ತುಮಕೂರು

ಸಾಸಲು ಶ್ರೀಬನಶಂಕರಿ ದೇವಾಲಯದಲ್ಲಿ ಕಳವು

Published On :

ಚಿ.ನಾ.ಹಳ್ಳಿ: ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಸಾಸಲು ಶ್ರೀಬನಶಂಕರಿ ದೇವಾಲಯದಲ್ಲಿ ದುಷ್ಕರ್ಮಿಗಳು ಒಡವೆಗಳನ್ನು ಕಳವು ಮಾಡಿದ್ದಾರೆ.
ಶನಿವಾರ ರಾತ್ರಿ ಗ್ರಾಮದ ಹೊರವಲಯದಲ್ಲಿರುವ ದೇವಾಲಯದಲ್ಲಿ ಕಳ್ಳತನ ನಡೆದಿದೆ. ಸದರಿ ದೇವಾಲಯವನ್ನು  ಪುನರ್ ನವೀಕರಣ ಮಾಡುವ ಸಲುವಾಗಿ ನಾಲ್ಕು ವರ್ಷಗಳ ಹಿಂದೆ ದೇವಾಲಯವನ್ನು ಕೆಡವಲಾಗಿತ್ತು. ಆದರೆ ಈಗಾಗಲೇ ದೇವಾಲಯ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ದೇವಾಲಯದ ಬಾಗಿಲುಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿಲ್ಲದಿರುವುದರಿಂದ ತಾತ್ಕಾಲಿಕ ಬಾಗಿಲುಗಳನ್ನು  ಅಳವಡಿಸಲಾಗಿದೆ. ಕಳೆದ 16ರಂದು ರಾತ್ರಿ ಶುಕ್ರವಾರ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ ಕಾರಣ ಚಿನ್ನದ ಕಿರೀಟ ಸೇರಿದಂತೆ ಒಡವೆಗಳ ಅಲಂಕಾರ ಮಾಡಲಾಗಿತ್ತು. ಇದರ ಸುಳಿವರಿತ, ಈ ಬಗ್ಗೆ ಮಾಹಿತಿಯನ್ನು ಹೊಂದಿರುವ ಕಳ್ಳರು 17ರ ಶನಿವಾರ ರಾತ್ರಿ ದೇವಾಲಯಕ್ಕೆ ನುಗ್ಗಿ ಕಳ್ಳತನ ಮಾಡಿದ್ದಾರೆ.
ಆದರೆ ದೇವಾಲಯದಲ್ಲಿ ಭದ್ರತೆಯಿಲ್ಲದ ಕಾರಣ ಪೂಜೆಯ ಸಂದರ್ಭದಲ್ಲಿ ತೊಡಿಸಿದ ಆಭರಣಗಳನ್ನು  ತೆಗೆದಿಡುವ ಬಗ್ಗೆ ಮಾಹಿತಿಯಿಲ್ಲದ ಕಳ್ಳರು ಭಾರಿ ಪ್ರಮಾಣದಲ್ಲಿ ಆಭರಣಗಳು ಸಿಗಬಹುದೆಂಬ ಆಸೆಯಿಂದ ಬಂದು, ಬೀಗ ಒಡೆದು ದೇವಿಯ ಮೈಮೇಲಿದ್ದ  ಕರಂಡಿಗೆ, ಚಿನ್ನದ ಮಾಂಗಲ್ಯ, ಭಕ್ತರು ಮಾಡಿದ ತಪ್ಪನ್ನು ಮನ್ನಿಸುವಂತೆ ಕೋರಿಕೊಂಡು ದೇವಿಗೆ ಅರ್ಪಿಸುವ ತಪ್ಪಿನ ತಾಳಿ ಮುಂತಾದ ಒಡವೆಗಳನ್ನು ದೋಚಿದ್ದಾರೆ.
ಕೆ-ಕಿಸಾನ್: ಹೆಸರು ನೋಂದಾಯಿಸಲು ಮನವಿ
ತಿಪಟೂರು: ತಾಲೂಕಿನ ಕೃಷಿ ಇಲಾಖೆಯಲ್ಲಿ ನೂತನವಾಗಿ ಕೆ-ಕಿಸಾನ್ ಯೋಜನೆಯನ್ನು ತಾಲೂಕಿನ ಕಸಬಾ ಹೋಬಳಿಯಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆಯು ರೈತರ ದತ್ತಾಂಶಗಳನ್ನು ಸೃಜಿಸುವ ಕಾರ್ಯಕ್ರಮ ಎಂದು ಸಹಾಯಕ ಕೃಷಿ ನಿರ್ದೇಶಕ ಜಯಪ್ಪ ತಿಳಿಸಿದರು.
 ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಎಐಎಸ್‌ಎಸ್ ಸಾಫ್ಟವೇರ್ ಅನ್ನು ಅಳವಡಿಸಿದ್ದು, ರೈತರಿಂದ ದತ್ತಾಂಶಗಳನ್ನು ಪಡೆಯಲು ಇಲಾಖೆಯ ಅಧಿಕಾರಿಗಳು ಹಾಗೂ ರೈತ ಅನುವುಗಾರರನ್ನು ನೇಮಿಸಲಾಗಿದೆ. ಈ ಅಧಿಕಾರಿಗಳು ಕಸಬಾ ಹೋಬಳಿಯ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಅಧಿಕಾರಿಗಳು ಬಂದ ಸಂದರ್ಭದಲ್ಲಿ ರೈತರು ತಮ್ಮ ಜಮೀನಿನ ಪಹಣಿ, ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ
ಬ್ಯಾಂಕ್ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ನೀಡಲು ತಿಳಿಸಲಾಗಿದೆ. ಏಕೆಂದರೆ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ರೈತರ
ದತ್ತಾಂಶವನ್ನು ಜೂ.15ರೊಳಗೆ ಸಂಗ್ರಹಿಸಲಾಗುವುದು. ಆದ್ದರಿಂದ ಕಸಬಾ ಹೋಬಳಿ ಎಲ್ಲಾ ರೈತರೂ ಕೆ-ಕಿಸಾನ್ ಯೋಜನೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.
ಕಾವಲ್ಲಮ್ಮದೇವಿ ಜಾತ್ರೆ ನಿಷೇಧ
ಕೊರಟಗೆರೆ: ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಬರಕ ಗ್ರಾಮ ಸಮೀಪದ ಸಂಗಾಪುರದ ಕಾವಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಆಚರಿಸದಂತೆ ತಹಸೀಲ್ದಾರ್ ರಾಮಚಂದ್ರಪ್ಪ ಆದೇಶಿಸಿದ್ದಾರೆ. ಬರಕ ಗ್ರಾಮದ ಗಾಂಧಿನಗರ ರಸ್ತೆಯಲ್ಲಿರುವ ಈ ದೇವಾಲಯದ ಸ್ಥಳದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಇತ್ಯರ್ಥವಾಗದ ಕಾರಣ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಕಾನೂನು ಸುವ್ಯವಸ್ಥೆಗೆ ದಕ್ಕೆ ಬಂದು, ಶಾಂತಿ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ ಈ ಜಾತ್ರಾ ಮಹೋತ್ಸವವನ್ನು ನಡೆಸಬಾರದೆಂದು ತಹಸೀಲ್ದಾರ್ ಆದೇಶದಲ್ಲಿ ತಿಳಿಸಿದ್ದಾರೆ.
ಬಸವಾಪಟ್ಟಣದಲ್ಲಿ ಎನ್‌ಎಸ್‌ಎಸ್ ಶಿಬಿರ
ತುಮಕೂರು: ಸಿದ್ಧಗಂಗಾ ವಿದ್ಯಾಸಂಸ್ಥೆಯ ಬಸವೇಶ್ವರ ಡಿಇಡಿ ವಿದ್ಯಾಲಯದ ವತಿಯಿಂದ ಮೇ 20 ರಿಂದ 26 ರವರೆಗೆ ಎನ್‌ಎಸ್‌ಎಸ್ ಶಿಬಿರವನ್ನು ತುಮಕೂರು ಗ್ರಾಮಾಂತರದ ಮೈದಾಳ ಗ್ರಾಪಂನ ಬಸವಾಪಟ್ಟಣದಲ್ಲಿ ಆಯೋಜಿಸಲಾಗಿದೆ. 20 ರಂದು ಮಧ್ಯಾಹ್ನ 3.30 ಕ್ಕೆ ಜಿಲ್ಲಾ ಡಯಟ್‌ನ ಪ್ರಿನ್ಸಿಪಾಲ್ ಹಾಗೂ ಉಪನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ಶಿಬಿರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ಎಸ್. ವಿಶ್ವನಾಥಯ್ಯ ವಹಿಸಲಿದ್ದಾರೆ. ಬಸವೇಶ್ವರ ಡಿಇಡಿ ಪ್ರಿನ್ಸಿಪಾಲ್
ಬಿ.ಎಸ್. ಮಲ್ಲಿಕಾರ್ಜುನ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಪಂ ಸದಸ್ಯ ಎಂ.ಬಿ. ಕುಮಾರ್ ಪಾಲ್ಗೊಳ್ಳಲ್ಲಿದ್ದಾರೆ.
21 ರಂದು ಸಂಜೆ 4.30 ಕ್ಕೆ ಸಿದ್ಧಗಂಗಾ ಆಂಗ್ಲ ಸಹ ಶಿಕ್ಷಕ ಬಿ.ಎಸ್. ಹರಪ್ರಸಾದ್ ವಿಜ್ಞಾನ ಮತ್ತು
ತತ್ವಶಾಸ್ತ್ರ ಕುರಿತು ಉಪನ್ಯಾಸ ನೀಡಲಿದ್ದಾರೆ. 22 ರಂದು (ಪ್ರತಿದಿನ ಸಂಜೆ 4.30 ಕ್ಕೆ) ಬಸವಾಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಆರ್. ನಾಗರಾಜು ಪ್ರಸ್ತುತ ಪ್ರಾಥಮಿಕ ಶಿಕ್ಷಣದ ಮಾದರಿ ಕುರಿತು, 23 ರಂದು ಎನ್‌ಎಸ್‌ಎಸ್ ಜಿಲ್ಲಾ ಕಾರ್ಯಕ್ರಮ ನೋಡಲ್ ಅಧಿಕಾರಿ ಸಿದ್ದೇಶ್, ಎನ್‌ಎಸ್‌ಎಸ್  ಯೋಜನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು, 24 ರಂದು ವಿದ್ವಾನ್ ಡಿ.ಎಸ್. ಚಂದ್ರಶೇಖರಯ್ಯನವರಿಂದ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಬಗ್ಗೆ, 25 ರಂದು ತುಮಕೂರಿನ ಹಿರಿಯ ವಕೀಲ ರವೀಂದ್ರನಾಥ ಠಾಗೂರ್ ಅವರಿಂದ ಸಮಗ್ರ ಕಾನೂನು ಅರಿವು ಕುರಿತು ವಿಶೇಷ ಉಪನ್ಯಾಸ ಏರ್ಪಾಟಾಗಿದೆ.
26 ರಂದು ಸಂಜೆ 4 ಗಂಟೆಗೆ ಶಿಬಿರದ ಮುಕ್ತಾಯ ಸಮಾರಂಭ ಏರ್ಪಾಟಾಗಿದ್ದು, ಸಿದ್ಧಗಂಗಾ ಮಠದ
ಸಿದ್ಧಲಿಂಗಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಯಟ್‌ನ ಪಿಎಸ್‌ಟಿಇ ವಿಭಾಗದ ಮುಖ್ಯಸ್ಥ ಡಿ. ರಂಗಸ್ವಾಮಿ ವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಬೆಂಗಳೂರಿನ ಎನ್‌ಎಸ್‌ಎಸ್ ರಾಜ್ಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಿ.ಎಂ. ರಾಜಲಕ್ಷ್ಮಿ ಮಾಡಲಿದ್ದಾರೆ.
ಪ್ರತಿಭಾನ್ವಿತರಿಗೆ ಪುರಸ್ಕಾರ
ತಿಪಟೂರು: ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ  ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ  ಗುರುವಂದನೆ ಮತ್ತು ನೂತನವಾಗಿ ಕಟ್ಟಿರುವ ಸಮುದಾಯ ಭವನದ ಭೋಜನಾಲಯ ಉದ್ಘಾಟನಾ ಸಮಾರಂಭವನ್ನು ಸಂಘದ ಅವರಣದಲ್ಲಿ ಜೂ.1ಮತ್ತು 2ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್. ಚಿದಾನಂದ್ ತಿಳಿಸಿದ್ದಾರೆ.
 ಸಮಾರಂಭದ ಅಂಗವಾಗಿ ಜೂ.2ರಂದು ತಾಲೂಕು ಒಕ್ಕಲಿಗ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. 2007-08ನೇ ಸಾಲಿನಿಂದ 2012-13ನೇ ಶೈಕ್ಷಣಿಕ ಸಾಲಿನವರೆಗೆ ಎಸ್.ಎಸ್.ಎಲ್.ಸಿ ಯಿಂದ ಸ್ನಾತಕೋತ್ತರ ಪದವಿಯವರೆಗಿನ ತರಗತಿಗಳಲ್ಲಿ ಅಂತಿಮ ವರ್ಷದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾನ್ವಿತರು ಹಾಗೂ ಒಕ್ಕಲಿಗ ಜನಾಂಗದ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಸನ್ಮಾನಿಸಲಾಗುವುದು. ನಗರ ಹಾಗೂ ಗ್ರಾಮೀಣ ವಿಭಾಗದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಪುರಸ್ಕರಿಸಲಾಗುವುದು.
ಆದ್ದರಿಂದ ಅರ್ಹ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ತಮ್ಮ ದೃಢೀಕರಿಸಿದ ಅಂಕಪಟ್ಟಿ ಮತ್ತು ದಾಖಲೆಗಳನ್ನು ಮೇ 25ರೊಳಗೆ ಸಂಘದ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಮೇ 28ರ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ 9448583811, 9482280397 ಅಥವಾ 9740136427 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.