8 ವರ್ಷಗಳಾದರೂ ಮುಗಿಯದ ತೀ ನಂ ಶ್ರೀಕಂಠಯ್ಯ ಭವನ
ಚಿ.ನಾ.ಹಳ್ಳಿ ತಾಲೂಕಿನಲ್ಲಿ 8 ವರ್ಷಗಳಾದರೂ ತೀನಂಶ್ರೀ ಭವನ ಕಾಮಗಾರಿ ಪೂರ್ಣಗೊಂಡಿಲ್ಲ. ಶ್ರೇಷ್ಠ ವ್ಯಕ್ತಿಯ ಹೆಸರಿನಲ್ಲಿ ಭವನವನ್ನು ನಿರ್ಮಿಸುವ ಕಾಳಜಿಯಿಂದ ಅಂದಿನ ಶಾಸಕ ಜೆ.ಸಿ. ಮಾಧುಸ್ವಾಮಿಯವರು ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಬಿ.ಎಸ್.ಯಡಿಯೂರಪ್ಪನವರಿಂದ 1.50 ಕೋಟಿ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭಿಸಿದರು. ನಂತರ ನಡೆದ ಚುನಾವಣೆಯಲ್ಲಿ ಮಾಧುಸ್ವಾಮಿ ಸೋತು, ಸಿ.ಬಿ.ಸುರೇಶ್ಬಾಬು ಶಾಸಕರಾಗಿ ಆಯ್ಕೆಯಾದರು. ಈಗಲೂ ಕುಂಟುತ್ತ ಸಾಗಿದೆ ಕಾಮಗಾರಿ. ಇದೇ ರೀತಿಯಾದರೆ ಇನ್ನೂ ನಾಲ್ಕಾರು ವರ್ಷಗಳೆ ಆದರು ಕಾಮಗಾರಿ ಮುಗಿಯುವ ಭರವಸೆ ಕಾಣುವುದಿಲ್ಲ. ಜನಪ್ರತಿನಿದಿಗಳಾದವರಿಗೆ ಅಭಿವೃದ್ಧಿ ಕೆಲಸಗಳ ಬಗ್ಗೆ ಬದ್ಧತೆಯಿಲ್ಲದಿದ್ದರೆ ಏನಾಗಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಕಾಮಗಾರಿ ಪೂರ್ಣಗೊಳಿಸಿ ತಿನಂಶ್ರೀ ಭವನ ಕಾಮಗಾರಿ ಶೀಘ್ರ ಮುಗಿಸುವರೇ ಎಂಬುದನ್ನು ಕಾದುನೋಡಬೇಕು.
ದಾರಿಯನ್ನೇ ನುಂಗಿರುವ ಪಟ್ಟಭದ್ರ ಹಿತಾಸಕ್ತಿಗಳು
ಚಿಕ್ಕನಾಯಕನಹಳ್ಳಿ ಪುರಸಭೆ ಇದುವರೆಗೂ ತನ್ನ ಕರ್ತವ್ಯವನ್ನು ಸಮರ್ಥವಾಗಿ ಪಾಲಿಸಿಲ್ಲ ಎಂಬುದು ಸಾರ್ವಜನಿಕರ ಒಕ್ಕೊರಲಿನ ಮಾತು. ಪಟ್ಟಣದ ಶಿಸ್ತುಬದ್ಧ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾರಂಭಗೊಂಡ ಸಂಸ್ಥೆಯಾದ ಪುರಸಭೆ ತನ್ನ ಜವಾಬ್ದಾರಿಯ್ನನೇ ಮರೆತಂತಿದೆ. ಇಲ್ಲಿನ ಜನಸಂಖ್ಯೆ 25 ಸಾವಿರಕ್ಕು ಹೆಚ್ಚಾಗಿದ್ದು, ಪಟ್ಟಣದಲ್ಲಿ ಯಾವ ರಸ್ತೆ ಮತ್ತು ಬೀದಿಗಳು ಶಿಸ್ತುಬದ್ಧವಾಗಿಲ್ಲ. ಪ್ರಭಾವಿ ವ್ಯಕ್ತಿಗಳು ರಸ್ತೆ ಮತ್ತು ಬೀದಿಗಳನ್ನು ಅತಿಕ್ರಮಿಸಿಕೊಂಡು ಮನೆಕಟ್ಟಿದರೂ ಕೇಳದ ಪುರಸಭೆ, ದುರ್ಬಲರು ಮನೆ ಮುಂದೆ ಕಾಂಪೌಂಡ್ ನಿರ್ಮಿಸಲು ಕಿರಿಕಿರಿ ಮಾಡುವುದು ಸಾಮಾನ್ಯವಾಗಿದೆ. ಬನಶಂಕರಿ ಬಡಾವಣೆಯಲ್ಲಿರುವ ಎರಡು ಸಾಮಿಲ್ಗಳು ಬನಶಂಕರಿ ಕೈಮಗ್ಗದ ಸಹಕಾರ ಸಂಘದ ಪಕ್ಕದಿಂದ ವೆಂಕಣ್ಣನ ಕಟ್ಟೆಗೆ ಸಂಪರ್ಕ ಕಲ್ಪಿಸುವ ಏಕೈಕ ಬೀದಿಯನ್ನು ಸಂಪೂರ್ಣವಾಗಿ ಅತಿಕ್ರಮಿಸಿಕೊಂಡಿದ್ದರೂ, ಪುರಸಭೆ ಮಾತ್ರ ಕಂಡೂಕಾಣದಂತೆ ಜಾಣಕುರುಡು ಪ್ರದರ್ಶಿಸುತ್ತಿದೆ. ಇತ್ತೀಚೆಗೆ ಮಹಾಲಕ್ಷ್ಮೀ ಬಡಾವಣೆ, ಬನಶಂಕರಿ ಬಡಾವಣೆ ಮತ್ತು ನವೋದಯ ಕಾಲೇಜು ಸುತ್ತಮುತ್ತಲ ಪರಿಸರ ಬಹಳ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ಪೂರಕವಾಗಿ ರಸ್ತೆ ಮತ್ತು ಬೀದಿಗಳನ್ನು ನಿರ್ಮಿಸುವುದು ಪುರಸಭೆಯ ಕರ್ತವ್ಯ. ಆದರೆ ಅವರು ಇರುವ ರಸ್ತೆಗಳನ್ನೇ ನುಂಗಿದರೂ ಕೇಳುವುದಿಲ್ಲವೆಂದ ಮೇಲೆ, ಇವರ ಕಾನೂನಿಗೆ ಕಿಮ್ಮತ್ತೆಲ್ಲಿದೆ. ಪುರಸಭೆಯವರು ಇನ್ನಾದರು ಅತಿಕ್ರಮಿಸಿರುವ ರಸ್ತೆ ಮತ್ತು ಬೀದಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.
ಕುಡಿವ ನೀರಿನ ಬಳಿಯೇ ಕೊಳಚೆ ನೀರಿನ ಜಲಾಶಯ
ಸುಮಾರು 12 ವರ್ಷಗಳ ಹಿಂದೆ ಅಂದಿನ ಶಾಸಕರಾಗಿದ್ದ ದಿ.ಎನ್.ಬಸವಯ್ಯನವರು ಪಟ್ಟಣದ ಕುಡಿಯುವ ನೀರಿನ ಬವಣೆ ತಪ್ಪಿಸಲು ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ದೇವೇಗೌಡರಿಂದ ಹೇಮಾವತಿ ನಾಲೆಯಿಂದ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.
ಬೆಳೆಯತ್ತಿರುವ ಜನಸಂಖ್ಯೆಗನುಗುಣವಾಗಿ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಾದ ಹಿನ್ನೆಲೆಯಲ್ಲಿ ಅಂದಿನ ಕಾಲಕ್ಕೇ 12 ಕೋಟಿ ರು.ಗಳ ಯೋಜನಾ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಗೊಂಡಿತಾದರು, ಬಸವಯ್ಯನವರು ಅನಾರೋಗ್ಯದಿಂದ ಅಕಾಲಮರಣಕ್ಕೆ ತುತ್ತಾದರು. ನಂತರ ಶಾಸಕರಾದ ಜೆ.ಸಿ.ಮಾಧುಸ್ವಾಮಿಯವರು ಕಾಮಗಾರಿಯಲ್ಲಿ ಆಸಕ್ತಿವಹಿಸಿ ಪೂರ್ಣಗೊಳಿಸಿ ಪಟ್ಟಣಕ್ಕೆ ಹೇಮಾವತಿ ನೀರನ್ನು ತರುವಲ್ಲಿ ಯಶಸ್ವಿಯಾದರು. ಆದರೆ ಇಷ್ಟೆಲ್ಲಾ ಕಷ್ಟಪಟ್ಟು ಪಟ್ಟಣದ ಪ್ರಜೆಗಳಿಗೆ ಶುದ್ಧವಾದ ನೀರೊದಗಿಸಲು ತಂದ ನೀರನ್ನು ಅಶುದ್ಧವಾಗಿಸಿ ಜನರಿಗೆ ಕುಡಿಸುತ್ತಿರುವ ಪುರಸಭೆ ತನ್ನ ಮೂಲಭೂತ ಜವಾಬ್ದಾರಿಯನ್ನೇ ಮರೆತಿದೆ. ಕುಡಿಯುವ ನೀರನ್ನು ಪಟ್ಟಣದ ಕೆರೆಯಲ್ಲಿ ಸಂಗ್ರಹಿಲಾಗಿದೆ.
ಅದರ ಸುತ್ತಮುತ್ತ ಯಾವುದೇ ರೀತಿಯ ಅಶುಚಿತ್ವವಾಗದಂತೆ ಪರಿಸರವನ್ನು ಸ್ವಚ್ಛವಾಗಿಡುವುದನ್ನು ಬಿಟ್ಟು,ಬಹುತೇಕ ವಿದ್ಯಾನಗರ, ಮಹಾಲಕ್ಷ್ಮೀಬಡಾವಣೆ ಮುಂತಾದ ಕಡೆಗಳಿಂದ ಬರುವ ಚರಂಡಿ ನೀರನ್ನು ಕುಡಿಯುವ ನೀರಿನ ಸಂಗ್ರಹದ ಪಕ್ಕದ ಕೆರೆಯಲ್ಲಿ ಸಂಗ್ರಹಿಸಿದ್ದಾರೆ.
ಪುರಸಭೆ ಈ ಬಗೆ ಯಾವುದೇ ಕ್ರಮಕೈಗೊಂಡಿಲ್ಲ. ಮನುಷ್ಯನಿಗೆ ಬರುವ ಮಾರಕ ರೋಗಗಳಲ್ಲಿ ಬಹುತೇಕ ಅಶುದ್ಧ ನೀರಿನಿಂದ ಎಂಬುದನ್ನು ಅರಿಯಬೇಕಿದೆ. ಆದ್ದರಿಂದ ಕೂಡಲೇ ಹೇಮಾವತಿ ನೀರಿನ ಸಂಗ್ರಹದ ಬಳಿ ಶೇಖರಣೆಯಾಗಿರುವ ಚರಂಡಿ ನೀರನ್ನು ಬೇರೆಡೆಗೆ ವರ್ಗಾಯಿಸಿ, ಕುಡಿಯುವ ನೀರನ್ನು ಮಲೀನಗೊಳಿಸದಂತೆ ಕಾಪಾಡಬೇಕಾದ್ದು ಪುರಸಭೆಯ ಕರ್ತವ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

