'ಎಲ್ಲಾ ಶಕ್ತಿಗಳಿಗಿಂತ ಸಂಘ ಶಕ್ತಿಯೇ ಮುಖ್ಯ'
ಹುಳಿಯಾರು: ಸಮಾಜದಲ್ಲಿ ಎದುರಾಗುವ ತೊಂದರೆಗಳನ್ನು ತೊಡೆದು ಹಾಕಿ, ಸಮುದಾಯಕ್ಕೆ ದೊರೆಯಬೇಕಾದ ಸವಲತ್ತುಗಳನ್ನು ಪಡೆಯಬೇಕಾದರೆ ಸಂಘಟನೆ ಮುಖ್ಯವಾಗಿರಬೇಕು. ಸಂಘ ಶಕ್ತಿ ಬಲವಾಗಿದ್ದರೆ ಮಾತ್ರ ಯಾವುದೇ ಇತರ ಶಕ್ತಿಗಳಿಗೆ ಹೆದರದೆ ಮುನ್ನಡೆಯಬಹುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ವಿ. ಮಹದೇವಯ್ಯ ತಿಳಿಸಿದರು.
ಹುಳಿಯಾರು ಹೋಬಳಿ ವೀರಶೈವ ಸಮಾಜದವತಿಯಿಂದ ಪಟ್ಟಣದ ವೀರಭದ್ರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ನಡೆದ ಬಸವೇಶ್ವರ ಜಯಂತಿ ಮಹೋತ್ಸವದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಎಲ್ಲಾ ಸಮುದಾಯದ ಜನರು ತಮ್ಮತಮ್ಮಲೇ ಸಂಘಟನೆಗಳನ್ನು ಮಾಡಿಕೊಂಡು ಸರ್ಕಾರದಿಂದ ತಮಗೆ ಸಿಗಬೇಕಾದ ಸ್ಥಾನ, ಸೌಲಭ್ಯಗಳನ್ನು ಪಡೆಯುವಲ್ಲಿ ಮುಂದಾಗಿದ್ದಾರೆ. ಆದರೆ ವೀರಶೈವರುಗಳು ಸಂಘಟಿತರಾಗುವ ಬದಲು ನಮ್ಮಲೇ ಅನೇಕ ಉಪಜಾತಿಗಳನ್ನು ಮಾಡಿಕೊಂಡು ನಮಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ ಎಂದರು. ಇನ್ನಾದರೂ ನಾವುಗಳು ಎಚ್ಚೆತ್ತು ಸಂಘಟನೆಯಡಿ ನಮಗೆ ದೊರೆಯಬೇಕಾದ ಸೌಲಭ್ಯಗಳನ್ನು ಹೋರಾಟದ ಮೂಲಕ ಪಡೆಯೋಣವೆಂದು ಕರೆ ನೀಡಿದರು.
ಕೆಂಕೆರೆ ಬಸವಕೇಂದ್ರದ ಗಂಗಾಧರಯ್ಯ ಮಾತನಾಡಿ, 12ನೇ ಶತಮಾನದಲ್ಲಿ ವಚನಗಂಗೆಯನ್ನೇ ಹರಿಸಿದ ಬಸವಣ್ಣ. ಅಂದಿನ ಕಾಲದಲ್ಲೇ ದೀನರ, ದುಃಖಿತರ, ಶೋಷಿತರ, ಮೇಲ್ವರ್ಗದ ಜನರಿಂದ ತುಳಿತಕ್ಕೆ ಒಳಗಾದ ಜನರನ್ನು ಮೇಲೆತ್ತುವ ಕಾರ್ಯವನ್ನು ತನ್ನ ವಚನಗಳ ಮೂಲಕ ಮಾಡಿದ್ದರು. ಪ್ರತಿಯೊಬ್ಬ ಪ್ರಜೆಗೂ ಲಿಂಗಕಟ್ಟುವ ಮೂಲಕ ಸಮಾಜದಲ್ಲಿ ಜಾತ್ಯತೀತತೆಯನ್ನು ತೊಡೆದು ಹಾಕಲು ಮುಂದಾಗಿ, ಸೋಮಾರಿತನವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಕಾಯಕದ ಮಹತ್ವವನ್ನು ತಿಳಿಸಿ ಪ್ರತಿಯೊಬ್ಬರು ಕಾಯಕಯೋಗಿಗಳಾಗಬೇಕು ಎಂದು ಸಾರಿ ವಿಶಾಲ ಮನೋಭಾವವನ್ನು ಮೂಡುವಂತೆ ಮಾಡಿದ ಬಸವಣ್ಣನವರು ಮಹಾನ್ ದಾರ್ಶನಿಕರು ಎಂದರು.
ಕೆಂಕೆರೆ ಬಸವಕೇಂದ್ರ ಹಾಗೂ ಕಾಳಿಕಾಂಭ ಭಜನಾ ಮಂಡಲಿ, ಅಕ್ಕಮಹಾದೇವಿ ಮಹಿಳಾ ಸಂಘದವರು ವಚನಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ದೊಡ್ಡಮೇಟಿಕುರ್ಕೆ ವಿರಕ್ತಮಠದ ರಾಜಶೇಖರಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದು, ವೀರಶೈವ ಸಮಾಜದ ಅಧ್ಯಕ್ಷ ಜಿ.ಎಂ. ನೀಲಕಂಠಯ್ಯ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷ ಕೆಂಕೆರೆ ನವೀನ್ ಬಸವಣ್ಣನವರ ಭಾವಚಿತ್ರ ಅನಾವರಣ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

