ತುಮಕೂರು

ಕಬ್ಬಿನ ದರ ಪಾವತಿಸದೆ ವಿಳಂಬ ಧೋರಣೆ

Published On :

ಕುಣಿಗಲ್: ತಾಲೂಕಿನ ವಿವಿಧೆಡೆ ರೈತರಿಂದ ಕಬ್ಬು ಖರೀದಿಸಿದ ಖಾಸಗಿ ಸಕ್ಕರೆ ಕಾರ್ಖಾನೆ, ರೈತರಿಗೆ ಕಬ್ಬಿನ ದರ ಪಾವತಿ ಮಾಡದೆ ವಿಳಂಬ ಧೋರಣೆ ವಹಿಸಿರುವುದನ್ನು ವಿರೋಧಿಸಿದ ಕೆಲ ರೈತರು, ಕಾರ್ಖಾನೆಯ ಶಾಖಾ ಕಚೇರಿಯ ಸಿಬ್ಬಂದಿ ಹೊರಗೆ ಕಳುಹಿಸಿ, ಕೂಡಲೆ ಕಬ್ಬಿನ ದರ ಪಾವತಿ ಮಾಡುವಂತೆ ಆಗ್ರಹಿಸಿ ಶುಕ್ರವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ರೈತರಾದ, ಬಿ.ಸಿ.ಚನ್ನಗಂಗಯ್ಯ, ರಾಮಣ್ಣ. ರವಿ, ರಮೇಶ, ಕೆಂಪಹನುಮೇಗೌಡ, ಚಂದ್ರಪ್ಪ, ಕುಮಾರಯ್ಯ ಇತರರು ಮುಖಂಡ ಗಂಗಾಧರ ನೇತೃತ್ವದಲ್ಲಿ, ಶುಕ್ರವಾರ ಬೆಳಗ್ಗೆ ಪಟ್ಟಣದ ರಾಜಕುಮಾರ್ ಬಡಾವಣೆಯಲ್ಲಿನ ಖಾಸಗಿ ಸಕ್ಕರೆ ಕಾರ್ಖಾನೆಯ ಶಾಖಾ ಕಚೇರಿಗೆ ಆಗಮಿಸಿ, ಕಬ್ಬಿನ ಬಾಕಿ ಹಣ ನೀಡುವಂತೆ ಆಗ್ರಹಿಸಿದರು. ಸಿಬ್ಬಂದಿ ಸಮರ್ಪಕ ಉತ್ತರ ನೀಡುವಲ್ಲಿ ವಿಫಲರಾದ ಕಾರಣ ಬೇಸತ್ತ ರೈತರು, ಕಚೇರಿಯಲ್ಲಿದ್ದ ಸಿಬ್ಬಂದಿಗಳು ಹೊರಗೆ ಕಳುಹಿಸಿ, ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಗಂಗಾಧರಯ್ಯ, ತಾಲೂಕಿನಾದ್ಯಂತ ಸರಿಸುಮಾರು ಸಾವಿರಾರು ರೈತರಿಂದ ಅಮೃತೂರು, ಕಸಬಾ ಸೇರಿದಂತೆ ವಿವಿಧ ಹೋಬಳಿಗಳಲ್ಲಿ 1ಲಕ್ಷದ ಹತ್ತು ಸಾವಿರ
ಟನ್ ಕಬ್ಬನ್ನು ನೆರೆಯ ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿನ (ಎನ್.ಎಸ್.ಎಲ್. ಷುಗರ್) ಎಂಬ ಖಾಸಗಿ ಸಕ್ಕರೆ ಕಾರ್ಖಾನೆ ಕಬ್ಬನ್ನು ಖರೀದಿಸಿದೆ. ಈ ಪೈಕಿ ಈಗಾಗಲೆ ಬಹುತೇಕ ರೈತರು ಕಬ್ಬನ್ನು ನೀಡಿ ನಾಲ್ಕು ತಿಂಗಳುಗಳೆ ಕಳೆಯುತ್ತಾ ಬಂದಿದ್ದರೂ, ಸಕ್ಕರೆ ಕಾರ್ಖಾನೆಯವರು ರೈತರಿಗೆ ಕಟಾವು ಮಾಡಿದ ದರ ನೀಡಿಲ್ಲ, ಕೇಳಿದರೆ ಕುಂಟುನೆಪ ಹೇಳುತ್ತಾರೆ. ಮಂಡ್ಯ ಜಿಲ್ಲೆಯ ರೈತರು ನೇರವಾಗಿ ಕಾರ್ಖಾನೆಗೆ ನುಗ್ಗಿ ಕೇಳುವುದರಿಂದ ಅ ಜಿಲ್ಲೆಯ ರೈತರಿಗೆ ನಿಯಮಾನುಸಾರ ಕಟಾವು ಮಾಡಿದ ಹದಿನೈದು ದಿನಗಳ ಒಳಗೆ ನೀಡುತ್ತಾರೆ.
ವಿನಾಕಾರಣ ಕಿರಿಕಿರಿ: ತುಮಕೂರು ಜಿಲ್ಲೆಯ ರೈತರಾದ ನಮಗೆ ವಿನಾಕಾರಣ ಕುಂಟುನೆಪ ಹೇಳುತ್ತಾ ಕಾಲನೂಕುತ್ತಿದ್ದಾರೆ. ಈಗ ಕಬ್ಬು ಕಟಾವು ಮಾಡಿದ ನಂತರ ಮತ್ತೊಂದು ಬೆಳೆಗೆ ರೈತರು ಸಿದ್ಧತೆಗೊಳ್ಳುತ್ತಿದ್ದಾರೆ. ಕಾರ್ಖಾನೆಯವರು ಕಟಾವು ಮಾಡಿರುವ ದರ ಪಾವತಿಸದ ಕಾರಣ, ರೈತರು ಪರದಾಡುವಂತಾಗಿದೆ.  ಚುನಾವಣೆ ವೇಳೆಯಾದ್ದರಿಂದ ಯಾವುದೇ ಜನಪ್ರತಿನಿಧಿಗಳು ರೈತರ ಸಮಸ್ಯೆ ಆಲಿಸುತ್ತಿಲ್ಲ, ಈ ಬಗ್ಗೆ   ತಹಸೀಲ್ದಾರ್ ಅವರಿಗೆ ಕಳೆದ ವಾರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ತಹಸೀಲ್ದಾರ್ ಕಾರ್ಖಾನೆಯ ಎಜಿಎಂ ಮಂಜುನಾಥ ಅವರೊಂದಿಗೆ ಚರ್ಚಿಸಿದಾಗ, ಸಕ್ಕರೆ ಬೆಲೆ ಇಳಿಮುಖವಾಗಿದ್ದು ಉತ್ಪಾದಿಸುವ ಸಕ್ಕರೆ ಅಡವಿಟ್ಟು ಇದೇ 26ರೊಳಗೆ ರೈತರ ಬಾಕಿ ಪಾವತಿಸುವುದಾಗಿ ತಿಳಿಸಿದ್ದರು.
ಈಗ ಕಾರ್ಖಾನೆಯವರು ಸೂಚಿಸಿದ ದಿನ ಕಳೆದರೂ ಹಣ ನೀಡದೆ ರೈತರು ಪರದಾಡುವಂತಾಗಿದೆ. ವಿದ್ಯುತ್ ಕಣ್ಣುಮುಚ್ಚಾಲೆ, ರಸಗೊಬ್ಬರ ಪೂರೈಕೆಯಲ್ಲಿ ಸಮಸ್ಯೆ, ಹವಮಾನ ವೈಪರಿತ್ಯದ ಸವಾಲಿನ ನಡುವೆ ರೈತರು ಬೆಳೆದ ಬೆಳೆಯ ದರವನ್ನು ಮಾತ್ರ ಕಾರ್ಖಾನೆಯವರಿಂದ ಕೇಳುತ್ತಿದ್ದು ಇನ್ನಾವುದೇ ದರ ಕೇಳುತ್ತಿಲ್ಲ. ಆದರೂ ಕಾರ್ಖಾನೆಯವರು ಸ್ಪಂದಿಸದಿರುವುದು ನಿಜಕ್ಕೂ ಖಂಡನೀಯ. ಕಾರ್ಖಾನೆಯ ವಿಳಂಬ ಧೋರಣೆ ಖಂಡಿಸಿ ಇಂದು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದು, ಇನ್ನೊಂದು ವಾರದೊಳಗೆ ತಾಲೂಕಿನ ರೈತರ ಬಾಕಿ ಇರುವ ಕಬ್ಬು ಕಟಾವು ಮಾಡಿರುವ ಹಣವನ್ನು ಕಾರ್ಖಾನೆಯವರು ನೀಡದಿದ್ದಲ್ಲಿ, ಸ್ಥಳೀಯ ರೈತರೆಲ್ಲಾ ಸಂಘಟಿತರಾಗಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿ, ಸ್ಥಳೀಯ ಶಾಖಾ ಕಚೇರಿ ಸಿಬ್ಬಂದಿಗಳ ಮೂಲಕ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ಸಾಂಕೇತಿಕ ಪ್ರತಿಭಟನೆ ಕೈ ಬಿಟ್ಟರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.