ತಾಪಂ ಅಧ್ಯಕ್ಷರಿಂದಲೇ ರು. 4 ಲಕ್ಷಗಳ ಬೇಡಿಕೆ: ದೂರು
ತುರುವೇಕೆರೆ: ತಾಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ಆರೋಪ ಮಾಡಿದ್ದ ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್ ಅವರ ಮೇಲೆ ಈಗ ಲಂಚ ಕೇಳಿದ ಹಾಗೂ ಮಾನಸಿಕವಾಗಿ ಹಿಂಸೆ ಮಾಡಿದ ಆರೋಪ ಎದುರಾಗಿದ್ದು ಸ್ಥಳೀಯ ಪೊಲಿಸರಿಗೇ ದೂರು ಸಲ್ಲಿಕೆಯಾಗಿದೆ.
ತಾಲೂಕು ಪಂಚಾಯ್ತಿಯ ಎನ್‌ಆರ್‌ಇಜಿಎ ಯೋಜನೆಯ ಕುರಿತಂತೆ ಗ್ರಾಮ ಪಂಚಾಯ್ತಿಯಲ್ಲಿ ಆಗುತ್ತಿರುವ ಕಾಮಗಾರಿಗಳ ಸಂಬಂಧ ವರದಿ ತಯಾರಿಸುತ್ತಿರುವ ಸಂಧ್ಯಾ ಎಂಬುವವರ ವಿರುದ್ಧ ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್ ಅವ್ಯವಹಾರದ ಆರೋಪ ಮಾಡಿದ್ದು ತಮ್ಮ ಪತಿ ಕೃಷ್ಣರ ಹೆಸರಿಗೆ 70 ಲಕ್ಷ ರು.ಗಳನ್ನು ಜಮಾ ಮಾಡಿಕೊಂಡಿದ್ದಾರೆ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷರಾಗಿರುವ ಕೋಳಾಲ ಗಂಗಾಧರ್ ಆರೋಪಿಸಿದ್ದರು. ಪತ್ರಿಕಾಗೋಷ್ಠಿ ನಡೆಸಿದ ಸಂಧ್ಯಾ ಅವರು ತಾವು ಇದರಲ್ಲಿ ಯಾವುದೇ ಅವ್ಯವಹಾರ ಎಸಗಿಲ್ಲ. ತಮ್ಮ ಪತಿ ಕೃಷ್ಣ ಅವರು ಕಾಮಗಾರಿಗಳಿಗೆ ಬೇಕಾಗುವ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದಾರೆ. ಸಂಬಂಧಿಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪಿಡಿಓಗಳ ಅದರ ಉಸ್ತುವಾರಿ ನೋಡಿಕೊಂಡು ತಮ್ಮ ಪತಿಯವರಿಂದ ಕಾಮಗಾರಿಗೆ ಬೇಕಾಗುವ ವಸ್ತುಗಳನ್ನು ಹಾಗೂ ಸೂಕ್ತ ದಾಖಲೇ ಪಡೆದೇ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಅವ್ಯವಹಾರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮದೇನಿದ್ದರೂ ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿ, ಎಂಜಿನಿಯರ್ ಹಾಗೂ ಪಿಡಿಒ ಗಳು ನೀಡಿದ್ದ ವರದಿಯನ್ನು ತಯಾರಿಸುವುದಷ್ಟೇ ತಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
4 ಲಕ್ಷ ರು.ಗಳ ಬೇಡಿಕೆ: ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್ ಅವರು ಕಳೆದ 2 ತಿಂಗಳ ಹಿಂದೆ ನನ್ನನ್ನು ಕರೆದು ಉದ್ಯೋಗ ಖಾತರಿ ಯೋಜನೆಯಡಿ ಸಾಕಷ್ಟು ಹಣ ಮಾಡಿದ್ದೀಯ. ಆದ್ದರಿಂದ ನನಗೂ 4 ಲಕ್ಷ ರು.ಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ತಮಗೆ ಬರುವ 10 ಸಾವಿರ ರು.ಗಳ ಸಂಬಳದಲ್ಲಿ 4 ಲಕ್ಷ ರು.ಗಳನ್ನು ನೀಡುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಕ್ಕೆ ಮಾನಸಿಕವಾಗಿ ಹಿಂಸೆ ನೀಡಿದರು. ಬದಲಾಗಿ ಕೆಲವು ಸ್ಥಳಗಳಿಗೆ ನನ್ನೊಂದಿಗೆ ಬರುವಂತೆ ಒತ್ತಾಯಿಸಿದರು. ಈ ಕುರಿತು ತಾವು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ತಮ್ಮ ಪತಿಯವರ ಲೈಸೆನ್ಸ್ ರದ್ದು ಮಾಡುವ ಬೆದರಿಕೆಯನ್ನೂ ಒಡ್ಡಿದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಂಧ್ಯಾ ತಿಳಿಸಿದ್ದಾರೆ.
ತಾವು ಅಧ್ಯಕ್ಷ ಕೋಳಾಲ ಗಂಗಾಧರ್ ಅವರ ಯಾವುದೇ ಬೇಡಿಕೆಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ತಮ್ಮ ಮೇಲೆ ಭ್ರಷಷ್ಟಾಚಾರದ ಆರೋಪ ಮಾಡಿದ್ದಾರೆ ಎಂದು ಪತ್ರಕರ್ತರಿಗೆ ತಿಳಿಸಿದರು. ತಾವು ಯಾವುದೇ ತಪ್ಪು ಮಾಡದಿದ್ದರೂ ತಮ್ಮ ಮೇಲೆ ಇಲ್ಲದ ಅಪವಾದ ಮಾಡಿರುವ ಗಂಗಾಧರ್ ಅವರಿಂದ ಇಂದಲ್ಲಾ ನಾಳೆ ತೊಂದರೆಯಾಗಿ ತಾವು ಜೀವಕ್ಕೆ ತೊಂದರೆ ಮಾಡಿಕೊಂಡಲ್ಲಿ ಅದಕ್ಕೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್ ಅವರೇ ನೇರ ಹೊಣೆ ಎಂದೂ ಸಂಧ್ಯಾ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ 2 ತಿಂಗಳ ಹಿಂದೆಯೇ ನಾನು ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದೆ. ಆದರೆ ತಮ್ಮ ಕುಟುಂಬದ ಸದಸ್ಯರು ಹಾಗೂ ಪತಿಯವರು ತಮ್ಮ ಮರ್ಯಾದೆಗೆ ಕುಂದು ಬರುವುದು ಎಂದು ಭಾವಿಸಿದ್ದರಿಂದ ದೂರು ನೀಡಿರಲಿಲ್ಲ ಎಂದು ಸಂಧ್ಯಾ ದೂರಿನಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

