ಕುಣಿಗಲ್ ಪುರಸಭೆಯಲ್ಲಿ ಗೆದ್ದವರು ಯಾರು?
ಕುಣಿಗಲ್: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನಡೆದ ಅಪವಿತ್ರ ಮೈತ್ರಿ ವಿಚಾರ ಈಗ ಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪುರಸಭೆಯಲ್ಲಿ ಗೆದ್ದಿರುವ ಪಕ್ಷ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಗದೆ ನಾಗರಿಕರು ಪರದಾಡುವಂತಾಗಿದೆ.
ಪುರಸಭೆಯ ಒಟ್ಟು 25 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್-7, ಜೆಡಿಎಸ್-7, ಬಂಡಾಯ ಜೆಡಿಎಸ್-7,ಬಿಜೆಪಿ-1, ಪಕ್ಷೇತರ-1, ಶಾಸಕ-1, ಸಂಸದ-1 ಸ್ಥಾನ ಹೊಂದಿದೆ.
2013ರಲ್ಲಿ ನಡೆದ ಪುರಸಭೆ ಚುವಾಣೆ ವೇಳೆ ತಾಲೂಕು ಜೆಡಿಎಸ್ನಲ್ಲಿ ಎಸ್.ಪಿ. ಮುದ್ದಹನು ಮೇಗೌಡ, ಮಾಜಿ ಸಚಿವ ಡಿ. ನಾಗರಾಜಯ್ಯ ನಾಯಕತ್ವದ ಗೊಂದಲದಿಂದಾಗಿ ಎಸ್ಪಿಎಂ ಬೆಂಬಲದ ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ಮಾಜಿ ಸಚಿವರಿಂದ ಬಂಡಾಯ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿ ಗೊಂದಲದ ವಾತವರಣ ನಿರ್ಮಿಸಿದ ಕಾರಣ ತಲಾ 7 ಸ್ಥಾನ ಪಡೆದಿದ್ದರು. ಆದರೆ ವಿಧಾನಸಭೆ ಚುನಾವಣೆ ವೇಳೆ ಬಿ ಫಾರಂ-ಸಿಫಾರಂ ಗೊಂದಲ ದಿಂದ ಮಾಜಿ ಸಚಿವ ಡಿ. ನಾಗರಾಜಯ್ಯ ಜೆಡಿಎಸ್ ಟಿಕೆಟ್ ಪಡೆದು ಶಾಸಕರಾಗಿ ಅಯ್ಕೆಯಾಗಿ, ತಾಲೂಕು ಜೆಡಿಎಸ್ ಚುಕ್ಕಾಣಿ ಹಿಡಿದರು.
ಈ ಮಧ್ಯೆ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಾಳೆಯದಲ್ಲಿದ್ದ ಎಸ್.ಪಿ.ಎಂ. ಮಾಜಿ ಶಾಸಕ ಎಚ್. ನಿಂಗಪ್ಪ,ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಕಾಂಗ್ರೆಸ್ ಸೇರಿದ್ದು, ಇವರ ಕಟ್ಟಾ ಬೆಂಬಲಿಗರೆಂದು ಗುರುತಿಸಿಕೊಳ್ಳುವ ಜೆಡಿಎಸ್ ಚಿಹ್ನೆಯಡಿ ಗೆದ್ದಿದ್ದ ನಾಲ್ವರು ಸದಸ್ಯರು ಕಾಂಗ್ರೆಸ್ ತೆಕ್ಕೆಗೆ ಜಾರಿ, ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರ ಹಿಡಿಯಲು ಮುಂದಾದರು. ಪುರಸಭೆ ಚುನಾವಣೆಯಲ್ಲಿ ಬದ್ಧ ವೈರಿಗಳಂತೆ ಸೆಣೆಸಾಡಿದ್ದ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಅಧ್ಯಕ್ಷಗಾದಿ ಹಿಡಿಯಲು ಜೆಡಿಎಸ್ ಚಿಹ್ನೆಯಡಿ ಗೆದ್ದಿರುವ ಸದಸ್ಯರನ್ನು ಕೈ ಚಿಹ್ನೆಯ ಸದಸ್ಯರು ಬೆಂಬಲಿಸುವ ಜೊತೆಗೆ ಏಕೈಕ ಬಿಜೆಪಿ ಸದಸ್ಯನನ್ನು ಉಪಾಧ್ಯಕ್ಷ ಸ್ಥಾನಕ್ಕೆಬೆಂಬಲಿಸಿದ್ದು ಮತದಾರ ಪ್ರಭುವಿಗೆ ಆಶ್ಚರ್ಯ ಉಂಟು ಮಾಡಿದೆ.
ಅಧಿಕೃತ ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ತೊಡೆತಟ್ಟಿ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಹಾಲಿ ಶಾಸಕರು, ಕೊನೆಯಲ್ಲಿ ತಮ್ಮ ಮತ್ತು ಪಕ್ಷದ ವರ್ಚಸ್ಸು ಉಳಿಸಿಕೊಳ್ಳಲು, ಕಾಂಗ್ರೆಸ್ ಸದಸದಸ್ಯೆಯ ಮೊರೆ ಹೋಗಿದ್ದು ಮತ್ತೊಂದು ತಿರುವಾಗಿದೆ.
ಒಟ್ಟಿನಲ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುವಾವಣೆಯಲ್ಲಿ ನಿಜವಾಗಿ ಗೆದ್ದ ಪಕ್ಷ ಜೆಡಿಎಸ್ಸೋ ಅಥವಾ ಕಾಂಗ್ರೆಸ್ಸೋ ಎಂಬ ತರ್ಕಕ್ಕೆ ಮಾತ್ರ ಉತ್ತರ ದೊರೆಯದಾಗಿದ್ದು, ಅಪವಿತ್ರ ಮೈತ್ರಿ ರಾಜಕಾರಣದಿಂದ ಮುಂದಿನ ದಿನಗಳಲ್ಲಿ ಜನತೆ ರಾಜಕಾರಣಿಗಳ ಮೇಲೆ ನಂಬಿಕೆ ಎಷ್ಟರ ಮಟ್ಟಿಗೆ ಉಳಿಸಿಕೊಳ್ಳುತ್ತಾರೆಂಬುದು ಯಕ್ಷ ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

