ತುಮಕೂರು

ಲೋಕಸಭಾ ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು

Published On :

ಕ.ಪ್ರ.ವಾರ್ತೆ    ತುಮಕೂರು    ಮೇ 14
ಲೋಕಸಭಾ ಮತಎಣಿಕೆಗೆ ಜಿಲ್ಲಾಡಳಿತ ಸಜ್ಜಾಗಿದೆ. ಮೇ 16 ರಂದು ತುಮಕೂರು ವಿವಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಈಗಾಗಲೇ ಮತ ಎಣಿಕೆ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗಿದೆ.
ಈ ಕುರಿತು ಸುದ್ದಿಗಾರರಿಗೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಮಾಹಿತಿ ನೀಡಿದ್ದಾರೆ.
8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಆಯಾಯ ವಿಧಾನಸಭಾ ಕ್ಷೇತ್ರದ ರೀತಿಯಲ್ಲೇ ನಡೆಯಲಿದ್ದು, ಪ್ರತಿಯೊಂದು ಸುತ್ತು ಮತಎಣಿಕೆ ನಂತರ ಪ್ರಚುರಪಡಿಸಲಾಗುವುದು. ಚಿ.ನಾ.ಹಳ್ಳಿ ದೊಡ್ಡ ವಿಧಾನಸಭಾ ಕ್ಷೇತ್ರವಾಗಿದ್ದು, 22 ಸುತ್ತು, ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರ 17 ಸುತ್ತು ಮತ ಎಣಿಕೆ ನಡೆಯಲಿದೆ.
12 ಟೇಬಲ್: ಪ್ರತಿಯೊಂದು ವಿದಾನಸಭಾ ಕ್ಷೇತ್ರಕ್ಕೂ 12 ಮತ ಎಣಿಕೆ ಟೇಬಲ್ ಹಾಕಲಿದ್ದು, ಪ್ರತಿ ಸುತ್ತಿಗೆ 96 ಮತಗಟ್ಟೆಗಳ ಮತಗಳನ್ನು ಎಣಿಕೆ ಮಾಡಲಾಗುವುದು. 17 ರಿಂದ 22 ಸುತ್ತುಗಳಲ್ಲಿ ಮತಗಳ ಎಣಿಕೆ ಪೂರ್ಣಗೊಳ್ಳಲಿದೆ. 115 ಮೈಕ್ರೋ ಅಬ್ಸರ್‌ವರ್ಸ್, 155 ಎಣಿಕೆ ಸೂಪರ್‌ವೈಸರ್ಸ್, 115 ಮತ ಎಣಿಕೆ ಸಹಾಯಕರು ಸೇರಿದಂತೆ 400 ಕ್ಕೂ ಹೆಚ್ಚು ಮಂದಿ ಮತ ಎಣಿಕೆ  ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಎಂಟು ಮಂದಿ ಸಹಾಯಕ ಚುನಾವಣಾಧಿಕಾರಿಗಳೂ, ತಹಸೀಲ್ದಾರರು ಮತಗಳ ಎಣಿಕೆಯನ್ನು ಸುಸೂತ್ರವಾಗಿ ನಡೆಸಲು ಸರ್ವ ಸನ್ನದ್ಧರಾಗಿದ್ದಾರೆ.
ಬೆಳಿಗ್ಗೆ 8 ಗಂಟೆಯಿಂದ: ಮೇ 16 ರಂದು ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮತ ಎಣಿಕೆಗಾಗಿ ನೇಮಕವಾದವರು, ರಾಜಕೀಯ ಪಕ್ಷಗಳ ಮತ ಎಣಿಕೆ ಏಜೆಂಟರು ಅಂದು ಬೆಳಿಗ್ಗೆ 7 ಗಂಟೆಯೊಳಗೆ ಮತ ಎಣಿಕೆ ಕೇಂದ್ರಕ್ಕೆ ಬರಬೇಕು. ನಂತರ ಬಂದವರನ್ನು ಒಳಗೆ ಬಿಡಲಾಗುವುದಿಲ್ಲ.
ಮತ ಎಣಿಕೆಗೆ ಬರುವ ಸಿಬ್ಬಂದಿ, ಮತ ಏಜೆಂಟರು ಸೇರಿದಂತೆ ಯಾರೂ ಮೊಬೈಲ್ ಫೋನ್ ತರುವಂತಿಲ್ಲ.
16 ರಂದು ಬೆಳಗ್ಗೆ ಮೊದಲು ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುವುದು. ನಂತರ ಮತಯಂತ್ರಗಳನ್ನು ಎಣಿಕೆಗಾಗಿ ಸ್ವೀಕರಿಸಲಾಗುವುದು. ಒಟ್ಟು 1826 ಮತಯಂತ್ರಗಳನ್ನು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಳಸಲಾಗಿದೆ. ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 12 ಟೇಬಲ್ ಹಾಕಲಾಗಿದ್ದು, ಈ ಕ್ಷೇತ್ರದ 22 ಸುತ್ತು ಎಣಿಕೆ ನಡೆಯಲಿದೆ. ಗುಬ್ಬಿ- 18, ತುಮಕೂರು ನಗರ - 19, ತಿಪಟೂರು-19, ತುಮಕೂರು ಗ್ರಾಮಾಂತರ - 17, ಕೊರಟಗೆರೆ - 20, ಮಧುಗಿರಿ - 21 ಸುತ್ತುಗಳಲ್ಲಿ ಮತ ಎಣಿಕೆ ಪೂರ್ಣಗೊಳ್ಳಲಿದೆ.
ವಿಡಿಯೋ ಚಿತ್ರೀಕರಣ: ಮತಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವೀಡಿಯೋ ಚಿತ್ರೀಕರಣ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎರಡು ವೀಡಿಯೋ ಕ್ಯಾಮರಾಗಳನ್ನು ಬಳಸಲಾಗುವುದು.  ಒಂದು ಕ್ಯಾಮರಾ ಮತಯಂತ್ರವನ್ನು ಮತ ಎಣಿಕೆ ಕೇಂದ್ರಕ್ಕೆ ತರುವುದನ್ನು ಚಿತ್ರೀಕರಿಸಿದರೆ ಮತ್ತೊಂದು ಮತ ಎಣಿಕೆ ಪ್ರಕ್ರಿಯೆಯನ್ನು ಚಿತ್ರೀಕರಿಸಲಿದೆ.
ಅಂಚೆ ಮತಪತ್ರ: ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗೆ ನೀಡಲಾದ ಅಂಚೆ ಮತಪತ್ರಗಳ ಎಣಿಕೆ ಮೇ 16 ರಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. 500 ಮತಪತ್ರಗಳಿಗೆ ಒಂದು ಮತ ಎಣಿಕೆ ಟೇಬಲ್ ಹಾಕಲಾಗುವುದು.
2800 ಅಂಚೆ ಮತಪತ್ರಗಳನ್ನು ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಪಡೆದಿದ್ದು, ಇದುವರೆವಿಗೆ 972 ಮತಪತ್ರಗಳು ಜಿಲ್ಲಾ ಚುನಾವಣಾ ಶಾಖೆಗೆ ತಲುಪಿವೆ. ಮತ ಎಣಿಕೆ ದಿನದಂದು ಬೆಳಗ್ಗೆ ಮತ ಎಣಿಕೆ ಆರಂಭವಾಗುವವರೆಗೆ ಈ ಮತಪತ್ರಗಳನ್ನು ಚುನಾವಣಾಧಿಕಾರಿಗಳಿಗೆ ತಲುಪಿಸಲು ಅವಕಾಶವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.