ಅಧಿಕಾರಿಗಳ ವಿರುದ್ಧ ಆರೋಪಗಳ ಸುರಿಮಳೆ
ಅಸಹಾಯಕತೆಗೀಡಾದ ಶಾಸಕರು, ಅಧ್ಯಕ್ಷರು, ಪೌರಾಯುಕ್ತರು, ಪಕ್ಷ ಭೇದ ಮರೆತು ಆಕ್ರೋಶ, ಅಸಮಾಧಾನ
ತಿಪಟೂರು: ನಗರಸಭೆಯಲ್ಲಿ ಹಿಂದೆಂದೂ ಕಾಣದ ಭ್ರಷ್ಟಾಚಾರ ಮತ್ತು ಬೇಜವಾಬ್ದಾರಿತನ ತಾಂಡವವಾಡುತ್ತಿದ್ದು, ಇಡೀ ಆಡಳಿತವೇ ಎಕ್ಕುಟ್ಟಿ ಹೋಗಿದೆ. ಅಧಿಕಾರಿಗಳ್ಯಾರು ಚುನಾಯಿತ ಜನಪ್ರತಿನಿಧಿಗಳು ಮತ್ತು ನಾಗರಿಕರ ಬೇಕು ಬೇಡಗಳಿಗೆ ಕಿಂಚಿತ್ತೂ ಗೌರವ ನೀಡದೆ ದರ್ಪದಿಂದ ವರ್ತಿಸುತ್ತಿರುವುದು ನಾಚಿಕೆ ತರಿಸುತ್ತಿದ್ದು ಈ ಬಗ್ಗೆ ಶಾಸಕರು, ಅಧ್ಯಕ್ಷರು ಮತ್ತು ಪೌರಾಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕಲ್ಲದೆ ಕೆಲವರನ್ನು ವರ್ಗಾವಣೆ ಮಾಡಬೇಕೆಂದು ಪಕ್ಷ ಭೇದ ಮರೆತು ಎಲ್ಲಾ 31 ಸದಸ್ಯರೂ ಆಕ್ರೋಶಭರಿತರಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಅಧ್ಯಕ್ಷ ಚುನಾವಣೆ ನಡೆದ ನಂತರ ಇದೇ ಪ್ರಥಮ ಬಾರಿಗೆ ಅಧ್ಯಕ್ಷೆ ಡಿ.ಗೀತಾ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಬಹುತೇಕ ಸದಸ್ಯರು ನಗರದಲ್ಲಿ ಸ್ವಚ್ಛತೆ ಸಂಪೂರ್ಣ ಹಾಳಾಗಿದೆ. ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ. ಬೋರ್ವೆಲ್ ಕೊರೆದು ವರ್ಷವಾದರೂ ಪಂಪು-ಮೋಟಾರ್ ಬಿಟ್ಟಿಲ್ಲ. ಸಕಾಲಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸದೆ ತೆರಿಗೆ ಹಣದಲ್ಲಿ ಲಕ್ಷಾಂತರ ರು. ದಂಡ ಪಾವತಿಸಲಾಗಿದೆ. ಕಸ ವಿಲೇವಾರಿಯಾಗದೆ ನಗರದ ತುಂಬಾ ಕಸದ ರಾಶಿ ಸ್ವಾಗತ ನೀಡುತ್ತಿದೆ. ಅಧಿಕಾರಿಗಳು ಮಾಮೂಲು ಕಿತ್ತುಕೊಂಡು ಫುಟ್ಪಾತ್ಗಳನ್ನು ವ್ಯಾಪಾರಿಗಳಿಗೆ ಅನಧಿಕೃತವಾಗಿ ನೀಡಿದ್ದಾರೆ. ಕೋಳಿ ಮತ್ತು ಮಾಂಸದ ಅಂಗಡಿಗಳ ಗಲೀಜು ಚರಂಡಿ ಸೇರಿ ದುರ್ವಾಸನೆ ಬೀರುತ್ತಿದೆ. ದೊಡ್ಡಪೇಟೆ ರಸ್ತೆ ಮತ್ತು ಚರಂಡಿಯನ್ನು ಒತ್ತುವರಿ ಮಾಡಿಕೊಂಡಿದ್ದು ಅಗಲೀಕರಣವಾಗಬೇಕಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ದರ್ಪದಿಂದ ಮೆರೆಯುತ್ತಿದ್ದು, ಇಡೀ ನಗರವನ್ನೇ ಅನೈರ್ಮಲ್ಯದ ತಾಣವಾಗಿಸಿದ್ದಾರೆ. ಅಧಿಕಾರಿಗಳು ದೂರವಾಣಿಗೆ ಸ್ಪಂದಿಸುತ್ತಿಲ್ಲ. ಕಚೇರಿಗೆ ಬಂದು ಸಮಸ್ಯೆಗಳ ಬಗ್ಗೆ ದೂರು ನೀಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳ ದುರಾಡಳಿತವನ್ನು ಬಹುತೇಕ ಸದಸ್ಯರು ಪಕ್ಷಭೇದ ಮರೆತು ಎಳೆ ಎಳೆಯಾಗಿ ಬಿಡಿಸಿಟ್ಟರು.
ನಿರುತ್ತರ: ನಗರಸಭೆ ಅರಾಜಕತೆಗೀಡಾಗಿದ್ದು ಕಾರಣರಾಗಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಸದಸ್ಯರು ಒತ್ತಾಯಿಸಿ ಆರೋಪಗಳ ಸುರಿಮಳೆಗೈದರೂ ಯಾವುದನ್ನೂ ಸಮರ್ಥಿಸಿಕೊಳ್ಳಲಾಗದ ಶಾಸಕರು ಹಾಗೂ ಅಧ್ಯಕ್ಷರು ಮತ್ತು ಪೌರಾಯುಕ್ತರು ನಿರುತ್ತರರಾಗಿದ್ದು ಮಾತ್ರ ಸದಸ್ಯರುಗಳ ಆರೋಪಗಳೆಲ್ಲವೂ ಸತ್ಯ ಎಂಬುದನ್ನು ಒಪ್ಪಿಕೊಂಡಂತಿತ್ತು.
ಎಂಜಿನಿಯರ್ ಹುಡುಕಿ ಕೊಡಿ: ನಗರಸಭೆ ಮುಖ್ಯ ಎಂಜಿನಿಯರ್ ಕಾಣೆಯಾಗಿ ಹಲವು ತಿಂಗಳಾಗಿದ್ದು ಶಾಸಕರೆ ಹುಡುಕಿಕೊಂಡಬೇಕು. ಎಂಜಿನಿಯರಿಂಗ್ ವಿಭಾಗದಲ್ಲಿ ನಗರ ಮತ್ತು ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಲಂಚಾವತಾರ ಇಲ್ಲಿ ತಾಂಡವವಾಡುತ್ತಿದ್ದು, ಉನ್ನತ ತನಿಖೆ ನಡೆಯಬೇಕು. ಪರಿಸರ ಇಲಾಖೆಯ ಎಂಜಿನಿಯರ್ ಸೇರಿದಂತೆ ಆರೋಗ್ಯ ನಿರೀಕ್ಷಕರುಗಳು ಬೇಜವಾಬ್ದಾರಿತನದಿಂದ ನಗರವನ್ನೇ ಹಾಳು ಮಾಡಿದ್ದಾರೆ. ನರ್ಸಿಂಗ್ ಹೋಂ ಮತ್ತು ಹೋಟೆಲ್ಗಳ ತ್ಯಾಜ್ಯ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದರೂ ಪರಿಸರ ಅಧಿಕಾರಿಗಳು ಕ್ರಮ ಜರುಗಿಸದೆ ಶಾಮೀಲಾಗಿರುವಂತಿದೆ. ಕೊಳವೆ ಬಾವಿ ಮೋಟಾರ್ಗಳು ಪ್ರತಿ ತಿಂಗಳು ಖರೀದಿಯಾಗುತ್ತಿವೆ. ರಿಪೇರಿ ಹೆಸರಿನಲ್ಲಿ ಹಣ ಲೂಟಿಯಾಗುತ್ತಿದ್ದು ಈ ಎಲ್ಲವುಗಳ ಬಗ್ಗೆ ತನಿಖೆ ನಡೆಸಬೇಕೆಂದು ಸದಸ್ಯರುಗಳು ಆಗ್ರಹಿಸಿದರು.
ಹಲವು ಸಮಸ್ಯೆ: ಸಭೆಯಲ್ಲಿ ಹಾಜರಿದ್ದ ಶಾಸಕ ಕೆ.ಷಡಕ್ಷರಿ ಮಾತನಾಡಿ ನಗರದಲ್ಲಿ ಕುಡಿಯುವ ನೀರು, ಸ್ವಚ್ಛತೆ,ಬೀದಿದೀಪಗಳ ಸಮಸ್ಯೆ ಹೆಚ್ಚಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿತನ ಮುಂದುವರಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಲ್ಲದೆ ವರ್ಗಾವಣೆಗೊಳಿಸಲು ಹಿಂದೇಟು ಹಾಕುವುದಿಲ್ಲ. ಯುಜಿಡಿ ಕಾಮಗಾರಿ ಮುಗಿಸಲು ಸರ್ವಪ್ರಯತ್ನ ನಡೆಸಲಾಗುವುದೆಂದು ತಿಳಿಸಿದರು.
ಬಹುತೇಕ ವಿಷಯಗಳ ಚರ್ಚೆಯಲ್ಲಿ ಸದಸ್ಯರುಗಳಾದ ನಿಜಗುಣ, ಸುಧಾಕರ್, ಟಿ.ಜೆ. ಲಿಂಗರಾಜು, ಪ್ರಕಾಶ್, ರೇಖಾ ಅನೂಪ್, ಪ್ರಸನ್ನಕುಮಾರ್,ಅಬ್ದುಲ್ ಖಾದರ್, ರಾಜಶೇಖರ್, ಗಂಗಮ್ಮ, ಹರಿಬಾಬು, ತರಕಾರಿ ನಾಗರಾಜು, ಸೊಪ್ಪುಗಣೇಶ್, ಯದುನಂದನ್ ಮತ್ತಿತರರು ಭಾಗವಹಿಸಿದ್ದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ದಿಲೀಪ್, ಉಪಾಧ್ಯಕ್ಷೆ ಶಶಿಕಲಾ ನಟರಾಜು, ಪೌರಾಯುಕ್ತ ನರಸಿಂಹಮೂರ್ತಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

