9 ವರ್ಷವಾದ್ರೂ ಹೈಟೆಕ್ ಬಸ್ ನಿಲ್ದಾಣ ಕನಸು
ಕುಣಿಗಲ್: ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವ ಭರದಲ್ಲಿ, ಉತ್ತಮ ಸ್ಥಿತಿಯಲ್ಲಿದ್ದ ಪುರಸಭೆ ಬಸ್ ನಿಲ್ದಾಣದ ಮಳಿಗೆಗಳನ್ನು ಕೆಡವಿ, ಮೇ 5ಕ್ಕೆ ಒಂಬತ್ತು ವರ್ಷಗಳೇ ಕಳೆದಿದ್ದು, ಹಲವು ಜನಪ್ರತಿನಿಧಿಗಳ ಆಡಳಿತ ಗತಿಸಿದರೂ, ಇಚ್ಛಾಶಕ್ತಿಯ ಕೊರತೆಯಿಂದಾಗಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಪ್ರಗತಿ ಕೇವಲ ಕಾಗದ ,ದಾಖಲೆಗಷ್ಟೆ ಸೀಮಿತವಾಗಿ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪಟ್ಟಣದ ಹೃದಯಭಾಗದಲ್ಲಿರುವ ಪುರಸಭೆಗೆ ಸೇರಿದ ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದುಕೊಂಡಿದ್ದ ಮಳಿಗೆಗಳನ್ನು, 5-5- 2005ರಲ್ಲಿ ಅಂದಿನ ಪುರಸಭೆ ಆಡಳಿತ ಮತ್ತು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವ ನೆಪದಲ್ಲಿ ಏಕಾಏಕಿ ತೆರವುಗೊಳಿಸಿದ್ದು, ಈ ಮಳಿಗೆಗಳನ್ನು ಆಶ್ರಯಿಸಿದ್ದ ಹಲವಾರು ಕುಂಟುಂಬಗಳು ಬೀದಿ ಪಾಲಾದವು. ಮಳಿಗೆ ತೆರವು ಗೊಳಿಸುವ ಸಮಯದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನು ಕೆಲವೇ ತಿಂಗಳೊಳಗೆ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿ, ಹಿಂದೆ ಇದ್ದವರಿಗೆ ಆದ್ಯತೆ ಮೇರೆಗೆ ನೀಡುವ ಭರವಸೆ ನೀಡಿದ್ದರು.
ಆರಂಭ: ಪುರಸಭೆಯಿಂದ ಈ ಜಾಗದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ತೆರವುಗೊಳಿಸಿದ ಸಮಯದಲ್ಲೆ ತುಮಕೂರು ಖಾಸಗಿ ಬಸ್ ನಿಲ್ದಾಣವನ್ನೂ ತೆರವುಗೊಳಿಸಿ, ಅಲ್ಲಿ ಈಗಾಗಲೆ ನಿಲ್ದಾಣ ಕಾಮಗಾರಿ ಪೂರ್ಣಗೊಂಡು, ಮಳಿಗೆ, ಬಸ್ ಸಂಚಾರ ಪ್ರಾರಂಭವಾಗಿದೆ.
ಪುರಸಭೆ ಬಸ್ ನಿಲ್ದಾಣ ತೆರವುಗೊಳಿಸಿದಾಗ ಇದ್ದ ಅಧ್ಯಕ್ಷ ಕೆ.ಎಲ್.ಹರೀಶ್, ಈ ಬಾರಿಯೂ ಅಧ್ಯಕ್ಷರಾಗಿದ್ದಾರೆ.
ಅವರದೆ ಪಕ್ಷದ ಶಾಸಕರೂ ಸಹ ಇರುವುದರಿಂದ ಮತ್ತು ಸಂಸದ ಡಿ.ಕೆ. ಸುರೇಶ್ ತಾವು ಆಯ್ಕೆಯಾದಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಆದ್ಯತೆ ನೀಡುವುದಾಗಿ ಘೋಷಿಸಿರುವ ಕಾರಣ ಸಹಜವಾಗಿ ಪಟ್ಟಣದ ಜನತೆಯಲ್ಲಿ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಬಗ್ಗೆ ಕುತೂಹಲ ಹೆಚ್ಚಿದೆ. ಪಟ್ಟಣದಿಂದ ಮಾಗಡಿ,
ತುಮಕೂರು, ಮದ್ದೂರು, ಮೈಸೂರು, ಹಾಸನ ಮತ್ತು ಬೆಂಗಳೂರು ಕಡೆಗಳಿಗೆ ತೆರಳುವ ದಿನಂಪ್ರತಿ ಸಾವಿರಾರು ಪ್ರಯಾಣಿಕರು, ನೂರಾರು ಬಸ್ಸುಗಳು ಕನಿಷ್ಠ ಮೂಲಭೂತ ಸೌಕರ್ಯ ಇಲ್ಲದ ಕುಣಿಗಲ್ ಪುರಸಭೆ ಬಸ್ ನಿಲ್ದಾಣದ ಮೂಲಕವೆ ಸಾಗುತ್ತಿದ್ದು, ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸದ ಪುರಸಭೆ,ಸೂಕ್ತ ಸೌಕರ್ಯ ಕಲ್ಪಿಸದೆ ವಾರ್ಷಿಕ ಸುಂಕವಸೂಲಾತಿ ಮೂಲಕ ಲಕ್ಷಾಂತರ ರಾಜಸ್ವಸಂಗ್ರಹದ ಬಗ್ಗೆ ಮಾತ್ರ ಗಮನಹರಿಸುತ್ತಿದೆ.
ಪುರಸಭೆಯ ಈ ನೀತಿಯಿಂದಾಗಿ ಸಾವಿರಾರು ಪ್ರಯಾಣಿಕರು, ನೂರಾರು ಬಸ್ ಸಂಚರಿಸುವ ಪುರಸಭೆ ಬಸ್ ನಿಲ್ಧಾಣದಲ್ಲಿ ಮೂಲಭೂತ ಸೌಕರ್ಯ ಮರಿಚಿಕೆಯಾಗಿ ಉಳಿದಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಹಾಲಿ ಪುರಸಭೆ ಈಗಷ್ಟೆ ಅಸ್ತಿತ್ವಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಜನಪರ ಕಾಳಜಿಯಿಂದಾದರೂ, ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ತಮ್ಮ ಜವಾಬ್ದಾರಿ ಮೆರೆಯುವರೆ ಎಂದು ಕಾದುನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

