ಆದಿಶ್ರೀ ಮಠದಲ್ಲಿ ಸರ್ವಧರ್ಮ ಸಮ್ಮೇಳನ
ನಾಗಮಂಗಲ: ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಶ್ರೀ ಮಠದ ಕೀರ್ತಿ ಮತ್ತು ಸಂಸ್ಕೃತಿಯನ್ನು ವಿಶ್ವದಲ್ಲಿ ಹಿಮ್ಮಡಿಗೊಳಿಸಿದ್ದಾರೆ ಎಂದು ಕೇಂದ್ರ ಸಚಿವ ಎಂ. ವೀರಪ್ಪಮೊಯ್ಲಿ ಹೇಳಿದರು.
ತಾಲೂಕಿನ ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಧರ್ಮ ಸಂಸ್ಕೃತಿಯಾಗಿ ಶ್ರೀಮಠವನ್ನು ಬೆಳೆಸಿ, ದುರ್ಬಲ ವರ್ಗದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಭೈರವೈಕ್ಯ ಶ್ರೀಗಳು ಚುಂಚನಗಿರಿ ಕ್ಷೇತ್ರದಲ್ಲಿ ವಿಶ್ವದಲ್ಲೆ ಹೆಸರು ಮಾಡಿದೆ ಎಂದರು.
ಧರ್ಮ ಯಾವುದೇ ಇದ್ದರೂ ಮಾನವ ಜನಾಂಗದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ವ್ಯಕ್ತವಾಗಬೇಕು. ನಮ್ಮ ನಮ್ಮಲ್ಲಿ ಉತ್ತಮ ಸಂಸ್ಕೃತಿ ನಿರ್ಮಿಸುವ ಪದ್ಧತಿಯನ್ನು ಶ್ರೀಗಳು ಬೆಳೆಸಿಕೊಂಡು ಬಂದಿದ್ದಾರೆ. ಪ್ರಕೃತಿ ಸಂಸ್ಕೃತಿಯಾಗಿ ಜನಮಾನಸದಲ್ಲಿ ಅರಿವು ಮೂಡಿಸಲು ಭೈರವೈಕ್ಯ ಶ್ರೀಗಳು ಸಂದೇಶ ನೀಡಿದ್ದಾರೆ. ಪ್ರಕೃತಿ ವಿಕೃತಿಯಾಗದೆ ಉತ್ತಮ ಸಂಸ್ಕೃತಿಯಾಗಿ ಬೆಳೆಯಲಿ ಎಂದು ಹೇಳಿದರು.
ತುಮಕೂರಿನ ಹಿರೇಮಠ ಪೀಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಕಾಲಕಾಲಕ್ಕೆ ಮಳೆಯಾಗಿ, ದೇಶದ ಭೂಮಿ ಸದಾ ಹಸಿರಾಗಿ ರೈತನ ಮನಸ್ಸು ತಂಪಾಗಿರಲೆಂಬ ಆಶಯದಿಂದ ಕೊರಡಿನಂತಿದ್ದ ಶ್ರೀಕ್ಷೇತ್ರವನ್ನು ಅಮೃತಧರೆಯಾಗಿಸಿ ಭೈರವೈಕ್ಯ ಶ್ರೀಗಳು ಪವಾಡ ಮಾಡಿದ್ದಾರೆ ಎಂದರು.
ಕ್ಷೇತ್ರದ ಪರಂಪರೆಗೆ ಬಿಜಿಎಸ್ ಮಾನಸಪುತ್ರರಾಗಿ ಕ್ಷೇತ್ರದಲ್ಲಿ ನಿರ್ಮಲಾನಂದನಾಥಸ್ವಾಮೀಜಿ ಶಕ್ತಿ ಸಂಚಾರ ಮೂಡಿಸುತ್ತಿದ್ದಾರೆ. ಹಿಂದೂ ಎಂದರೆ ಎಲ್ಲರೂ ಒಂದು ಹಾಗೂ ಬಂಧು ಎಂದರ್ಥ. ಎಲ್ಲರು ಸುಖಮಯವಾಗಿ ಯಾರೂ ಸಹ ಕ್ಷೇಶಬಾದೆಗೆ ಒಳಗಾಗಬಾರೆಂಬುದೇ ಹಿಂದೂ ಧರ್ಮದ ಸಂದೇಶ. ಹಿಂದೂ ಧರ್ಮಕ್ಕೆ ಸ್ಥಾಪಕರಿಲ್ಲ. ಸ್ಥಾಪಿಸಿದ್ದೇವೆಂದು ಹೇಳಿಕೊಳ್ಳುವವರಿಗೆ ಜಾಗವಿದೆ ಎಂದರು.
ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುನ್ಹಿ ಇಸ್ಲಾಂ ಧರ್ಮದ ಕುರಿತು ಉಪನ್ಯಾಸ ನೀಡಿದರು. ಎಚ್.ಡಿ.ಕೋಟೆ ತಾಲೂಕಿನ ಕ್ರೈಸ್ತ ಧರ್ಮಗುರು ಫಾದರ್ರಾಯಪ್ಪ ಮಾತನಾಡಿದರು. ಸಮಾರಂಭದಲ್ಲಿ ಆದಿಶ್ರೀ ನಿರ್ಮಲಾನಂದನಾಥಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಪುರುಷೋತ್ತಮಾನಂದನಾಥಸ್ವಾಮೀಜಿ, ಕಾಗಿನೆಲೆ ಕನಕಗುರುಪೀಠದ ಶಿವಾನಂದಪುರಿಸ್ವಾಮೀಜಿ, ಚಿತ್ರದುರ್ಗದ ಶಿವಲಿಂಗಸ್ವಾಮೀಜಿ, ಶಾಸಕ ವೆಂಕಟೇಶ್, ಮಾಜಿ ಶಾಸಕರಾದ ಎಲ್.ಆರ್. ಶಿವರಾಮೇಗೌಡ, ಕೆ.ಬಿ. ಚಂದ್ರಶೇಖರ್, ಶ್ರೀಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಶಂಭುನಾಥಸ್ವಾಮೀಜಿ, ಗುಣನಾಥಸ್ವಾಮೀಜಿ, ಮಂಗಳನಾಥಸ್ವಾಮೀಜಿ, ಪ್ರಾಂಶುಪಾಲ ಎ.ಟಿ. ಶಿವರಾಂ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

