ಗೌಡರನ್ನು ಪ್ರಧಾನಿ ಮಾಡಿ: ಎ.ಕೃಷ್ಣಪ್ಪ
ತುರುವೇಕೆರೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗ ಅತಿ ಹೆಚ್ಚು ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಮುಂದಿನ ಪ್ರಧಾನಿ ಎಚ್.ಡಿ.ದೇವೇಗೌಡರೇ ಆಗಲಿದ್ದಾರೆ. ರಾಜಕೀಯ ಮುತ್ಸದ್ದಿ ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಯಾಗಿಸಬೇಕಾಗಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಜೆಡಿಎಸ್ ಗೆಲವು ಸಾಧಿಸಲೇ ಬೇಕು ಎಂದು ತುಮಕೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ. ಕೃಷ್ಣಪ್ಪ ಹೇಳಿದರು.
ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಯವರು ವಚನ ಭ್ರಷ್ಟರು, ಅವರಲ್ಲಿ ಅನೈತಿಕತೆ ತುಂಬಿ ಹೋಗಿದೆ. ಇನ್ನು ಕಾಂಗ್ರೆಸ್‌ನವರು ಸಮಯ ಸಾಧಕರು. ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಬಗ್ಗೆ ದೇಶದ ಜನರಲ್ಲಿ ಅಸಹ್ಯದ ಮನೋಭಾವ ಮನೆ ಮಾಡಿದೆ. ದೇಶದ ರೈತ, ಬಡ ಸಮುದಾಯದ ಹಿತ ಕಾಯುವುದು ಕೇವಲ ಜೆಡಿಎಸ್ ಮಾತ್ರ. ಈ ಬಾರಿ ದೇವೇಗೌಡರು ಪ್ರಧಾನಿಯಾದರೆ ತಾವು ಮಂತ್ರಿಯಾಗುವುದರಿಂದ ಜಿಲ್ಲೆಯ ಸಮಗ್ರ ಅಭಿವೃಧ್ಧಿಗೆ ಶ್ರಮಿಸುವುದಾಗಿ ಎ.ಕೃಷ್ಣಪ್ಪ ಹೇಳಿದರು.
ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಮಾತನಾಡಿ ನರೇಂದ್ರ ಮೋದಿಯವರ ಹವಾ ರಾಜ್ಯದಲ್ಲಿ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಬಿಜೆಪಿಯವರ ಕರ್ಮಕಾಂಡವೇ ರಾಜ್ಯದ ಜನತೆಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು. ತಾಲೂಕಿನಲ್ಲಿ ಜೆಡಿಎಸ್ ಭದ್ರವಾಗಿದೆ. ಜೆಡಿಎಸ್ ಮುಂದೆ ಯಾವುದೇ ಪಕ್ಷಗಳೂ ಇಲ್ಲ. ತಾಲೂಕಿನಲ್ಲಿ ಕನಿಷ್ಠ 30 ಸಾವಿರ ಮತಗಳಿಗೂ ಹೆಚ್ಚು ಅಂತರವನ್ನು ಕಾಯ್ದು ಕೊಳ್ಳುವ ಭರವಸೆಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ನೀಡಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಹುಲಿನಾಯ್ಕರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎ.ಬಿ. ಜಗದೀಶ್, ಶ್ರೀನಿವಾಸ್, ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್, ಸದಸ್ಯರಾದ ರಮೇಶ್ ಗೌಡ, ಮುಖಂಡರಾದ ಡಾ. ಬಿ.ನಂಜಪ್ಪ, ತಾತಯ್ಯ, ಜವರೇಗೌಡ ಮೊದಲಾದವರು ಭಾಗವಹಿಸಿದ್ದರು. ಜೆಡಿಎಸ್ ಅಧ್ಯಕ್ಷ ಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ ಗೈರು: ಸಮಾರಂಭಕ್ಕೆ ಆಗಮಿಸಬೇಕಿದ್ದ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಜೆಡಿಎಸ್‌ಗೆ ಬಂದಿದ್ದ ಹೆಚ್.ಬಿ.ನಂಜೇಗೌಡರನ್ನು ಸ್ಥಳೀಯ ಜೆಡಿಎಸ್ ಘಟಕ ಸೂಕ್ತವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ. ಇದರಿಂದ ನೊಂದಿರುವ ಹೆಚ್.ಬಿ.ನಂಜೇಗೌಡ ಬಿಜೆಪಿ ಸೇರುವರು ಎಂಬ ಗುಲ್ಲು ತಾಲ್ಲೂಕಿನಾದ್ಯಂತ ಹರಡಿದೆ. ಕಾಕತಾಳೀಯವಾಗಿ ಇಂದಿನ ಸಭೆಗೆ ನಂಜೇಗೌಡರು ಗೈರು ಹಾಜರಾಗಿದ್ದು ಹಲವಾರು ಅನುಮಾನಗಳಿಗೆ ಅವಕಾಶ ನೀಡಿದಂತಾಗಿದೆ.
ಕುಣಿದು ಕುಪ್ಪಳಿಸಿದ ಶಾಸಕ
ಕಾರ್ಯಕರ್ತರ ಸಮಾವೇಶದ ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣೆಯ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ ಕಾರ್ಯಕರ್ತರೊಂದಿಗೆ ಕುಣಿದು ಕುಪ್ಪಳಿಸಿದರು. ನಗಾರಿ ಬಡಿತಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಶಾಸಕ ಎಂ.ಟಿ.ಕೃಷ್ಣಪ್ಪ ಕಾರ್ಯಕರ್ತರೊಂದಿಗೆ ತಾವೂ ಕುಣಿಯುವ ಮೂಲಕ ಕಾರ್ಯಕರ್ತರಿಗೆ ಇನ್ನೂ ಹೆಚ್ಚು ಉತ್ಸಾಹ ತುಂಬಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

