ತುಮಕೂರು

ಹ್ಯಾಟ್ರಿಕ್ ಜಯ ದಾಖಲಿಸುವುದೇ ಬಿಜೆಪಿ?

Published On :

 ಉಗಮ ಶ್ರೀನಿವಾಸ್
ತುಮಕೂರು: ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರಿನಲ್ಲಿ ಸತತ ಎರಡು ಜಯ ದಾಖಲಿಸಿರುವ ಬಿಜೆಪಿ ಏ. 17 ರಂದು ನಡೆಯುವ  ಚುನಾವಣೆಯಲ್ಲಿ ಗೆದ್ದು  ಹ್ಯಾಟ್ರಿಕ್ ಸಾಧಿಸಲಿದೆಯೇ?
ಈಗ ಸದ್ಯ ಕಮಲ ಪಡೆಯಲ್ಲಿ ಇಂಥದ್ದೊಂದು ಚರ್ಚೆ ನಡೆಯುತ್ತಿದೆ. ಟಿಕೆಟ್ ವಿಷಯದಲ್ಲಿ ಗೊಂದಲ ನಡೆದು ಈಗ ಹಾಲಿ ಸಂಸದ ಬಸವರಾಜು ಅವರಿಗೆ ಟಿಕೆಟ್ ನೀಡಿರುವುದು ಇತಿಹಾಸ.
8 ವಿಧಾನಸಭಾ  ಕ್ಷೇತ್ರಗಳನ್ನು ಒಳಗೊಂಡಿರುವ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಕೇವಲ ಒಂದು ಕಡೆ. ಅದು ತುಮಕೂರು ಗ್ರಾಮಾಂತರದಲ್ಲಿ. ಸುರೇಶ್‌ಗೌಡರು ಗೆದ್ದಿರುವುದು ಕೇವಲ 2 ಸಾವಿರ ಮತಗಳ ಅಂತರಿಂದ. ಉಳಿದಂತೆ ನಾಲ್ಕು ಕಡೆ  ಜೆಡಿಎಸ್ ಜಯ ದಾಖಲಿಸಿದರೆ 3 ಕಡೆ ಕಾಂಗ್ರೆಸ್ ಗೆದ್ದಿದೆ.
15 ಲಕ್ಷ ಮತದಾರರು: ತುಮಕೂರು ಜಿಲ್ಲೆಯಲ್ಲಿ ಒಟ್ಟು 15 ಲಕ್ಷ ಮತದಾರರು ಇದ್ದಾರೆ. ಇದರಲ್ಲಿ ಶೇ. 60 ರಷ್ಟು ಹಿಂದುಳಿದ ವರ್ಗದವರ ಮತಗಳೇ ಇವೆ. ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯದವರು.
ಜನಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಸಮಬಲದಲ್ಲಿಯೇ ಇದ್ದಾರೆ. ವೀರಶೈವ ಜನಾಂಗಕ್ಕೆ ಸೇರಿರುವ ಜಿ.ಎಸ್. ಬಸವರಾಜು 4 ಬಾರಿ ಸಂಸತ್ ಸದಸ್ಯರಾಗಿದ್ದಾರೆ. ಇದರಲ್ಲಿ 3 ಬಾರಿ ಕಾಂಗ್ರೆಸ್‌ನಿಂದ ಜಯಸಾಧಿಸಿದ್ದಾರೆ. ಮೂಲ ಕಾಂಗ್ರೆಸ್ಸಿಗರೇ ಆದ ಬಸವರಾಜು ಅವರಿಗೆ ಆ ಪಕ್ಷದಲ್ಲೂ ಅಭಿಮಾನಿಗಳು ಇದ್ದಾರೆ. ಇದು ಸ್ವಲ್ಪ ಮಟ್ಟಿಗೆ ನೆರವು ಬರಬಹುದು ಎಂದು ಅಂದಾಜಿಸಲಾಗಿದೆ.
20 ಸಾವಿರ ಮತಗಳ ಅಂತರ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಎಸ್. ಬಸವರಾಜು 20 ಸಾವಿರ ಮತಗಳ ಅಂತರದಿಂದ ಮುದ್ದಹನುಮೇಗೌಡರ ವಿರುದ್ಧ ಜಯ ದಾಖಲಿಸಿದ್ದರು. ಆಗ ಜೆಡಿಎಸ್ ನಲ್ಲಿದ್ದ ಮುದ್ದಹನುಮೇಗೌಡ ಈಗ ಕಾಂಗ್ರೆಸ್ ಗೆ ಬಂದಿದ್ದಾರೆ. ಕಳೆದ ಬಾರಿ ಸೋತಿದ್ದ ಮುದ್ದಹನುಮೇಗೌಡರಿಗೆ ಅನುಕಂಪ ಇದೆ. ಇದು ಜಿ.ಎಸ್. ಬಸವರಾಜು ಅವರಿಗೆ ಸ್ವಲ್ಪ ಮಟ್ಟಿನ ಹಿನ್ನೆಡೆ ಆಗಬಹುದು. ಅಲ್ಲದೇ ಇನ್ನು ಪರಿಪೂರ್ಣವಾಗಿ ಬಿಜೆಪಿಯವರು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಜಿ.ಎಸ್. ಬಸವರಾಜು ಹೇಗೆ ಕಾರ್ಯಕರ್ತರನ್ನು, ಮುಖಂಡರನ್ನು ಒಗ್ಗೂಡಿಸುತ್ತಾರೆಂಬುದು ಪ್ರಶ್ನೆ.
ಎಲ್ಲೆಲ್ಲಿ ಅನುಕೂಲ: ತಿಪಟೂರಿನಲ್ಲಿ ಅತಿ ಹೆಚ್ಚು ವೀರಶೈವ ಮತದಾರರಿದ್ದಾರೆ. ಆದರೆ ಅಲ್ಲಿರುವುದು ಕಾಂಗ್ರೆಸ್ ಎಂಎಲ್‌ಎ. ಕಳೆದ ಬಾರಿ ಈ ಕ್ಷೇತ್ರದಲ್ಲಿ 20 ಸಾವಿರಕ್ಕೂ ಹೆಚ್ಚು ಲೀಡ್ ಅನ್ನು ಬಸವರಾಜು ಪಡೆದಿದ್ದರು.
ಆದರೆ ಈ ಬಾರಿ ಅಷ್ಟು ದೊಡ್ಡ ಅಂತರದ ಲೀಡ್ ಸಿಗುವುದು ಅನುಮಾನ ಎಂಬುದು ಕಾರ್ಯಕರ್ತರ ವಲಯದಲ್ಲಿದೆ. ಇನ್ನು ಗ್ರಾಮಾಂತರ ವಿಷಯಕ್ಕೆ ಬಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸುರೇಶ್‌ಗೌಡರು ಗೆದ್ದಿದ್ದು  ಕೇವಲ 2 ಸಾವಿರ ಮತಗಳ ಅಂತರ. ಹೀಗಾಗಿ ಅಲ್ಲೂ ಕೂಡ ದೊಡ್ಡ ಲೀಡ್ ನಿರೀಕ್ಷಿಸುವುದು ಕಷ್ಟ. ಇನ್ನು ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸೊಗಡು ಶಿವಣ್ಣ ಪಡೆದದ್ದು 13 ಸಾವಿರ ಮತ. ಆದರೆ ಕೆಜೆಪಿಯಿಂದ ಸ್ಪರ್ಧಿಸಿದ್ದ ಜಿ.ಎಸ್. ಬಸವರಾಜು ಅವರ ಪುತ್ರ ಜ್ಯೋತಿ ಗಣೇಶ್ 40 ಸಾವಿರ ಮತಗಳನ್ನು ಪಡೆದಿದ್ದರು. ಹಾಗಾಗಿ ತುಮಕೂರು ಅವರಿಗೆ ಹೆಚ್ಚು ಲೀಡ್ ಕೊಡುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಮೇಲ್ನೋಟಕ್ಕೆ ತುಮಕೂರು, ಗ್ರಾಮಾಂತರ, ತಿಪಟೂರಿನಲ್ಲಿ ಬಿಜೆಪಿ ಹೆಚ್ಚು ನಂಬಿ ಕೊಂಡಿದೆ. ಹಾಗೆಯೇ ಗುಬ್ಬಿ, ಸ್ವಲ್ಪ ಪ್ರಮಾಣದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಹೆಚ್ಚಿನ ನಿರೀಕ್ಷೆ ಇದೆ.
ಮೋದಿ ಅಲೆ: ಎಲ್ಲಕ್ಕೂ ಮಿಗಿಲಾಗಿ ಕಡೇ ಗಳಿಗೆಯಲ್ಲಿ ನರೇಂದ್ರ ಮೋದಿ ಅವರ ದೊಡ್ಡ ಅಲೆ ಬೀಸುತ್ತದೆ ಎಂಬ ಆಶಾವಾದದಲ್ಲಿ ಬಿಜೆಪಿ ಇದೆ.  ಒಟ್ಟಾರೆಯಾಗಿ ಬಿಜೆಪಿಯಲ್ಲಿ ಈಗ ಒಡೆದ ಮನಸ್ಸುಗಳು ಇವೆ. ಅದೆಲ್ಲವನ್ನು ಬೆಸೆಯುವ ಕೆಲಸ ಮಾಡಬೇಕಾಗಿದೆ. ಆ ಕಾರ್ಯವನ್ನು ಮಾಡುವ ಕೆಲಸಕ್ಕೆ ಕೈ ಹಾಕುವುದಾಗಿ ಜಿ.ಎಸ್. ಬಸವರಾಜು ಈಗಾಗಲೇ ಹೇಳಿದ್ದಾರೆ. ಬಿಜೆಪಿ ಹ್ಯಾಟ್ರಿಕ್ ಗೆಲವು ಸಾಧಿಸುತ್ತದೆಯೇ ಅಥವಾ ಸೋಲುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಸುಲಭದ್ದಂತೂ ಅಲ್ಲ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.