ಕೊಲೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿ
6 ಮಂದಿ ಬಂಧನ ತನಿಖೆ ದಿಕ್ಕು ತಪ್ಪಿಸಲು ದುಷ್ಕರ್ಮಿಗಳಿಂದ ನಾಟಕ
ಕನ್ನಡಪ್ರಭ ವಾರ್ತೆ ಕುಣಿಗಲ್ ಮೇ 7
ಅಪಘಾತವಾದ ವಾಹನವನ್ನು ತೆರವುಗೊಳಿಸಲು ಹೋದಾಗ ಟೆಂಪೊ ಟ್ರಾವೆಲರ್ ವಾಹನದಲ್ಲಿ ಮದುಮಗನ ಕೊಲೆಯಾಗಿದ್ದ ಪ್ರಕರಣವನ್ನು ಕುಣಿಗಲ್ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಆರು ಮಂದಿಯನ್ನು ವಶಕ್ಕೆಪಡೆದಿದ್ದಾರೆ.
ಕಳೆದ ಮಾಹೆಯ 23ರಂದು ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಬೇಲೂರಿಗೆ ತೆರಳುತ್ತಿದ್ದ ಬೊಲೆರೂ ಜೀಪ್ ಅಪಘಾತವಾಗಿ ಓರ್ವ ಮೃತಪಟ್ಟು ನಾಲ್ವರು ಗಾಯಗೊಂಡಿದ್ದರು. ಅಪಘಾತವಾದ ವಾಹನ ತೆರವುಗೊಳಿಸಲು ಹೋದಾಗ, ಟೆಂಪೋ ಟ್ರಾವೆಲ್ಲರ್ ವಾಹನ ಅಡ್ಡಿಯಾಗಿದ್ದು ಅದನ್ನು ಮುಂದಕ್ಕೆ ಹಾಕಲು ಹೋದ ಸಿಬ್ಬಂದಿಗೆ ಯುವಕನೋರ್ವನನ್ನು ಕೊಲೆಮಾಡಿ ವಾಹನದಲ್ಲೆ ಬಿಟ್ಟು ಹೋಗಿರುವುದು ಪತ್ತೆಯಾಗಿತ್ತು. ಚನ್ನರಾಯಪ್ಟಣ ತಾಲೂಕಿನ ಮದ್ಲಾಪುರದ ಹರೀಶ ಎಂದು ಪತ್ತೆಯಾಯಿತಲ್ಲದೆ, ಈತನ ಮದುವೆ ನಡೆಯಬೇಕಿದ್ದು, ವಾಹನದಲ್ಲಿ ಲಗ್ನ ಪತ್ರಿಕೆಗಳು ಪತ್ತೆಯಾಗಿದ್ದವು.
ಯಶಸ್ವಿ: ಪ್ರಕರಣ ದಾಖಲಿಕೊಂಡ ಕುಣಿಗಲ್ ಪೊಲೀಸರಿಗೆ, ವಾಹನದಲ್ಲಿ ಯಾವುದೇ ಸೂಕ್ತ ಸಾಕ್ಷಾಧಾರಗಳು ಲಭ್ಯವಾಗದೆ, ಪೊಲೀಸರ ದಿಕ್ಕುತಪ್ಪಿಸಲು ಬೇಕೆಂದೆ ಮಹಿಳೆಯ ಒಳ ಉಡುಪು ಮತ್ತು ಬಳೆಚೂರುಗಳನ್ನು ಹಾಕಲಾಗಿತ್ತು. ಕೀಟನಾಶಕವನ್ನು ವಾಹನದ ತುಂಬೆಲ್ಲಾ ಎರಚಲಾಗಿತ್ತು, ಎಸ್ಪಿ ರಮಣಗುಪ್ತ, ಅಡಿಷನಲ್ ಎಸ್ಪಿ ಲಕ್ಷ್ಮಣ್, ಡಿವೈಎಸ್ಪಿ ಗಣೇಶ್ ಮಾರ್ಗದರ್ಶನದಲ್ಲಿ, ಸಿಪಿಐ ಧರ್ಮೇದ್ರ, ಪಿಎಸೈ ಗುರುಪ್ರಸಾದ್ ಸಿಬ್ಬಂದಿಗಳು ಪ್ರಕರಣ ಭೇದಿಸಲು ಮುಂದಾದರು. ವಾಹನವು ನೆಲಮಂಗಲ ಕಡೆಯಿಂದ ಆಗಮಿಸಿರುವ ಶಂಕೆ ಮೇರೆಗೆ, ನೆಲಮಂಗಲ ಟೋಲ್ನಲ್ಲಿ ಹಾಕಲಾಗಿದ್ದ ಸಿಸಿ ಕ್ಯಾಮೆರ ದಾಖಲೆಗಳನ್ನು ಪಡೆದು, ಕೂಲಂಕಶವಾಗಿ ಪರಿಶೀಲಿಸಿದಾಗ, ಪೊಲೀಸರಿಗೆ ದುಷ್ಕರ್ಮಿಗಳ ಮೊಬೈಲ್ ನಂಬರ್ ಪತ್ತೆಯಾಯಿತು.
ಚಿಕ್ಕಪ್ಪನ ಪಾತ್ರ: ಇದರ ಅಧಾರದ ಮೇಲೆ ತನಿಖೆ ತೀವ್ರಗೊಳಿಸಿದಾಗ, ಕೊಲೆ ಹಿಂದಿನ ರೂವಾರಿ ಮೃತನ ಚಿಕ್ಕಪ್ಪನಾದ ಸದಾನಂದನ ಪಾತ್ರ ಖಚಿತವಾಯಿತು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬಹಿರಂಗಗೊಂಡಿದೆ. ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸದಾನಂದನೇ ಬೆಂಗಳೂರಿನ ನಾಗರ ಹೊಳೆಸರ್ಕಲ್ನ ಹನುಮೇಗೌಡ, ರತ್ನನಗರದ ರಾಜೇಶ, ಮಹಾದೇಶ್ವರ ನಗರದ ಸುನಿಲ, ಸುಂಕದಕಟ್ಟೆಯ ಮದನ್ಕುಮಾರ್ ಎಂಬುವವರಿಗೆ ಎರಡು ಲಕ್ಷ ಸುಪಾರಿಗೆ ಒಪ್ಪಿಸಿ, ಈ ಪೈಕಿ ಐವತ್ತುಸಾವಿರ ಮುಂಗಡ ನೀಡಿದ್ದರು.
ಆರೋಪಿತರು, ಪ್ರೇಮಮ್ಮ ಎಂಬಾಕೆಯ ನೆರವಿನಿಂದ ಕೊಲೆಯಾದ ಹರೀಶನ ಮನೆ ಹತ್ತಿರ ಕೃತ್ಯ ನಡೆದ ಹಿಂದಿನ ದಿನ ತೆರಳಿ, ಪ್ರೇಮಮ್ಮಳ ಮಗಳಿಗೆ ಹರೀಶ ಅನ್ಯಾಯ ಮಾಡಿದ್ದಾನೆಂಬ ನಾಟಕ ಸೃಷ್ಟಿಸಿ, ಹರೀಶನನ್ನು ಆತನ ವಾಹನದಲ್ಲೆ ಹತ್ತಿಸಿಕೊಂಡು ರಾಜೀ ಸಂಧಾನದ ನೆಪದಲ್ಲಿ ಕರೆದುಕೊಂಡು ಬಂದು, ಪಟ್ಟಣದ ಬೈಪಾಸ್ ರಸ್ತ್ತೆಯಲ್ಲಿ ವಾಹನದಲ್ಲೆ ಹರೀಶನಿಗೆ ಮೆಟಾಸಿಡ ಕುಡಿಸಿ, ಕೊಲೆ ಮಾಡಿ, ವಾಹನವನ್ನು ಬೈಪಾಸ್ ರಸ್ತೆಯ ಚೊಟ್ನಹಳ್ಳಿ ಬಳಿ ನಿಲ್ಲಿಸಿ ಪರಾರಿಯಾಗಿದ್ದರು.
ಸುಪಾರಿನೀಡಿದ್ದ ಸದಾನಂದ, ಪೊಲೀಸರಿಂದ ತಪ್ಪಿಸಿಕೊಳ್ಳಲು ತಿರುಪತಿ ಯಾತ್ರೆಗೆ ತೆರಳುವುದಾಗಿ ರೇಲ್ವೆ ಟಿಕೆಟ್ ಮಾಡಿಸಿ, ಬೆಂಗಳೂರು ರೈಲು ನಿಲ್ಲಾಣದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ, ಸುಪಾರಿ ಹಂತಕರ ಹಿಂದೆಯೇ ತನ್ನ ಸಂಬಂಧಿಕರ ಬೇರೊಂದು ಫೋನ್ ಪಡೆದು, ಬೈಕ್ನಲ್ಲಿ ಬಂದಿದ್ದನೆಂದು ತನಿಖೆ ವೇಳೆಯಲ್ಲಿ ಪತ್ತೆಯಾಗಿದೆ. ಸುಪಾರಿಹಂತಕರು ಎಲ್ಲಿಯೂ ತಮ್ಮ ಫೋನ್ ಬಳಸದೆ, ಚಾಲಾಕಿತನ ತೋರಿದ್ದರೂ, ಪ್ರಕರಣ ಭೇದಿಸುವಲ್ಲಿ ಕುಣಿಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

