ರಾಜಿಸಂಧಾನಕ್ಕೆ ಉತ್ತಮ ಪ್ರತಿಕ್ರಿಯೆ
ಕುಣಿಗಲ್: ಪಟ್ಟಣದ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿರುವ ಮೆಗಾ ಲೋಕಅದಾಲತ್ ಕಾರ್ಯಕ್ರಮದ ಅಂಗವಾಗಿ ಗುರುವಾರ ನಡೆದ ಕೆನರಾ ಬ್ಯಾಂಕ್ ಸುಸ್ತಿದಾರರ ರಾಜಿಸಂಧಾನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಋಣಮುಕ್ತರಾದ ಭಾವನೆ ಸುಸ್ತಿದಾರರಿಗಾದರೆ, ಸಾಲವಸೂಲು ಮಾಡಿದ ನೆಮ್ಮದಿ ಬ್ಯಾಂಕಿನವರಿಗಾಗಿದ್ದು, ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖ ಮಾಡಿದ ಸಾಧನೆ ವಕೀಲರಿಗಾಗುವ ಮೂಲಕ ಎಲ್ಲರಿಗೂ ಅನುಕೂಲವಾದಂತಾಗಿದೆ.
ಕಳೆದ ಜನವರಿಯಿಂದಲೂ ಮೆಗಾಲೋಕ ಅದಾಲತ್ ಕಾರ್ಯಕ್ರಮ ನಡೆಯುತ್ತಿದ್ದು ಈ ಕಾರ್ಯಕ್ರಮದಲ್ಲಿ ಈಗಾಗಲೆ ಐಒಬಿ, ಕಲ್ಪತರು ಗ್ರಾಮೀಣ ಬ್ಯಾಂಕು ಸೇರಿದಂತೆ ವಿವಿಧ ವಿಮೆ ಕಂಪನಿಗಳ ವ್ಯಾಜ್ಯಗಳನ್ನು ರಾಜಿಸಂಧಾನದ ಮೂಲಕ ಪರಿಣಾಮಕಾರಿಯಾಗಿ ಇತ್ಯರ್ಥಗೊಳಿಸಲು ಸ್ಥಳೀಯ ನ್ಯಾಯಾಧೀಶರ ಸಮ್ಮುಖದಲ್ಲಿ ಅಗತ್ಯ ಪ್ರಕ್ರಿಯೆಗಳು ನಡೆದಿದ್ದು, ಗುರುವಾರವೂ ಪಟ್ಟಣದ ಹಾಗೂ ಅಮೃತೂರು ಕೆನರಾ ಬ್ಯಾಂಕಿನ ಶಾಖೆಯ ಸುಸ್ತಿದಾರರಿಗೆ ತಿರುವಳಿ ಕಾರ್ಯಕ್ರಮದ ಜೊತೆಯಲ್ಲಿ ರಾಜಿ ಸಂಧಾನದಿಂದಾಗುವ ಲಾಭ ಮತ್ತು ಅದರ ಪರಿಣಾಮಗಳ ಬಗ್ಗೆ ಕಾನೂನು ಅರಿವು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಮರುಪಾವತಿ ಅಗತ್ಯ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶೆ ಆರ್. ಶಾರದ, ಬ್ಯಾಂಕುಗಳಿಂದ ಸಾಲ ಪಡೆಯುವುದು ತಮ್ಮ ಹಕ್ಕೆಂದು ಭಾವಿಸುವ ಗ್ರಾಹಕರು ಸಕಾಲದೊಳಗೆ ಸಾಲ ಮರುಪಾವತಿ ಮೂಲಕ ತಮ್ಮ ಜವಾಬ್ದಾರಿ ತೋರಬೇಕಿದೆ. ಗ್ರಾಹಕರು ತಮ್ಮ ಜವಾಬ್ದಾರಿ ಅರಿತು ನಡೆಯದ ಪರಿಣಾಮ ಹಲವು ಸಮಸ್ಯೆಗಳಿಗೆ ಸಿಲುಕಿ ಪರದಾಡಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾಯಾಧೀಶೆ ಜಿ.ಕೆ. ದಾಕ್ಷಾಯಿಣಿ, ಈಗಾಗಲೆ ಲೋಕ್ ಅದಾಲತ್ನ ರಾಜಿ ಸಂಧಾನ ಪ್ರಕ್ರಿಯೆಯ ಮೂಲಕ ನ್ಯಾಯಾಲಯವು ಹಲವಾರು ಪ್ರಕರಣಗಳನ್ನು ಬಗೆಹರಿಸಿ, ಗ್ರಾಹಕರು ವಿನಾಕಾರಣ ನ್ಯಾಯಾಲಯಕ್ಕೆ ಅಲೆದಾಡುವುದನ್ನು ತಪ್ಪಿಸುವ ಜೊತೆಯಲ್ಲಿ, ಅವರು ಋಣಮುಕ್ತರಾಗಿ, ನೆಮ್ಮದಿ ಹೊಂದಬಹುದಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕುಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದು ಗ್ರಾಹಕರ ಸಮಸ್ಯೆಗಳನ್ನು ರಾಜಿಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಬೇಕೆಂದರು.
ಬಗೆಹರಿದ ಪ್ರಕರಣ: ಇಂದಿನ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಸರಿಸುಮಾರು 300 ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಂಡಿದ್ದು, ಕೇವಲ ಒಂದೇ ದಿನದಲ್ಲಿ ಹಲವು ಪ್ರಕರಣಗಳು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲಾಯಿತು. ಎಪಿಪಿ ಸುರೇಖಾ ಹಿರೇಮಠ, ವಕೀಲರ ಸಂಘದ ಅಧ್ಯಕ್ಷ ದಯಾನಂದ್, ಬ್ಯಾಂಕ್ ಮ್ಯಾನೇಜರ್ಗಳಾದ ಬದರಿನಾಥ್, ಶಿವಕುಮಾರ್, ಬ್ಯಾಂಕಿನ ವಕೀಲರಾದ ಬಿ.ಕೆ. ವೆಂಕಟಕೃಷ್ಣರಾವ್, ನಿಸ್ಸಾರ ಅಹಮದ್, ಮುಮ್ತಾಜ್ ಅಹಮದ್, ಬಲರಾಮರಾಜು ಉಪಸ್ಥಿತರಿದ್ದರು. ವಕೀಲರಾದ ರಾಮಚಂದ್ರಪ್ಪ, ಚಂದ್ರಶೇಖರ, ಲೋಕೇಶ, ರಂಗನಾಥ, ರಹಮತ್ ಉಪಸ್ಥಿತರಿದ್ದರು.
ವಿವಿಧ ಬ್ಯಾಂಕುಗಳ ಗ್ರಾಹಕರು ಕಾರ್ಯಕ್ರಮದ ಸದುಪಯೋಗ ಪಡೆಯಲು ಜಮಾವಣೆಗೊಂಡಿದ್ದ ಕಾರಣ ನ್ಯಾಯಾಲಯ ಆವರಣದಲ್ಲಿ ಜನಸಂದಣಿ ಹೆಚ್ಚಾಗಿದ್ದು, ರಾಜಿಸಂಧಾನ ಪ್ರಕ್ರಿಯೆಗೆ ಇಬ್ಬರೂ ನ್ಯಾಯಾಧೀಶರು, ಬ್ಯಾಂಕಿನ ಸಿಬ್ಬಂದಿ, ಬ್ಯಾಂಕು ಹಾಗೂ ಗ್ರಾಹಕ ಪರ ವಕೀಲರು ಸತತವಾಗಿ ಕಾರ್ಯನಿರ್ವಹಿಸುವ ಮೂಲಕ 77 ಪ್ರಕರಣಗಳು ರಾಜಿ ಸಂಧಾನದ ಮೂಲಕ ಬಗೆಹರಿದಿದ್ದು ಬಾಕಿ ಪ್ರಕರಣಗಳಿಗೆ ಮುಂದಿನ ತಿಂಗಳ 10ರುಂದು ನಿಗದಿಗೊಳಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

