ತುಮಕೂರು

ನೀರನ್ನು ಜತನದಿಂದ ಬಳಕೆ ಮಾಡಿ: ಶಾಲಿನಿ ರಜನೀಶ್

Published On :

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಪದೇ ಪದೇ ಕುಡಿವ ನೀರಿನ ಸಮಸ್ಯೆ ಇದ್ದು ಇರುವ ನೀರನ್ನು ಜನತೆ ಜತನದಿಂದ ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಮನವಿ ಮಾಡಿದ್ದಾರೆ.
 ಅವರು ಜಿಲ್ಲೆಯ ಗುಬ್ಬಿ, ಕುಣಿಗಲ್, ತುರುವೇಕೆರೆ, ತಿಪಟೂರು ತಾಲೂಕಿನಲ್ಲಿ ನೀರಿನ ಸಮಸ್ಯೆಯನ್ನು ತಿಳಿದುಕೊಳ್ಳಲು ಗ್ರಾಮಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ನದಿಮೂಲದ ನೀರು ಕುಡಿಯಲು ಸರಬರಾಜಾಗುತ್ತಿದ್ದು ಕಳೆದ ವರ್ಷ 22 ಟಿ.ಎಂ.ಸಿ ನೀರು ತುಮಕೂರು ಜಿಲ್ಲೆಗೆ ಹರಿದು ಬಂದಿದ್ದರೂ ಈ ಪಟ್ಟಣಗಳಲ್ಲಿ ನೀರಿನ ಸಮಸ್ಯೆಯಿದೆ ಎಂದರು.
ಕುಡಿಯುವ ನೀರಿಗೆ ಎಷ್ಟೆ ಕೊಳವೆ ಬಾವಿಗಳನ್ನು ಕೆರೆದರೂ ಅದು ಶಾಶ್ವತ ಪರಿಹಾರವಲ್ಲ ಎಂದು ಜಿ.ಪಂ. ಎಂಜಿನಿಯರಿಂಗ್ ಸಹಾಯಕ ಎಂಜಿನಿಯರ್ ಅವರ ಸಲಹೆಯ ಹಿನ್ನೆಲೆಯಲ್ಲಿ ಕಡಬ ಕೆರೆಗೆ 33 ಎಂಸಿಎಫ್‌ಟಿ ಹೇಮಾವತಿ ನೀರು ಹರಿಸುವ ಸಂಬಂಧ ಯೋಜನಾ ವರದಿ ಸಿದ್ಧಪಡಿಸಿ ತಮಗೆ ಕಳುಹಿಸುವಂತೆ ಸೂಚಿಸಿದರು. ಯೋಜನೆಗೆ ಆದೇಶ ಕೊಟ್ಟ 9 ತಿಂಗಳಲ್ಲಿ ಯೋಜನೆಯನ್ನು ಪೂರೈಸಬಹುದು. ಈಗ ಯೋಜನೆಗೆ ಸರ್ಕಾರ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದರೆ ಮುಂದಿನ ಬೇಸಿಗೆ ವೇಳೆಗೆ 12 ಗ್ರಾಮಗಳ ಜನರಿಗೆ ಕುಡಿಯುವ ನೀರು ಕೊಡಬಹುದು ಎಂದರು.
ಟ್ಯಾಂಕರ್ ಮೂಲಕ ಸರಬರಾಜು: ಜಿಲ್ಲೆಯಲ್ಲಿನ 275 ಗ್ರಾಮಗಳ್ಲಿ ಕುಡಿಯುವ ನೀರಿನ ಕೊರತೆಯಿದ್ದು 72 ಜನವಸತಿ ಪ್ರದೇಶಗಳಿಗೆ ಟ್ಯಾಂಕರ್ ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿರುವುದಾಗಿ ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಪಾವಗಡ ತಾಲೂಕಿನ ಹಲವು ಗ್ರಾಮಗಳಲ್ಲಿ ಫ್ಲೋರೈಡ್ ನೀರು ದೊರೆಯುತ್ತಿದ್ದು ಇದು ಕುಡಿಯಲು ಯೋಗ್ಯವಾಗಿಲ್ಲ ಎಂಧು ಅವರು ತಿಳಿಸಿದರು.
ಎರಡು ದಿನಗಳ ಕಾಲ ತಾವು ಜಿಲ್ಲೆಯಲ್ಲಿ ಸಂಚರಿಸಿ ನೀರಿನ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದು, ಮೇ 6 ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುವ ಕುಡಿಯುವ ನೀರು ಕುರಿತ ಪರಿಶೀಲನಾ ಸಮಿತಿ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಲಿನಿ ರಜನೀಶ್ ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.