ತುಮಕೂರು

ಹಾಸ್ಯಾಸ್ಪದ ಹೇಳಿಕೆ ನಿಲ್ಲಿಸಲಿ: ರಫೀಕ್

Published On :

ಕ.ಪ್ರ.ವಾರ್ತೆ ್ಣ ತುಮಕೂರು ್ಣ ಮೇ 22
ತಾವು ಶಾಸಕರಾದ ಮೇಲೆ ತುಮಕೂರು ನಗರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಿಶೇಷವಾಗಿ ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ತೀವ್ರವಾಗಿದೆ ಎಂಬ ಬಿಜೆಪಿ ಮುಖಂಡ, ಮಾಜಿ ಸಚಿವ ಸೊಗಡು ಶಿವಣ್ಣನವರ ಟೀಕೆಗೆ ತುಮಕೂರು ನಗರ ಕಾಂಗ್ರೆಸ್ ಶಾಸಕ ಡಾ. ರಫೀಕ್ ಅಹಮದ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೊಗಡು ಶಿವಣ್ಣ ಹಿರಿಯ ರಾಜಕಾರಣಿಯಾಗಿದ್ದು, ಸೋತ ನಂತರ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಇನ್ನು ಕಸ ವಿಲೇವಾರಿಗೆ ಸಂಬಂಧಿಸಿದಂತೆ ಮಾಡಿರುವ ಆರೋಪ ಹಾಸ್ಯಾಸ್ಪದವಾದದ್ದು. ಈಗಾಗಲೇ ಅಜ್ಜಗೊಂಡನಹಳ್ಳಿಯಲ್ಲಿ ಕಸ ವಿಲೇವಾರಿ ಘಟಕಕ್ಕೆ ಚಾಲನೆ ನೀಡಲಾಗಿದೆ. ಕಾಂಪೌಂಡ್ ನಿರ್ಮಿಸಲಾಗಿದೆ. ಕಸ ವಿಂಗಡಿಸುವ, ಪ್ಲಾಸ್ಟಿಕ್ ಬೇರ್ಪಡಿಸುವ ಯಂತ್ರ ಖರೀದಿಸಲು ಸಿದ್ದತೆ ನಡೆದಿದೆ. ತಾವು ಶಾಸಕರಾದ ನಂತರ ಕಸ ವಿಲೇವಾರಿ ಘಟಕದಲ್ಲಿ ಪ್ಲಾಟ್ ಪಾರ್ಮ್ ನಿರ್ಮಿಸಲಾಗಿದೆ. ಯಾವುದೇ ಕಾರಣಕ್ಕೂ ಜನತೆಗೆ, ಕೃಷಿಗೆ, ಅಂತರ್ಜಲಕ್ಕೆ ತೊಂದರೆಯಾಗದಂತೆ ಕಸ ವಿಲೇವಾರಿ ನಡೆಸಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಇನ್ನು ನಗರ ಸಾರಿಗೆಯಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸಗಳಾಗಿವೆ. ಶೆಟ್ಟಿಹಳ್ಳಿ ಅಂಡರ್ ಪಾಸ್ ನಿರ್ಮಾಣ ಕಾರ್ಯ ನಡೆದಿರುವುದರಿಂದ ಆ ಭಾಗದಲ್ಲಿ ನಗರ ಸಾರಿಗೆ ಬಸ್ ಗಳಲ್ಲಿ ವ್ಯತ್ಯಯವಾಗಿತ್ತು. ಈಗ ಸರಿಪಡಿಸಲಾಗಿದೆ. ತಾವು ಶಾಸಕರಾದ ನಂತರ 40 ಬಸ್‌ಗಳನ್ನು ಹೊಸದಾಗಿ ಖರೀದಿಸಲು ಸರ್ಕಾರ ಅನುಮತಿ ನೀಡಿದೆ. ಈಗಾಗಲೇ 5 ಬಸ್‌ಗಳು ತುಮಕೂರಿಗೆ ಬಂದಿವೆ ಎಂದು ಮಾಹಿತಿ ನೀಡಿದರು.
ಕುಡಿವ ನೀರಿನ ಸಮಸ್ಯೆಯಿಲ್ಲ: ಇನ್ನು ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸದ್ಯ ಯಾವುದೇ ಸಮಸ್ಯೆಯಿಲ್ಲ. ಹಾಲಿ ತುಮಕೂರಿನಲ್ಲಿ ಮಳೆಯಾಗಿರುವದರಿಂದ ಬುಗುಡನಹಳ್ಳಿಕೆರೆಗೆ ಸಾಕಷ್ಟು ನೀರು ಹರಿದು ಬಂದಿದೆ. ಇನ್ನು 3 ತಿಂಗಳ ಕಾಲ ಯಾವುದೇ ಸಮಸ್ಯೆಯಿಲ್ಲ. ಕಳೆದ ವರ್ಷದಿಂದ 150 ಬೋರ್‌ವೆಲ್‌ಗಳನ್ನು ಕೊರೆಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಇದರ ಅರಿವಿಲ್ಲದ ಮಾಜಿ ಸಚಿವ ಸೊಗಡು ಶಿವಣ್ಣ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ ಎಂದು ರಫೀಕ್ ಅಸಮಾಧಾನ ವ್ಯಕ್ತಪಡಿಸಿದರು.
ಅತಿ ಹೆಚ್ಚು ಪ್ರಶ್ನೆ ಕೇಳಿದ್ದೇನೆ: ತಾವು ಶಾಸಕರಾದ ಮೇಲೆ ವಿಧಾನಸಭೆಯಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದು, ಕುಡಿಯುವ ನೀರಿಗೆ ಸಂಬಂಧಿಸಿದಂತೆಯೇ ಇವೆ. ಕಳೆದ 20 ವರ್ಷಗಳಿಂದ ಶಾಸಕರಾಗಿದ್ದ ಸೊಗಡು ಶಿವಣ್ಣನವರು ತಾವು ಶಾಸಕರಾದ ಒಂದು ವರ್ಷದೊಳಗೆ ಕೇಳಿದಷ್ಟು ಪ್ರಶ್ನೆಗಳನ್ನು ಕೇಳಿಲ್ಲ. ಈ ಕುರಿತು ತಾವು ಸವಾಲಿಗೂ ಸಿದ್ಧ ಎಂದರು.
ವಾಕ್ ಮಾಡಲು ನಿರ್ಭಂಧ ವಿಧಿಸಿಲ್ಲ: ತುಮಕೂರು ವಿವಿ ಆಂಗಳದಲ್ಲಿ ಅನುಮತಿಯಿಲ್ಲದೆ ಕ್ರಿಕೆಟ್ ಆಡುತ್ತಿದ್ದ ಯುವಕರಿಗೆ ನಿರ್ಬಂಧ ವಿಧಿಸಲಾಗಿತ್ತೇ ವಿನಃ ವಾಕಿಂಗ್ ಮಾಡುವ ಸಾರ್ವಜನಿಕರಿಗಲ್ಲ. ಅಮಾನಿಕೆರೆಯಲ್ಲಿ ಪುಂಡಾಟ ನಡೆಸುತ್ತಿದ್ದ ಯುವಕರನ್ನು ನಿಯಂತ್ರಿಸಲಾಗಿದೆ. ಖಾಸಗಿ ಬಸ್ ನಿಲ್ದಾಣಕ್ಕೆ ಈಗಾಗಲೇ 3 ಬಾರಿ ಭೇಟಿ ನೀಡಿದ್ದು ಸಮಸ್ಯೆಗಳನ್ನು ಅರಿತಿದ್ದೇನೆ. ಮೂಲ ಸೌಲಭ್ಯ ಕಲ್ಪಿಸಿ, ಸ್ವಚ್ಛತೆ ಕಾಪಾಡುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಫುಟ್ ಫಾತ್ ಒತ್ತುವರಿ ತೆರವು: ಫುಟ್‌ಪಾತ್ ಒತ್ತುವರಿಗೆ ಸಂಬಂಧಿಸಿದಂತೆ ಕೂಲಂಕುಶವಾಗಿ ಪರಿಶೀಲಿಸಿ, ಕ್ರಮ ಜರುಗಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತಾವು ಯಾವುದೇ ರೌಡಿಗಳಿಗೆ ಆಶ್ರಯ ನೀಡುವುದಾಗಲಿ, ಪ್ರೋತ್ಸಾಹ ನೀಡುವುದಾಗಲೀ ಮಾಡುತ್ತಿಲ್ಲ ಎಂದರು.
ತಾವು ತುಮಕೂರಿಗೆ 1995 ರಲ್ಲಿ ಬಂದಿದ್ದು, ಅಲ್ಲಿಂದ ಇಲ್ಲಿಯವರೆಗೂ ಇನ್‌ಕಂ ಟ್ಯಾಕ್ಸ್‌ಗೆ ಸಂಬಂಧಿಸಿದಂತೆ ಸಮಗ್ರ ವಿವರ ನೀಡುವುದಾಗಿಯೂ, ಯಾವುದೇ ಭ್ರಷ್ಟಾಚಾರ ಮಾಡಿಲ್ಲವೆಂದರು. ಆದರೆ ಸೊಗಡು ಶಿವಣ್ಣ 1994 ರಲ್ಲಿ ಎಷ್ಟು ಆಸ್ತಿ ಹೊಂದಿದ್ದರು. 2013 ರಲ್ಲಿ ಎಷ್ಟು ಆಸ್ತಿಯ ಒಡೆಯರಾಗಿದ್ದಾರೆ. ಹೇಗೆ ಸಂಪಾದಿಸಿದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲಿ ಎಂದು ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಕಾನೂನು ವಿಭಾಗದ ನಿರಂಜನ್, ಸಿಮೆಂಟ್ ಮಂಜುನಾಥ್, ನವೀದ್ ಫಾಷಾ, ರಾಮಕೃಷ್ಣ, ಅನ್ಲರ್ ಫಾಷಾ, ಸೀತಾ, ಜಕಣಾಚಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.