ಅಸಮರ್ಪಕ ವಿದ್ಯುತ್ ಪೂರೈಕೆಗೆ ಆಕ್ರೋಶ
ಗುಬ್ಬಿ: ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ರೈತರ ಕೃಷಿ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿದ್ದು ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ ತಾಲೂಕಿನ ಹೊದಲೂರು ಸುತ್ತಮುತ್ತಲ ಗ್ರಾಮಸ್ಥರು ಪಟ್ಟಣದ ಬೆಸ್ಕಾಂ ಕಚೇರಿಯ ಬಾಗಿಲು ಹಾಕಿ ಪ್ರತಿಭಟನೆ ನಡೆಸಿದರು.
ನಿಯಮಾನುಸಾರ ಗ್ರಾಮೀಣ ಪ್ರದೇಶಕ್ಕೆ 7 ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಬೇಕಾಗಿದ್ದು ಪ್ರಸ್ತುತ ಕೇವಲ 3 ಗಂಟೆಗಳ ಕಾಲ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ರೈತರ ಜೀವನಾಡಿಯಾದ ಕೃಷಿ ಬೆಳೆಗಳು ಒಣಗುತ್ತಿದ್ದು ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿಗೂ ಪರಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಇಲ್ಲದಿದ್ದರೆ ಮತ್ತಷ್ಟು ಉಗ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಾಲೂಕು ಪಂಚಾಯ್ತಿ ಸದಸ್ಯ ಸೋಮೇಶ್ ಎಚ್ಚರಿಕೆ ನೀಡಿದರು.
ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಹಲವಾರು ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅನಿಯಮಿತವಾಗಿ ವಿದ್ಯುತ್ ನೀಡುತ್ತಿದ್ದು ಯಾವ ಸಮಯದಲ್ಲಿ
ವಿದ್ಯುತ್ ಸರಬರಾಜಾಗುತ್ತದೆ ಎಂದು ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಅಲ್ಪ ಸ್ವಲ್ಪ ಮಳೆ ಬಂದರೂ ಸಾಕು ಇಡೀ ದಿನ ವಿದ್ಯುತ್ ಸಂಪೂರ್ಣ ನಿಲುಗಡೆಯಾಗುತ್ತದೆ. ರಾತ್ರಿ ವೇಳೆ ಕತ್ತಲಿನಲ್ಲಿ ಕಾಲಹರಣ
ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಲಕ್ಷಾಂತರ ರು. ಸಾಲ ಮಾಡಿ ಬೆಳೆದ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿದ್ದು ಸರ್ಕಾರದ ನಿಯಮಾನುಸಾರ ಕನಿಷ್ಠ ಪಕ್ಷ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ನೀಡುವಂತೆ ಬೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದರು.
ಓವರ್ ಲೋಡ್: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಇಇ ನರೇಂದ್ರ ಮಾತನಾಡಿ ಗುಬ್ಬಿ ಬೆಸ್ಕಾಂ ವಿಭಾಗದಲ್ಲಿನ ವಿದ್ಯುತ್ ಉಪಸ್ಥಾವರ ಓವರ್ ಲೋಡ್ ಆಗಿದ್ದು ಮತ್ತೊಂದು ಉಪಸ್ಥಾವರ ನಿರ್ಮಾಣವಾಗುವವರೆಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಲಾಗುವುದು. ಅಲ್ಲಿಯವರೆಗೂ ರೈತರು ಸಹಕರಿಸುವಂತೆ ಮನವಿ ಮಾಡಿದ ಮೇರೆಗೆ ರೈತರು ಪ್ರತಿಭಟನೆಯನ್ನು ಸ್ಥಗಿತ ಗೊಳಿಸಿದರು. ಬೆಸ್ಕಾಂ ಎಂಜಿನಿಯರ್ ಅನಿಲ್‌ಕುಮಾರ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಹಗಲು ವೇಳೆ ಎರಡೂವರೆ ಗಂಟೆ ಮತ್ತು ರಾತ್ರಿ ವೇಳೆ 3 ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಹೊದಲೂರು ಪ್ರಸನ್ನ, ಬಸವಲಿಂಗಯ್ಯ, ಗಂಗಾಧರ್, ರಾಜಣ್ಣ ಸೇರಿದಂತೆ ಕಿಟ್ಟದಕುಪ್ಪೆ, ಹೇರೂರು ಮುಂತಾದ ಗ್ರಾಮಗಳ ರೈತರು ಭಾಗವಹಿಸಿದ್ದರು.
ಗುಬ್ಬಿ ಬೆಸ್ಕಾಂ ವಿಭಾಗದಲ್ಲಿನ ವಿದ್ಯುತ್ ಉಪಸ್ಥಾವರ ಓವರ್ ಲೋಡ್ ಆಗಿದ್ದು ಮತ್ತೊಂದು ಉಪಸ್ಥಾವರ ನಿರ್ಮಾಣವಾಗುವವರೆಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಲಾಗುವುದು. ಅಲ್ಲಿಯವರೆಗೂ ರೈತರು ಸಹಕರಿಸುವಂತೆ
- ನರೇಂದ್ರ, ಬೆಸ್ಕಾಂ ಇಇ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

