ತುಮಕೂರು

ಮದ್ಯದಂಗಡಿ ಸ್ಥಳಾಂತರಕ್ಕೆನೋಟಿಸ್

Published On :

ಹುಳಿಯಾರು: ಪಟ್ಟಣದ ಹುಳಿಯಾರಮ್ಮ ದೇವಸ್ಥಾನದ ಎದುರಿನ ಕೋ-ಆಪರೇಟೀವ್ ಸೊಸೈಟಿಯ ಮೂರನೇ ಮಳಿಗೆಯಲ್ಲಿರುವ ಮದ್ಯದಂಗಡಿಯು ಆಕ್ಷೇಪಣಾರ್ಹ ಸ್ಥಳದಲ್ಲಿರುವುದರಿಂದ ಇನ್ನೊಂದು ತಿಂಗಳೊಳಗಾಗಿ
ಸ್ಥಳಾಂತರಿಸಿಕೊಳ್ಳುವಂತೆ ಸನ್ನದುದಾರರಿಗೆ ಅಬಕಾರಿ ಉಪ ಆಯುಕ್ತರು ನೋಟಿಸ್ ನೀಡಿದ್ದಾರೆ.
 ಕೋ-ಅಪರೇಟೀವ್ ಸೊಸೈಟಿಗೆ ಸೇರಿದ ಮಳಿಗೆ ನಂ.3 ರಲ್ಲಿ ಎನ್.ಜಿ.ನಾಗರಾಜು ಎಂಬುವರು ರಂಗನಾಥ ಲಿಕ್ಕರ್ ಶಾಪ್ ನಡೆಸುತ್ತಿದ್ದು, ಜನನಿಬಿಡ ಹಾಗೂ ದೇವಾಲಯದ ಸನಿಹದಲ್ಲಿರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಇದನ್ನು ಸ್ಥಳಾಂತರಿಸುವಂತೆ ಸದರಿ ಮಳಿಗೆ ಇರುವ ಸೊಸೈಟಿಯವರು ಸೇರಿದಂತೆ ನಾನಾ ದೇವಾಲಯಗಳ ಸಮಿತಿಯವರು ಹಾಗೂ ವಿವಿಧ ಸಂಘಟನೆಗಳು ಕಳೆದೆರಡು ವರ್ಷಗಳಿಂದ ಒತ್ತಾಯಿಸಿದ್ದರು. ಈ ಮದ್ಯದಂಗಡಿಗೆ  ಸಮೀಪದಲ್ಲೇ ಅಂದರೆ 45ಮೀ ಅಂತರದಲ್ಲಿ ಗ್ರಾಮದೇವತೆ ಹುಳಿಯಾರಮ್ಮ ಸನ್ನಿಧಿ, 159 ಮೀ ದೂರದಲ್ಲಿ ಕೆಂಚಮ್ಮದೇವಿ ದೇವಾಲಯ,101 ಮೀ ದೂರದಲ್ಲಿ ಬೀರಲಿಂಗೇಶ್ವರಸ್ವಾಮಿ ಸನ್ನಿಧಿ,
98 ಮೀ ಅಂತರದಲ್ಲಿ ರಂಗನಾಥಸ್ವಾಮಿ ದೇವಾಲಯಗಳಿದ್ದು ನಿತ್ಯ ನೂರಾರು ಮಂದಿ ಮಹಿಳೆಯರು, ಮಕ್ಕಳು  ಸಂಚರಿಸುತ್ತಾರೆ. ಅಲ್ಲದೆ ಈ ಮದ್ಯದ ಅಂಗಡಿಯ ಪಕ್ಕದ ಕಟ್ಟಡದಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಹಾಗೂ ಆಸ್ಪತ್ರೆಯಿದ್ದು, ವಾಣಿಜ್ಯ ಸ್ಥಳವಾದ ಈ ಜಾಗದಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುವುದರಿಂದ ಇದನ್ನು ಮುಂದಿನ ಅವಧಿಗೆ ನವೀಕರಿಸದೆ ಸ್ಥಳಾಂತರಿಸಬೇಕೆಂದು ಆಕ್ಷೇಪಣ ಅರ್ಜಿ ಸಲ್ಲಿಸಿದ್ದರು.
ಸಾರ್ವಜನಿಕರ ದೂರು ಅರ್ಜಿಗಳ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ ಅಬಕಾರಿ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸದರಿ ಸನ್ನದು ಸ್ಥಳವು
ಕರ್ನಾಟಕ ಅಬಕಾರಿ ನಿಯಮಗಳ ಪ್ರಕಾರ ಆಕ್ಷೇಪಣಾ ಸ್ಥಳವಾಗಿದ್ದು,  ಈ ಪ್ರದೇಶದ ಶಾಂತಿ ನೆಮ್ಮದಿ ಸುವ್ಯವಸ್ಥೆ, ಸುರಕ್ಷತೆ ದೃಷ್ಟಿಯಿಂದ ಸನ್ನದನ್ನು ಬೇರೊಂದು ನೀರಾಕ್ಷೇಪಣ ಸ್ಥಳಕ್ಕೆ ಸ್ಥಳಾಂತರಿಸಿಕೊಳ್ಳಲು
ತುಮಕೂರು ಜಿಲ್ಲಾ ಅಬಕಾರಿ ಉಪಆಯುಕ್ತರು ಆದೇಶ ಹೊರಡಿಸಿದ್ದಾರೆ. ಜೂನ್ 14 ರ ವರೆಗೆ ಗಡುವು ನೀಡಿದ್ದು, ಸ್ಥಳಾಂತರಿಸದಿದ್ದಲ್ಲಿ ನಿಯಮಾನುಸಾರ ಸನ್ನದನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದೆಂದು ಸೂಚಿಸಿದ್ದಾರೆ.
ಅಬಕಾರಿ ಉಪಆಯುಕ್ತರ ಕ್ರಮಕ್ಕೆ ಬೀರಲಿಂಗೇಶ್ವರ ದೇವಾಲಯ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ವೇದಿಕೆ ಸೇರಿದಂತೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದು ಮುಂದೆಂದು ಈ ಭಾಗದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಕಲ್ಪಿಸಬಾರದೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.