೊಂದಿದೆ. ಆನ್‌ಲೈನ್ ವ್ಯವಸ್ಥೆಯಿಂದ ಹಿಂದೆ ಸರಿದಿರುವ ವರ್ತಕರು ಹೊಸಪದ್ಧತಿಗೆ ಒಗ್ಗಿಕೊಂಡು ರೈತರ ಮತ್ತು ತಮ್ಮ ಹಿತ ಕಾಯುವುದನ್ನು ಬಿಟ್ಟು ಇಡೀ ವ್ಯವಸ್ಥೆಯೇ ಸರಿ ಇಲ್ಲವೆಂದು ಸಾರಸಗಟಾಗಿ ವಿರೋಧಿಸಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂದರು.

ರೈತರು ಕೃಷಿಯಲ್ಲಿ ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆನ್‌ಲೈನ್  ವ್ಯವಸ್ಥೆಯನ್ನು ಇಲ್ಲಿನ ಕೊಬ್ಬರಿ ವರ್ತಕರು ವಿರೋಧಿಸಿ ಕೊಬ್ಬರಿ ಕೊಳ್ಳುವುದನ್ನು ನಿಲ್ಲಿಸಿರುವುದು ಸಮಂಜಸವಲ್ಲ
-ಕೋಡಿಹಳ್ಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.