ಜನಸಾಮಾನ್ಯರ ಹಿತ ಕಾಯಲು ಸಿಪಿಐ ಸ್ಪರ್ಧೆ
ತುಮಕೂರು: ರೈತ, ಕಾರ್ಮಿಕ, ಜನ ಸಾಮಾನ್ಯರ ಹಿತ ಕಾಪಾಡಲು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಾಗಿ ಸಿಪಿಐ (ಭಾರತೀಯ ಕಮ್ಯೂನಿಸ್ಟ್ ಪಕ್ಷ ) ಅಭ್ಯರ್ಥಿ ಹಾಗೂ ಪಕ್ಷದ ಜಿಲ್ಲಾ ಖಜಾಂಚಿಯೂ ಆಗಿರುವ ವಿ. ಚಿನ್ನಪ್ಪ ತಿಳಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೂ ಅಸ್ತಿತ್ವದಲ್ಲಿರುವ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿರುವ ತಾವು ಹಂತ-ಹಂತವಾಗಿ ಮೇಲೇರಿದ್ದು, ಪ್ರಸ್ತುತ ಸಿಪಿಐ ಜಿಲ್ಲಾ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.
ಜಿಲ್ಲೆ ಹಾಗೂ ರಾಜ್ಯ ಮಂಡಳಿಗಳು ತಮ್ಮನ್ನು ಅಭ್ಯರ್ಥಿಯನ್ನಾಗಿ ಘೋಷಿಸಿವೆ. ಪಕ್ಷದ ವತಿಯಿಂದ ಬಿ ಫಾರಂ ಕೂಡ ದೊರೆತಿದ್ದು. ಇದೇ ತಿಂಗಳ 25 ರಂದು ಬೆಳಗ್ಗೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ದಶಕಗಳಿಂದ ಆಡಳಿತ ನಡೆಸುತ್ತಲೇ ಬಂದಿರುವ ಕಾಂಗ್ರೆಸ್, ಬಿಜೆಪಿ ಆಡಳಿತವನ್ನು ನೋಡಿರುವ ಜನತೆ ಭ್ರಮನಿರಸನಗೊಂಡಿದ್ದಾರೆ. ಅದೇ ರೀತಿ ಜೆಡಿಎಸ್ ಆಡಳಿತವನ್ನು ರಾಜ್ಯದಲ್ಲಿ ಈ ಹಿಂದೆ ನೋಡಿಯಾಗಿದೆ. ಈ ರಾಷ್ಟ್ರೀಯ , ಪ್ರಾಂತೀಯ ಪಕ್ಷಗಳು, ಯುಪಿಎ, ಎನ್ಡಿಎ ಒಕ್ಕೂಟಗಳು ರೈತರು, ಕಾರ್ಮಿಕರು, ಜನ ಸಾಮಾನ್ಯರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿವೆ. ಸ್ವಾತಂತ್ರ್ಯ ಬಂದು 6 ದಶಕಗಳೇ ಕಳೆದರೂ ಶುದ್ಧ ಕುಡಿಯುವ ನೀರಿಲ್ಲ. ಆಹಾರ ಭದ್ರತೆಯಿಲ್ಲ. ಉದ್ಯೋಗ ಭದ್ರತೆಯಿಲ್ಲದ ಸ್ಥಿತಿ ದೇಶದೆಲ್ಲೆಡೆ ತಾಂಡವವಾಡುತ್ತಿದೆ. ದಲಿತರು, ಕೂಲಿ ಕಾರ್ಮಿಕರು, ಅನ್ನದಾತ ರೈತನ ಗೋಳು ಕೇಳುವವರೇ ಇಲ್ಲದಂತಹ ವಾತಾವರಣ ದೇಶದಲ್ಲಿ ನಿರ್ಮಾಣವಾಗಿರುವುದು ಆತಂಕದ ಸಂಗತಿ. ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ ಮಾಡಿಕೊಂಡು ವಂಚಿಸಲಾಗುತ್ತಿದೆ. ಭಾರತ ಅತ್ಯಂತ ಕೆಟ್ಟಕಾಲ ಎದುರಿಸುತ್ತಿದ್ದು, ಇದನ್ನು ಸರಿಪಡಿಸಲು ಸಿಪಿಐ ಬದ್ಧವಾಗಿದೆ. ಜಾಗತಿಕ ಆರ್ಥಿಕ ನೀತಿಯಿಂದ ದೇಶ ಗಂಡಾಂತರ ಎದುರಿಸುತ್ತಿದ್ದು, ದೇಶಿ ಕೈಗಾರಿಕೆಗಳನ್ನು ಹಂತ-ಹಂತವಾಗಿ ಮುಚ್ಚಿಸಲಾಗುತ್ತಿದೆ. ಇದರಿಂದ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ. ಕನಿಷ್ಠ ವೇತನ ಇಲ್ಲದ, ಬೆಳೆಗೆ ಗೌರವಯುತ ಬೆಲೆ ಇಲ್ಲದ ಸ್ಥಿತಿಯಲ್ಲಿ ದೇಶದ ಕಾರ್ಮಿಕರು, ರೈತರಿದ್ದಾರೆ. ಇನ್ನು ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಹೇಳುವುದಾದರೆ ತೆಂಗು ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಕುಡಿಯುವ ನೀರಿಗಾಗಿ ಪರಮಶಿವಯ್ಯ ವರದಿ ಜಾರಿ ಅನಿವಾರ್ಯವಾಗಿದ್ದು, ಹೋರಾಟ ಮಾಡಲಾಗುವುದು ಎಂದು ಚಿನ್ನಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ಹಿರಿಯ ರಾಜ್ಯ ಮುಖಂಡರಾದ ಎನ್.ಶಿವಣ್ಣ, ಜಿಲ್ಲಾ ಮುಖಂಡರಾದ ಗಿರೀಶ್, ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ, ವಾಸು, ಶಶಿಕಾಂತ್, ರೇವಣ್ಣ, ಗೌಡರಂಗಪ್ಪ ಇತರರು ಉಪಸ್ಥಿತರಿದ್ದರು.
ಬೇಡ ಎಂದರೂ ನುಸುಳುವ ದೇವೇಗೌಡರು
ತುಮಕೂರು: ಲೋಕಸಭಾ ಚುನಾವಣೆ ಘೋಷಣೆಯಾಗುವ ಮುನ್ನ ರಾಷ್ಟ್ರಮಟ್ಟದಲ್ಲಿ ತೃತೀಯ ರಂಗದ ಮಂತ್ರ ಜಪಿಸುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಆ ವಿಷಯ ಕುರಿತು ಚಕಾರವೆತ್ತಲ್ಲ. ಇನ್ನು ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿಯವರಿಗೂ ಹೊಂದಾಣಿಕೆ ಬೇಕಿಲ್ಲ. ಅಪ್ಪ-ಮಕ್ಕಳಿಬ್ಬರೂ ಅವಕಾಶವಾದಿ ರಾಜಕೀಯ ಮಾಡುತ್ತಾ ಬಂದಿದ್ದಾರೆ. ತೃತೀಯ ರಂಗದ ಹೆಸರಿನಲ್ಲಿ ಬೇಡ-ಬೇಡ ಎಂದರೂ ದೇವೇಗೌಡರು ಹೇಗೋ ನುಸುಳಿಕೊಂಡು ಬರುತ್ತಾರೆ ಎಂದು ರಾಜ್ಯ ಎಐಟಿಯುಸಿ ಉಪಾಧ್ಯಕ್ಷ ಹಾಗೂ ರಾಜ್ಯದ ಹಿರಿಯ ಸಿಪಿಐ ಮುಖಂಡ ಎನ್. ಶಿವಣ್ಣ ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾರ್ಮಿಕವಾಗಿ ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

