ಮಹಿಳೆ ಅಭಿವ್ಯಕ್ತಿ ಸ್ವಾತಂತ್ರ್ಯ ಕಾಪಾಡಿ
ತುಮಕೂರು: ಮಹಿಳೆ ಹೆಚ್ಚುಹೆಚ್ಚಾಗಿ ತಾರತಮ್ಯ ಹಾಗೂ ಶೋಷಣೆಗಳಿಗೆ ಒಳಗಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ಆಕೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ಅವಶ್ಯಕತೆಯಿದೆ ಎಂದು ಲೇಖಕಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ತುಮಕೂರು ವಿಶ್ವವಿದ್ಯಾನಿಲಯದ ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರ ಹಾಗೂ ಭಾರತರತ್ನ ಡಾ. ಎಂ. ಎಸ್. ಸುಬ್ಬುಲಕ್ಷ್ಮೀ ಲಲಿತಕಲಾ ವಿಭಾಗಗಳು ಹಮ್ಮಿಕೊಂಡಿದ್ದ ಅವಳ ಅರಿವು ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯ ಮೌನವೇ ಆಕೆಯ ದೊಡ್ಡ ಶತ್ರು. ಅದು ಅಪಾಯಕಾರಿ ಕೂಡ ಎಂದರು.
ಮಹಿಳೆ ತನ್ನ ಮೌನದ ಚಿಪ್ಪಿನಿಂದ ಹೊರಬಂದು ತನ್ನ ಭಾವನೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಗೊಳಿಸುವ ಹಂತಕ್ಕೆ ಬಂದಾಗ ಮಾತ್ರ ಆಕೆಯ ಮೇಲಿನ ದೌರ್ಜನ್ಯ ಕಡಿಮೆಯಾಗಬಲ್ಲದು ಎಂದರು. ದೇವರ, ಧರ್ಮದ ಹೆಸರಿನಲ್ಲಿ ಸೂಳೆಗಾರಿಕೆಯನ್ನು ಪೋಷಿಸುತ್ತಿರುವ ನಮ್ಮ ಸಮಾಜದ ಬಗ್ಗೆ ಅಸಹ್ಯವೆನಿಸುತ್ತದೆ. ಮಹಿಳೆಯ ಅಭಿವ್ಯಕ್ತಿಯ ಎಲ್ಲ ಮಾಧ್ಯಮಗಳನ್ನೂ ಮುಚ್ಚಿಹಾಕುವ ಯೋಜಿತ ಹುನ್ನಾರ ನಡೆಸಿರುವುದು ಶೋಚನೀಯ ಎಂದ ಮುಷ್ತಾಕ್, ಮಹಿಳೆ ತನ್ನ ಮೌನ ಮುರಿಯುವುದೇ ಒಂದು ಅದ್ಭುತ ಪ್ರಕ್ರಿಯೆ ಎಂದು ವಿಶ್ಲೇಷಿಸಿದರು.
ಪ್ರೇರಣೆ: ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎ. ಎಚ್. ರಾಜಾಸಾಬ್, ಭ್ರೂಣಹತ್ಯೆಯನ್ನು ಯಾವ ಧರ್ಮವೂ ಪೋಷಿಸುವುದಿಲ್ಲ, ಆದರೆ ನಮ್ಮ ಪುರುಷಪ್ರಧಾನ ಸಮಾಜವೇ ತನ್ನ ಸ್ವಾರ್ಥಕ್ಕೋಸ್ಕರ ಹೆಣ್ಣುಭ್ರೂಣ ಹತ್ಯೆಯೆಂಬ ಅಮಾನುಷ ಕೃತ್ಯಕ್ಕೆ ಪ್ರೇರೇಪಣೆ ನೀಡುತ್ತಿದೆ ಎಂದರು.
ಮಹಿಳೆಯನ್ನು ಒಂದೆಡೆ ಪ್ರಕೃತಿ, ದೇವತೆ ಎಂದೆಲ್ಲ ಹೊಗಳುತ್ತಾ ಇನ್ನೊಂದೆಡೆ ಅವಳನ್ನು ಬಲಿಪಶುವನ್ನಾಗಿ ಮಾಡುತ್ತಿರುವ ಸಮಾಜ ತನ್ನ ಪೈಶಾಚಿಕತೆಯಿಂದ ಹೊರಬರಬೇಕಿದೆ ಎಂದವರು ಅಭಿಪ್ರಾಯಪಟ್ಟರು.
ವಿಶೇಷ ಸಾಧನೆಗೈದ ಬಾ. ಹ. ರಮಾಕುಮಾರಿ, ಹಂದಿಜೋಗಿ ರಾಮಕ್ಕ ಅವರನ್ನು ಸನ್ಮಾನಿಸಲಾಯಿತು. ವಿ ಶ್ವವಿದ್ಯಾನಿಲಯ ಕಲಾ ಕಾಲೇಜಿನ ವಿದ್ಯಾರ್ಥಿಗಳು ಮಹಿಳಾ ದಿನದ ವೈಶಿಷ್ಟ್ಯವನ್ನು ಸಾರುವ ವಿಪ್ಲವ ಎಂಬ ನಾಟಕವನ್ನು ಪ್ರದರ್ಶಿಸಿದರು. ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಂದ ಕಂಸಾಳೆ ನೃತ್ಯ, ಲಲಿತ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ವರ್ಣಚಿತ್ರ ಪ್ರದರ್ಶನ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು, ಬೋಧಕ-ಬೋಧಕೇತರರಿಗೆ ಬಹುಮಾನ ವಿತರಿಸಲಾಯಿತು.
ಪ್ರಸಿದ್ಧ ಕಲಾವಿದ ಕೆ. ಟಿ. ಶಿವಪ್ರಸಾದ್, ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರದ ಸಂಯೋಜಕಿ ಗಿರಿಜ ಕೆ. ಎಸ್., ಲಲಿತಕಲಾ ವಿಭಾಗದ ಮುಖ್ಯಸ್ಥೆ ಡಾ. ಗೀತಾ ವಸಂತ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

