ತುಮಕೂರು

ಬೆಸ್ಕಾಂ ಇಲಾಖೆ ಕಾರ್ಯವೈಖರಿಗೆ ಆಕ್ರೋಶ

Published On :

ಕುಣಿಗಲ್: ತಾಲೂಕಿನ ವಿವಿಧೆಡೆಗಳಲ್ಲಿ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಅಮಾಯಕ ರೈತರು ಸಾವಿಗೀಡಾಗುತ್ತಿದ್ದು, ಇಲಾಖೆಯ ಕಾರ್ಯವೈಖರಿ ಖಂಡಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಸೋಮವಾರ ಬೆಸ್ಕಾಂ ಉಪವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕೂಡಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಸೋಮವಾರ ಬೆಳಗ್ಗೆ ತಾಲೂಕು ರೈತಸಂಘದ ಅಧ್ಯಕ್ಷ ಅನಂದಪಟೇಲ್, ಉಪಾಧ್ಯಕ್ಷ ನಿಡಸಾಲೆ ಪ್ರಸಾದ್ ನೇತೃತ್ವದಲ್ಲಿ ಕುಣಿಗಲ್ ಬೆಸ್ಕಾಂ ಉಪವಿಭಾಗದ ಎಇಇಯವರ ಕಾರ್ಯಾಲಯದ ಮುಂದೆ ಸಂಘಟಿತರಾದ ರೈತ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಇಲಾಖೆ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಮನವಿ ಅರ್ಪಿಸಲು ಕಚೇರಿ ಒಳಗೆ ತೆರಳಿದಾಗ ಯಾವುದೇ ಅಧಿಕಾರಿ ಹಾಜರಿರಲಿಲ್ಲ.
ರೈತಸಂಘದ ಪದಾಧಿಕಾರಿಗಳು ಈ ಹಿಂದೆಯೇ ಸೋಮವಾರ ಮನವಿ ಸಲ್ಲಿಸಲು ಬರುವುದಾಗಿ ತಿಳಿಸಿದ್ದರೂ, ಸಿಬ್ಬಂದಿ ಇರದ ಕಾರಣ ಬೇಸತ್ತ ಪದಾಧಿಕಾರಿಗಳು, ಇಲಾಖಾಧಿಕಾರಿಗಳು ರೈತಸಂಘಟನೆ ಮತ್ತು ರೈತರಿಗೆ ಅಗೌರವ ತೋರುತ್ತಿದ್ದಾರೆಂದು ಆರೋಪಿಸಿ, ಕಚೇರಿಯಲ್ಲಿ ಕೆಲಸಕ್ಕಿದ್ದವರನ್ನು ಹೊರಗೆ ಕಳುಹಿಸಿ, ಕಚೇರಿ ಬಾಗಿಲು ಮುಚ್ಚಿದರಲ್ಲದೆ, ಕಾರ್ಯಾಲಯದ ಮುಖ್ಯದ್ವಾರವನ್ನು ಮುಚ್ಚಿ ಬ್ಯಾನರ್ ಕಟ್ಟಿ, ಮುಖ್ಯದ್ವಾರದ ಮುಂದೆಯೇ ಇಲಾಖೆಯ ನಿರ್ಲಕ್ಷ್ಯಖಂಡಿಸಿ, ಧರಣಿ ಆರಂಭಿಸಿದರು.
ಅಧಿಕಾರಿಗಳು ಬರಲಿ: ಆಯಕಟ್ಟಿನ ಅಧಿಕಾರಿ ಸ್ಥಳಕ್ಕಾಗಮಿಸಿ, ಮನವಿ ಸ್ವೀಕರಿಸುವವರೆಗೂ ಕಚೇರಿ ಪ್ರಾರಂಭಿಸಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು. ಕೆಲಹೊತ್ತಿನ ನಂತರ ಪ್ರಬಾರ ಎಇಇ ಕಿರಣ್ ಮತ್ತು ತುಮಕೂರು ವಿಭಾಗದ ಇಇ ನರೇಂದ್ರ ಸ್ಥಳಕ್ಕಾಗಮಿಸಿದರು.
 ರೈತ ಸಂಘದ ಪದಾಧಿಕಾರಿಗಳು ಮನವಿ ನೀಡಿದ್ದರೂ, ಅಧಿಕಾರಿ ಸ್ಥಳದಲ್ಲಿರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪದಾಧಿಕಾರಿಗಳು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
  ಸಂಘದ ಅಧ್ಯಕ್ಷ ಅನಂದ್ ಪಟೇಲ್ ಮಾತನಾಡಿ, ಅಮೃತೂರು, ಹುಲಿಯೂರುದುರ್ಗ ಹೋಬಳಿಗಳ ವಿವಿಧೆಡೆಗಳಲ್ಲಿ ವಿದ್ಯುತ್ ತಂತಿ ಕೈಗೆಟುಕುವಂತಿದೆ. ಈ ಬಗ್ಗೆ ಇಲಾಖಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿದರೂ, ಇಲಾಖಾಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಇನ್ನು ಕಬ್ಬಿನಗದ್ದೆಗಳಲ್ಲಿ ತಂತಿಗಳು ಕೆಳಗೆ
ಹಾದುಹೋಗಿವೆ. ಇದರಿಂದ ಹಲವೆಡೆ ರೈತರು ಸಾವನ್ನಪ್ಪುತ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ 15ಮಂದಿ ಮೃತಪಟ್ಟಿದ್ದಾರೆ.
ಕ್ರಮ ಕೈಗೊಳ್ಳುತ್ತಿಲ್ಲ: ಸತ್ತ ರೈತನಿಗೆ ಕೇವಲ ಎರಡರಿಂದ ನಾಲ್ಕು ಲಕ್ಷ ಪರಿಹಾರ ನೀಡುತ್ತೀರಾ. ಕದ್ದು ದನಸಾಗಿಸುವನೊಬ್ಬ ಸತ್ತರೆ ಹದಿನೈದು ಲಕ್ಷ ಪರಿಹಾರ ನೀಡುವ ಸರ್ಕಾರ, ಅನ್ನದಾತ ಸತ್ತರೆ ಅದೂ ಬೆಸ್ಕಾಂ ಇಲಾಖೆ ನಿರ್ಲಕ್ಷ್ಯದಿಂದ ಸತ್ತರೆ ಕೇವಲ ಎರಡರಿಂದ ಮೂರು ಲಕ್ಷ ನೀಡಿ ಕೈತೊಳೆದುಕೊಳ್ಳುತ್ತಿರುವುದು ಖಂಡನೀಯ.  ನಿರ್ಲಕ್ಷ್ಯವಹಿಸುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಅಮೃತೂರು ವಿಭಾಗ ಸೆಕ್ಷನ್ ಅಧಿಕಾರಿ ನೇರಹೊಣೆಯಾಗಿದ್ದು ಆತನನ್ನು ಅಮಾನತ್ತುಗೊಳಿಸುವಂತೆ ಪಟ್ಟು ಹಿಡಿದರಲ್ಲದೆ, ನಿರಂತರಜ್ಯೋತಿ ಕಾಮಗಾರಿಯ ಅವ್ಯವಹಾರ, ಜೋತು ಬಿದ್ದ ತಂತಿಗಳ ಸರಿಪಡಿಸುವಂತೆ, ಮೃತರೈತನಿಗೆ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿದರು.
ಸ್ಪಂದನೆ: ಪ್ರತಿಭಟನಕಾರರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿದ ಬೆಸ್ಕಾಂ ಇಇ ನರೇಂದ್ರ, ಅಂತಿಮವಾಗಿ ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿ,ಅಮೃತೂರು ಎಸ್‌ಒ ಶಂಕರ್ ವಿರುದ್ಧ ಕ್ರಮ ಕೈಗೊಳ್ಳಲು ಅಗತ್ಯ ಪ್ರಕ್ರಿಯೆ ಕೈಗೊಳ್ಳುವುದರ ಜೊತೆಯಲ್ಲಿ ಉಳಿದ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಕೈಬಿಟ್ಟರು. ಬೆಸ್ಕಾಂ ಇಲಾಖೆಯ ಜೆಇ ತಿಪ್ಪೆಸ್ವಾಮಿ, ಶ್ರೀನಿವಾಸ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳಾದ ಶಶಿಧರ, ಗಂಗಾಧರ, ರಮೇಶ, ಪ್ರಕಾಶ್, ಜಗದೀಶ್, ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.