ಕಾಂಗ್ರೆಸ್ ನೆರವಿಗೆ ಬರಲಿಲ್ಲ ರಾಜೀವ್ ಅನುಕಂಪ
ಉಗಮ ಶ್ರೀನಿವಾಸ್
ತುಮಕೂರು: ಮಾಜಿ ಪ್ರಧಾನಿ ರಾಜೀವ್ಗಾಂಧಿ ಅವರ ಸಾವಿನ ಅನುಕಂಪ ಕೂಡ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನೆರವಿಗೆ ಬಂದಿರಲಿಲ್ಲ.
ಮೇ 1991 ರಲ್ಲಿ ರಾಜೀವ್ಗಾಂಧಿ ಹಂತಕರ ಕೃತ್ಯಕ್ಕೆ ಬಲಿಯಾಗುವ ಮುನ್ನ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ಅಂದು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಜಿ.ಎಸ್. ಬಸವರಾಜು ಅವರು ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಎಸ್. ಮಲ್ಲಿಕಾರ್ಜುನಯ್ಯ ಸ್ಪರ್ಧಿಸಿದ್ದರು.
ಇನ್ನೇನು ತುಮಕೂರು ಲೋಕಸಭಾ ಕ್ಷೇತ್ರ ಚುನಾವಣೆಗೆ ಮೂರೇ ದಿನ ಬಾಕಿ ಇತ್ತು. ಅಷ್ಟರಲ್ಲಾಗಲೇ ಬಂದೆರಗಿತ್ತು ರಾಜೀವ್ ಗಾಂಧಿ ಅವರ ಸಾವು. ರಾಜೀವ್ ಗಾಂಧಿ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕದ ಚುನಾವಣೆ ಕೂಡ ಮುಂದಕ್ಕೆ ಹೋಯಿತು. ರಾಜೀವ್ಗಾಂಧಿ ನಿಧನದ ಹಿನ್ನೆಲೆಯಲ್ಲಿ ಅನುಕಂಪದ ಅಲೆ ಎದ್ದು ಕಾಂಗ್ರೆಸ್ಗೆ ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್. ಮಲ್ಲಿಕಾರ್ಜುನಯ್ಯ ಅವರು ಗೆದ್ದು ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದರು.
ಆಡಳಿತ ವಿರೋಧಿ ಅಲೆ: ರಾಜೀವ್ ಗಾಂಧಿ ನಿಧನರಾದಾಗ ಅವರ ಸಾವಿನ ಅನುಕಂಪ ಅಂದು ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಜಿ.ಎಸ್. ಬಸವರಾಜು ಅವರಿಗೆ ಬಾರದೇ ಇರುವುದಕ್ಕೆ ಮುಖ್ಯ ಕಾರಣ ಆಡಳಿತ ವಿರೋಧಿ ಅಲೆಯೂ ಪ್ರಮುಖ ಕಾರಣವಾಗಿತ್ತು.
ಜಿ.ಎಸ್. ಬಸವರಾಜು ಅವರು 1984 ಮತ್ತು 1989 ರ ಚುನಾವಣೆಯಲ್ಲಿ ಸತತವಾಗಿ ಜಯಸಾಧಿಸಿದ್ದರು. ಹೀಗಾಗಿ 1991 ರ ಚುನಾವಣೆಯಲ್ಲಿ ಮತದಾರರ ಅವರನ್ನು ಸೋಲಿಸಿದ್ದರು. 1984 ರಲ್ಲಿ ನಡೆದ
ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಸವರಾಜು ಅವರು ಶೇ. 50.99 ರೊಂದಿಗೆ 2 ಲಕ್ಷ 65 ಸಾವಿರದ 249 ಮತ ಪಡೆದು ಜೆ.ಎನ್.ಪಿ. ಪಕ್ಷದಿಂದ ಸ್ಪರ್ಧಿಸಿದ್ದ ವೈ.ಕೆ. ರಾಮಯ್ಯ ವಿರುದ್ಧ ಜಯಗಳಿಸಿದ್ದರು. ಅಂದು ವೈ.ಕೆ. ರಾಮಯ್ಯ ಅವರು ಶೇ. 45.15 ರೊಂದಿಗೆ 2ಲಕ್ಷ 34 ಸಾವಿರದ 839 ಮತ ಪಡೆದಿದ್ದರು.
2ನೇ ಬಾರಿ ಜಯ: ನಂತರ 1989 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಜಿ.ಎಸ್. ಬಸವರಾಜು ಅವರು ವೈ.ಕೆ. ರಾಮಯ್ಯ ವಿರುದ್ಧ ಎರಡನೇ ಬಾರಿ ಜಯಸಾಧಿಸಿದ್ದರು. ಅಂದಿನ ಚುನಾವಣೆಯಲ್ಲಿ ಜಿ.ಎಸ್. ಬಸವರಾಜು ಅವರು ಶೇ. 55.09 ರೊಂದಿಗೆ 3 ಲಕ್ಷ 76 ಸಾವಿರದ 878 ಮತ ಪಡೆದು ಸತತ ಎರಡನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ಅಂದಿನ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ವೈ.ಕೆ. ರಾಮಯ್ಯ ಅವರು ಜೆಪಿ ಪಕ್ಷದಿಂದ ಸ್ಪರ್ಧಿಸಿ ಶೇ. 26.37 ರೊಂದಿಗೆ 1ಲಕ್ಷ 77 ಸಾವಿರದ 740 ಮತ ಪಡೆದಿದ್ದರು. ಅಂದು ಸತತ ಎರಡು ಬಾರಿ ಆಯ್ಕೆಯಾಗಿ ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಬಸವರಾಜು ಅವರಿಗೆ ರಾಜೀವ್ ಗಾಂಧಿ ಅನುಕುಂಪ ಗೆಲವಿನ ಸಮೀಪ ಮುಟ್ಟಿಸುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ ಈ ಹಿಂದೆ ಎರಡು ಚುನಾವಣೆಯಲ್ಲಿ ಕ್ರಮವಾಗಿ ಬಿಎಲ್ಡಿ ಮತ್ತು ಜೆಎನ್ಪಿ ಪಕ್ಷದಿಂದ ಸ್ಪರ್ಧಿಸಿ ಪರಾಜಿತರಾಗಿ ಬಿಜೆಪಿಯಿಂದ 1991 ರಲ್ಲಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನಯ್ಯ ಅವರಿಗೆ ಅನುಕಂಪ ಲಭಿಸಿತು. 1991 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್. ಮಲ್ಲಿಕಾರ್ಜುನಯ್ಯ ಅವರು ಶೇ. 43.29 ರೊಂದಿಗೆ 2 ಲಕ್ಷ 55 ಸಾವಿರದ 186 ಮತ ಪಡೆದು ಲೋಕಸಭೆಗೆ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಜಿ.ಎಸ್. ಬಸವರಾಜು ಅವರು ಶೇ. 40.08 ರೊಂದಿಗೆ 2 ಲಕ್ಷ 36 ಸಾವಿರದ 269 ಮತ ಪಡೆದು ಸೋಲನ್ನು ಅನುಭವಿಸಿದರು.
ಉಪಸಭಾಪತಿ ಸ್ಥಾನ ಪಡೆದರು: 1991 ರಲ್ಲಿ ರಾಜೀವ್ ಗಾಂಧಿ ಅನುಕಂಪದ ಅಲೆಯನ್ನು ಹಿಮ್ಮೆಟ್ಟಿ ಲೋಕಸಭೆ ಪ್ರವೇಶಿಸಿದ ಎಸ್. ಮಲ್ಲಿಕಾರ್ಜುನಯ್ಯ ಅವರಿಗೆ ಬಿಜೆಪಿ ಲೋಕಸಭೆಯಲ್ಲಿ ಉಪಸಭಾಪತಿ ಸ್ಥಾನವನ್ನು ನೀಡಿತು. ಆಗ ಕಾಂಗ್ರೆಸ್ನಲ್ಲಿದ್ದ ಬಸವರಾಜು ಈ ಬಾರಿ ಬಿಜೆಪಿಯಲ್ಲಿದ್ದಾರೆ. ಕಾಂಗ್ರೆಸ್ನಿಂದ ಮುದ್ದಹನುಮೇಗೌಡ ಸ್ಪರ್ಧಿಸಿದ್ದರೆ, ಜೆಡಿಎಸ್ನಿಂದ ಕೃಷ್ಣಪ್ಪ ಕಣಕ್ಕೆ ಇಳಿದಿದ್ದಾರೆ. ಈ ಬಾರಿ ಯಾರಿಗೆ ವಿಜಯಮಾಲೆ ಒಲಿಯುತ್ತದೆ ಎಂಬುದು ಸದ್ಯದ ಕುತೂಹಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

