ತುಮಕೂರು

ಜಿ.ಎಸ್. ಬಸವರಾಜು ಸೋಲು ಅಭಿಮಾನಿಗಳಿಗೆ ಭಾರಿ ಆಘಾತ

Published On :

ಕನ್ನಡಪ್ರಭ ವಾರ್ತೆ, ತುಮಕೂರು, ಮೇ 16
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕಟ್ಟಾ ಬೆಂಬಲಿಗ ತುಮಕೂರು ಬಿಜೆಪಿ ಲೋಕಸಭಾ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರ ಸೋಲು ಅಭಿಮಾನಿಗಳಿಗೆ ಭಾರೀ ಆಘಾತಕ್ಕೀಡುಮಾಡಿದೆ.
ಈ ಬಾರಿ ಗೆದ್ದಿದ್ದರೆ ಹ್ಯಾಟ್ರಿಕ್ ಸಾಧನೆಗೆ ಪಾತ್ರರಾಗುತ್ತಿದ್ದ ಜಿ.ಎಸ್.ಬಿ. ಗೆದ್ದೇ ಗೆಲ್ಲುವ ವಿಶ್ವಾಸ ಹೊಂದಿದ್ದರು. ಅಷ್ಟೇ ಅಲ್ಲ, ತಮ್ಮ ಅಭಿವೃದ್ಧಿ ಕಾರ್ಯಗಳು, ಮೋದಿ ಅಲೆ ತಮ್ಮ ಗೆಲವಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ಹೊಂದಿದ್ದ ಜಿ.ಎಸ್.ಬಿ. ಸೋತಿರುವುದು, ಜಿಲ್ಲಾ ಬಿಜೆಪಿ ಘಟಕಕ್ಕೆ ಆಘಾತವನ್ನೇ ನೀಡಿದೆ.
ಯಡಿಯೂರಪ್ಪನವರ ಕೆಜೆಪಿ ಜತೆ ಗುರುತಿಸಿಕೊಂಡು, ನಂತರ ಮತ್ತೆ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಹರಸಾಹಸ ಮಾಡಿದ್ದ ಜಿ.ಎಸ್.ಬಿಗೆ ಬಿಜೆಪಿ  ಟಿಕೆಟ್ ದೊರೆತದ್ದು ಕೂಡ ಕಡೆ ಗಳಿಗೆಯಲ್ಲೇ. ಈ ಮುಂಚೆ ಜಿಎಸ್‌ಬಿಗೆ ಟಿಕೆಟ್ ನೀಡಲು ಜಿಲ್ಲಾ ಬಿಜೆಪಿ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಮಾಜಿ ಸಚಿವ ಸೊಗಡು ಶಿವಣ್ಣ ಅಥವಾ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ಬಿ. ನಂದೀಶ್ ಅವರ ಹೆಸರುಗಳು ಜಿಲ್ಲಾ ಘಟಕದಿಂದ ಈ ಬಾರಿಯ ಲೋಕಸಭಾ ಅಭ್ಯರ್ಥಿ ಸ್ಥಾನಕ್ಕೆ ಶಿಫಾರಸ್ಸಾಗಿದ್ದವು. ಆದರೆ ಮಾಜಿ ಸಿಎಂ ಯಡಿಯೂರಪ್ಪನವರ
ಬೆಂಬಲದಿಂದಾಗಿ ಮತ್ತೆ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಸಫಲರಾದ ಜಿಎಸ್‌ಬಿ, ಚುನಾವಣಾ ಪ್ರಚಾರ ಕಾರ್ಯವನ್ನು ಬಿರುಸಿನಿಂದಲೇ ಕೈಗೊಂಡಿದ್ದರು. ಟಿಕೆಟ್ ಮುಂಚೆ ಜಿಲ್ಲಾ ಬಿಜೆಪಿ ಘಟಕದಲ್ಲಿದ್ದ ಭಿನ್ನಮತ, ಚುನಾವಣೆ ವೇಳೆ ಅಷ್ಟಾಗಿ ಇಲ್ಲವಾಗಿ, ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ಏಕೈಕ ಉದ್ದೇಶದಿಂದ, ಗೆದ್ದೇ ಗೆಲ್ಲುವ ಛಲದಿಂದ ಬಿಜೆಪಿ ಯುವ ಪಡೆ ಶಕ್ತಿ ಮೀರಿ ಜಿಎಸ್‌ಬಿ ಪರ ಚುನಾವಣಾ ಪ್ರಚಾರ ಕೈಗೊಂಡಿತ್ತು.
ನಿರಂತರ ಸುದ್ದಿಗೋಷ್ಠಿ, ರೋಡ್ ಷೋಗಳು ತುಮಕೂರು ಜಿಲ್ಲಾ ಕೇಂದ್ರದಲ್ಲಿ ನಡೆದೇ ಇದ್ದವು. ಬಿಜೆಪಿ ಕಟ್ಟಾ ಕಾರ್ಯಕರ್ತರು, ಭಿನ್ನಮತ ಬದಿಗೊತ್ತಿ, ಪಕ್ಷದ ಹಿತ ಗಮನಿಸಿ, ಕೆಲಸ ಮಾಡಿದರೂ ಈ ಬಾರಿ ಜಿಎಸ್‌ಬಿ ಗೆಲವು ಸಾಧಿಸಲಾಗಲಿಲ್ಲ. ಮೂಲ ಕಾಂಗ್ರೆಸ್ಸಿಗರ ನಡುವೆ ನಡೆದ ಹೋರಾಟದಲ್ಲಿ ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರಿಗೂ ಪ್ರತಿಷ್ಠೆಯ ಕಣವಾಗಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಜಯಗಳಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.