ಡೊನೇಷನ್ ನಿಯಂತ್ರಿಸಲು ಸಮಿತಿ ರಚಿಸಿ
ಕ.ಪ್ರ.ವಾರ್ತೆ, ತುಮಕೂರು, ಮೇ 21
ಶಾಲಾ - ಕಾಲೇಜುಗಳಲ್ಲಿ ಡೊನೇಷನ್ ನಿಯಂತ್ರಿಸಲು ಡಿ.ಆರ್. ಸಮಿತಿ ರಚಿಸಲು ಎಸ್ಎಫ್ಐ (ಭಾರತೀಯ ವಿದ್ಯಾರ್ಥಿ ಪೆಡರೇಷನ್) ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿರುವ ಜಿಲ್ಲಾ ಎಸ್ಎಫ್ಐ, ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಜಿಲ್ಲಾದ್ಯಂತ ನಡೆಯುತ್ತಿದೆ. ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಿ ನೀತಿ- ನಿಯಮಗಳನ್ನು ಮೀರಿ ಡೊನೇಷನ್ ವಸೂಲಿಯಲ್ಲಿ ತೊಡಗಿವೆ ಎಂದು ಆರೋಪಿಸಿದೆ.
ದಾಖಲಾತಿ ಹಾಗೂ ಸಂಗ್ರಹಿಸಬೇಕಾದ ಶುಲ್ಕ, ಪಾಲಿಸಬೇಕಾದ ಮೀಸಲಾತಿ ನಿಯಮಗಳ ಕುರಿತು ರಾಜ್ಯ ಸರ್ಕಾರ (2002 - 20-11-2004) ಶಿಕ್ಷಣ ಇಲಾಖೆಯಲ್ಲಿ ಆಯುಕ್ತರ ಕಚೇರಿಯ ಮೂಲಕ ಸುತ್ತೋಲೆಯನ್ನು ಹೊರಡಿಸಿದೆ. 1983 ರ ಕರ್ನಾಟಕ ಶಿಕ್ಷಣ ಕಾಯಿದೆಯನ್ವಯ ಮತ್ತು 1995 ರ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕ್ಲಾಸಿಫಿಕೇಷನ್, ರೆಗ್ಯುಲೇಷನ್ ಮತ್ತು ಪ್ರಿಸ್ಕಿಪೇಷನ್ ಕರಿಕುಲಂ) ಕಾಯಿದೆ ನಿಯಮಗಳು 28-10-1999 ರಂದು ಜಾರಿಗೆ ಬರುವ ಮೂಲಕ ಶಿಕ್ಷಣದ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕಲು ಉದ್ದೇಶಿಸಲಾಗಿದೆ. ಈ ನಿಯಮಗಳ ಪ್ರಕಾರ ಸರ್ಕಾರ ನಿಗದಿಪಡಿಸಿದಂತೆ ಶುಲ್ಕ ಖಾಸಗಿ ಕಾಲೇಜುಗಳಿಗೆ ಪ್ರಥಮ ಪಿಯೂಸಿಗೆ 2013-14 ನೇ ಸಾಲಿನಲ್ಲಿ 840 ರು. (ಕಲಾ, ವಿಜ್ಞಾನ, ವಾಣಿಜ್ಯ) ಸರ್ಕಾರಿ ಕಾಲೇಜುಗಳಿಗೆ ಪ್ರಥಮ ಪಿಯೂಸಿಗೆ ಮತ್ತು ದ್ವಿತೀಯ ಪಿಯೂಸಿ ಸೇರಿ 420 ರು. ಶುಲ್ಕ ಎಂದು ಸೂಚಿಸಲಾಗಿದೆ. ಆದರೆ ಜಿಲ್ಲೆಯ ಕೆಲ ಕಾಲೇಜುಗಳಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಮನಸ್ಸಿಗೆ ಬಂದ ಹಾಗೆ ಶುಲ್ಕಗಳನ್ನು ವಸೂಲಿ ಮಾಡುತ್ತಿವೆ ಎಂದು ದೂರಿರುವ ಎಸ್ಎಫ್ಐ, ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.
ಹಾಗೂ ಪ್ರತಿಯೊಂದು ಶಾಲಾ - ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಪಡೆದ ಶುಲ್ಕದ ವಿವರಗಳನ್ನು ಕಡ್ಡಾಯವಾಗಿ ಸೂಚನಾ ಫಲಕಗಳಲ್ಲಿ ಪ್ರಕಟಿಸಬೇಕು. ವಿದ್ಯಾರ್ಥಿಗಳಿಂದ ಪಡೆದ ಶುಲ್ಕಕ್ಕೆ ರಸೀದಿಗಳನ್ನು ಕಡ್ಡಾಯವಾಗಿ ನೀಡುವಂತೆ ಡಿಸಿ, ಬಿಇಓ, ಡಿಡಿಪಿಐಗಳು ಕಡ್ಡಾಯವಾಗಿ ಸೂಚಿಸಬೇಕು ಎಂದು ಆಗ್ರಹಿಸಿದೆ.
ಅಭಿವೃದ್ಧಿ ಶುಲ್ಕಕ್ಕೆ ಅವಕಾಶ: ಕಾಲೇಜು ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸಲು ಅವಕಾಶವಿದ್ದು, ವಿದ್ಯಾರ್ಥಿಗಳ ಇಚ್ಚೆಗನುಗುಣವಾಗಿ, ವಿದ್ಯಾರ್ಥಿಗಳು ನೀಡಿದಷ್ಟು ಹಣವನ್ನು ಮಾತ್ರ ಪಡೆಯಬಹುದಾಗಿದೆ. ಆದ್ದರಿಂದ
ರೆಗ್ಯೂಲೇಷನ್ ಸಮಿತಿಯಲ್ಲಿ ಕೆಳಗೆ ಸೂಚಿಸಿದ ಅಧಿಕಾರಿಗಳ ಮೂಲಕ ಸಭೆ ನಡೆಸಲು ಅವಕಾಶವಿದೆ. ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ, ಡಿಡಿಪಿಐ ಕಾರ್ಯದರ್ಶಿಯಾಗಿ, ಸದಸ್ಯರಾಗಿ ಜಿಪಂ ಸಿಇಓ, ಜಿಲ್ಲಾ ಮುಖ್ಯ ಎಂಜಿನಿಯರ್ ಸೇರಿದಂತೆ ಪೋಷಕರು, ಶಿಕ್ಷಣಾಸಕ್ತ ವಿದ್ಯಾರ್ಥಿ ಪ್ರತಿನಿಧಿಗಳು ಈ ಸಮಿತಿಯ ಸದಸ್ಯರನ್ನಾಗಿ ನೇಮಿಸಿಕೊಳ್ಳಬಹುದಾಗಿದೆ.
ರಚನೆಯಾಗಿಲ್ಲ: ಈ ಸಮಿತಿ ಅಕ್ರಮವಾಗಿ ಡೊನೇಷನ್ ವಸೂಲಿ, ಪ್ರವೇಶಾತಿಯಲ್ಲಿ ಮೀಸಲು ಅನ್ಯಾಯವಾಗದಂತೆ ಕ್ರಮವಹಿಸಬೇಕೆಂದು ನಿಯಮವಿದ್ದರೂ, ಬಹುತೇಕ ಸಮಿತಿಗಳಲ್ಲಿ ಈ ಡಿಆರ್ ಸಮಿತಿಯೇ ರಚನೆಯಾಗಿಲ್ಲ. ಹೀಗಾಗಿ ಎಲ್ಲೆ ಇಲ್ಲದೆ ಡೊನೇಷನ್ ವಸೂಲಿ ನಡೆಯುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಹೆಚ್ಚಿನ ಗಮನವನ್ನು ಕೂಡಲೇ ಇತ್ತ ನೀಡುವಂತೆ, ಡಿಆರ್ ಸಮಿತಿಯನ್ನು ರಚಿಸುವಂತೆ ಎಸ್ಎಫ್ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ. ಶಿವಣ್ಣ ಹಾಗೂ ನಗರಾಧ್ಯಕ್ಷ ಜಿ. ದರ್ಶನ್ ಒತ್ತಾಯಿಸಿದ್ದಾರೆ.
ಡೊನೇಷನ್ ಹಾವಳಿಗೆ ಸಂಬಂಧಿಸಿದಂತೆ ಎಸ್ಎಫ್ಐ ಗಮನಕ್ಕೆ ತರುವಂತೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

