ಕುಣಿಗಲ್ ಪುರಸಭೆ: ಕಣಿ ಹೇಳೋದು ಕಷ್ಟ
ಕುಣಿಗಲ್: ಲೋಕಸಭೆ ಚುನಾವಣೆಯ ಭರಾಟೆಯ ಜೊತೆಯಲ್ಲೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಕಾವು ಏರತೊಡಗಿದ್ದು, ಮೇಲ್ನೋಟಕ್ಕೆ ಜೆಡಿಎಸ್ ಬಹುಮತದ ಪ್ರಾಬಲ್ಯವಿದ್ದರೂ ಕೈ ಪಾಳೆಯವು ತನ್ನ ಕೈಚಳಕ ತೊರಲು ಸಿದ್ಧವಾಗಿದೆ. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಕುಣಿಗಲ್ ಪುರಸಭೆಗೆ ಚುನಾವಣೆಯು ಮಾರ್ಚ್ 24ನೇ ರಂದು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಗಾದಿಯ ಆಕಾಂಕ್ಷಿಗಳ ಓಡಾಟ ತೀವ್ರಗೊಂಡಿದೆ. ಪುರಸಭೆಯ 23 ಸ್ಥಾನಗಳ ಪೈಕಿ ಕಾಂಗ್ರೆಸ್-7, ಜೆಡಿಎಸ್-7, ಬಂಡಾಯ ಜೆಡಿಎಸ್-7, ಬಿಜೆಪಿ-1, ಪಕ್ಷೇತರ-1 ಸ್ಥಾನಹೊಂದಿದ್ದು,ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಿರುವ ಕಾರಣ ಸಹಜವಾಗಿ ಅಕಾಂಕ್ಷಿಗಳು ಹೆಚ್ಚಿದ್ದಾರೆ.
2013ರ ವಿಧಾನಸಭೆ ಚುನಾವಣೆ ಮುನ್ನ ನಡೆದ ಪುರಸಭೆ ಚುನಾವಣೆಯಲ್ಲಿ ಜೆಡಿಏಸ್ ಪಾಳೆಯದಲ್ಲಿ ಗೊಂದಲದ ಪರಿಣಾಮ, ಅಂದಿನ ಪುರಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳು ಎಸ್.ಪಿ. ಮುದ್ದಹನುಮೇಗೌಡರ ನೇತೃತ್ವದಲ್ಲಿ ಸ್ಪರ್ಧಿಸಿದ್ದು, ಹಾಲಿಶಾಸಕ, ಅಂದಿನ ಬಂಡಾಯ ಜೆಡಿಎಸ್ ನಾಯಕರಾಗಿದ್ದ ಡಿ.ನಾಗರಾಜಯ್ಯ ನೇತೃತ್ವದಲ್ಲಿ, ಬಹುತೇಕ ಸ್ಥಾನಗಳಲ್ಲೂ ಅಭ್ಯರ್ಥಿಗಳು ಕಣಕ್ಕಿಳಿದಿದ್ದು ತಮ್ಮದೇ ಪಕ್ಷದ ಅಭ್ಯರ್ಥಿಗಳ ವಿರುದ್ಧ ಸೆಣೆಸಾಡಿ 7 ಸ್ಥಾನಗಳಿಸುವಲ್ಲಿ ಸಫಲರಾಗಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಾಯಕರ ಬಿ ಫಾರಂ-ಸಿ ಫಾರಂ ನಾಟಕೀಯ ಬೆಳವಣಿಗೆಯಲ್ಲಿ ಎಸ್.ಪಿ. ಮುದ್ದಹನುಮೇ ಗೌಡ ಬೇಸರಗೊಂಡು ಪಕ್ಷ ತೊರೆದರೆ, ಈಗ ಅಂದಿನ ಬಂಡಾಯ ಜೆಡಿಎಸ್ ನಾಯಕರಾದ ಮಾಜಿ ಸಚಿವ ಡಿ.ನಾಗರಾಜಯ್ಯನವರೇ ಜೆಡಿಎಸ್ನಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದು,ಕಳೆದೊಂದು ವರ್ಷದಲ್ಲಿ ತಾಲೂಕು ಜೆಡಿಎಸ್ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಅಂದು ಬಂಡಾಯದ ಕಹಳೆ ಊದಿದ್ದವರೆ ಇಂದು ಅಧಿಕೃತ ನಾಯಕರಾಗಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ಗೆದ್ದಿರುವ ಪುರಸಭೆ ಸದಸ್ಯರು ಏನೊಂದು ಮಾಡದ ಸ್ಥಿತಿಯಲ್ಲಿದ್ದಾರೆ.
ಪ್ರಬಲ ಆಕಾಂಕ್ಷಿ: ಪುರಸಭೆ ಅಧ್ಯಕ್ಷಗಾದಿ ಚುನಾವಣೆಯ ಪ್ರಕ್ರಿಯೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಗೆದ್ದಿರುವ ಹರೀಶ್, ಈ.ಮಂಜು ಪ್ರಬಲ ಅಕಾಂಕ್ಷಿಗಳಾಗಿರುವಕಾರಣ, ಅಧಿಕೃತ ಅಭ್ಯರ್ಥಿಗಳಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ತಾಲೂಕು ಜೆಡಿಎಸ್ ಪಾಳೆಯದ ಮೇಲೆ ಪ್ರಬಲ ಹಿಡಿತ ಹೊಂದಿರುವ ಶಾಸಕರ ವಿರುದ್ಧ ಸೊಲ್ಲೆತ್ತದೆ, ಒಳಗೊಳಗೆ ಅಧಿಕೃತ ಅಭ್ಯರ್ಥಿಗಳು ಗೊಣಗಾಡುತ್ತಾ ಸಿಕ್ಕ ಸಿಕ್ಕವರಲ್ಲಿ ಅಸಮಾಧಾನ ತೋಡಿಕೊಳ್ಳುವುದು ಸಾಮಾನ್ಯವಾಗಿದೆ.
ಕಾಂಗ್ರೆಸ್ ಪಾಳಯದಲ್ಲಿ: ಕೆಲ ಜೆಡಿಎಸ್ ಮುಖಂಡರು, ಹತ್ತು ತಿಂಗಳ ಅಧಿಕಾರ ಹಂಚಿಕೆಯ ರಾಜೀ ಸೂತ್ರ ಮುಂದಿಟ್ಟು ಸಮಾಧಾನಗೊಳಿಸುವ ಯತ್ನಕ್ಕೆ ಮುಂದಾಗಿದ್ದು, ಇದಕ್ಕೆ ಸದಸ್ಯರಲ್ಲೆ ಅಪಸ್ವರ ಹೆಚ್ಚಾಗಿದೆ.
ಇನ್ನು ಜೆಡಿಎಸ್ ಸದಸ್ಯರೊಬ್ಬರು ಅಧಿಕೃತವಾಗಿ ಕಾಂಗ್ರೆಸ್ ಪಾಳೆಯದಲ್ಲಿ ಗುರುತಿಸಿಕೊಂಡಿದ್ದಾರೆ. ಇದು ಜೆಡಿಎಸ್ನಲ್ಲಿ ಪ್ರಾರಂಭಿಕ ಹಂತದ ತಲ್ಲಣ ಸೃಷ್ಟಿಸಿದ್ದರೆ, ಕೆಲ ಪ್ರಭಾವಿ ಸದಸ್ಯರು ಅಸಮಾಧಾನಗೊಂಡಿರುವ ಜೆಡಿಎಸ್ ಸದಸ್ಯರನ್ನು ಓಲೈಸಿ, ಅಧಿಕಾರ ಅಥವಾ ಹಣದ ಆಮಿಷ, ಜೊತೆಯಲ್ಲಿ ಯುಗಾದಿ ಹಬ್ಬದ ಕೊಡುಗೆಯಾಗಿ ತಮಗೆ ಬೆಂಬಲಿಸಿದಲ್ಲಿ ಕಾರು ಕೊಡುವ ಭರವಸೆ ನೀಡುತ್ತಿರುವುದು ಜೆಡಿಎಸ್ ಪಾಳೆಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜೆಡಿಎಸ್ ಬೆಳವಣಿಗೆಗಳನ್ನು ಗಮನಿಸುತ್ತಿರುವ ಕಾಂಗ್ರೆಸ್ನ ಸದಸ್ಯರು, ಸಂಸದರ, ಸಚಿವರೋರ್ವರ ಸಹಕಾರದಿಂದ ಪುರಸಭೆ ಅಧ್ಯಕ್ಷಗಾದಿಯ ಚುನಾವಣೆಯಲ್ಲಿ ಕೈಚಳಕ ತೋರುವ ಮೂಲಕ, ಪುರಸಭೆಯಲ್ಲಿ ಕೈಬೆಂಬಲದ ಅಧಿಕಾರಗದ್ದುಗೆ ಹಿಡಿಯಲು ಮೌನ ಹೋರಾಟ ನಡೆಸುತ್ತಿದ್ದಾರೆ.
ಒಂದೆಡೆ, ಬಹುಮತ ಹೊಂದಿರುವ ಜೆಡಿಎಸ್ ಪಾಳಯದಲ್ಲಿ ಅಸಮಾಧಾನ ಹೊಂದಿರುವವರನ್ನು ಸಮಾಧಾನಗೊಳಿಸಲು ಆ ಪಕ್ಷದ ನಾಯಕರು ಪರದಾಡುತ್ತಿದ್ದರೆ, ಕೈಪಾಳೆಯದ ಮುಖಂಡರು, ಪ್ರಭಾವಿ ಸದಸ್ಯರು ಸದ್ದಿಲ್ಲದೆ ತಮ್ಮದೇ ಆದ ತಂತ್ರಹೂಡಿ ಜೆಡಿಎಸ್ ಅಸಮಾಧಾನವನ್ನು ತಮ್ಮ ಪಕ್ಷಕ್ಕೆ ಲಾಭವನ್ನಾಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡ ತೊಡಗಿದ್ದಾರೆ. ಜೆಡಿಎಸ್ ವರಿಷ್ಠರು ಒಮ್ಮತದ ಅಧ್ಯಕ್ಷೀಯ ಅಭ್ಯರ್ಥಿಯನ್ನು ಅಖೈರುಗೊಳಿಸುವುದರ ಮೇಲೆ ಕೈಪಾಳೆಯದ ಲೆಕ್ಕಚಾರ ನಿಂತಿದ್ದು, ಲೋಕಸಭೆ ಚುನಾವಣೆಯ ಭರಾಟೆ, ಜೊತೆಯಲ್ಲೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿ ಚುನಾವಣೆ ರಂಗೇರುತ್ತಾ ಪಟ್ಟಣದ ನಾಗರಿಕರಲ್ಲಿ ಕುತೂಹಲ ಕೆರಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

