ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನ
ಕೊರಟಗೆರೆ: ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನು ಸಂಬಂಧಿಸಿದ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರಿಂದ ಅಥವಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ಅಂಬೇಡ್ಕರ್ ಭವನದ ಹತ್ತಿರ ಕೊರಟಗೆರೆ ಇಲ್ಲಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಕಚೇರಿಗೆ ಅಥವಾ ಸಂಬಂಧಿಸಿದ ನಿಲಯ ಮೇಲ್ವಿಚಾರಕರುಗಳಿಗೆ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿಯನ್ನು ಸಂಪರ್ಕಿಕಿಸಬಹುದಾಗಿದೆ.
ಎನ್ಜಿಒ ಅರ್ಜಿ ಆಹ್ವಾನ
ತುಮಕೂರು: ಗ್ರಾಹಕರ ಸಂರಕ್ಷಣಾ ಕಾಯ್ದೆ 1986 ರನ್ವಯ ಗ್ರಾಹಕರಿಗೆ ಹೆಚ್ಚಿನ ತಿಳುವಳಿಕೆ ನೀಡುವ ಸಲುವಾಗಿ, ಗ್ರಾಹಕ ಸಂಬಂಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಗ್ರಾಹಕ ಚಟುವಟಿಕೆ ನಡೆಸುತ್ತಿರುವ ಎನ್.ಜಿ.ಓ., ವಿಸಿಒಸ್ಗಳಿಂದ ಅರ್ಜಿ ಕರೆಯಲಾಗಿದೆ. ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಗ್ರಾಹಕ ಚಟುವಟಿಕೆ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಎನ್.ಜಿ.ಒ, ವಿಸಿಒಸ್ಗಳು ನಿಗದಿತ ನಮೂನೆಯಲ್ಲಿ ಪೂರ್ಣ ಮಾಹಿತಿಗಳನ್ನು ಭರ್ತಿ ಮಾಡಿ ಜೂನ್ 6 ರೊಳಗೆ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ಅವರಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಅರ್ಜಿ ಸಲ್ಲಿಸಿದ ಅರ್ಜಿದಾರರ ಪೈಕಿ ಅರ್ಹ ಒಂದು ಎನ್.ಜಿ.ಓ, ವಿಸಿಒಸ್ ಅರ್ಜಿಯನ್ನು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರವನ್ನು ತೆರೆಯಲು ಆಯ್ಕೆ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ
ತುಮಕೂರು: ಇಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಹೊಲಿಗೆ ತರಬೇತಿ ಕೇಂದ್ರದಲ್ಲಿ 2014-15ನೇ ಸಾಲಿನಲ್ಲಿ ತರಬೇತಿ ಪಡೆಯಲು ಇಚ್ಛೆಯುಳ್ಳ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಪ್ರವರ್ಗ-1, 2ಎ, 2ಬಿ, 3ಎ, 3ಬಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸೇರಿದ ಅರ್ಹ ನಿರುದ್ಯೋಗಿ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆಯುಳ್ಳವರು ನಿಗದಿತ ಅರ್ಜಿ ನಮೂನೆಯನ್ನು ವಿಸ್ತರಣಾಧಿಕಾರಿಗಳ ಕ:ಕೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತುಮಕೂರು ತಾಲೂಕು, ತುಮಕೂರು ಇಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜೂನ್ 10 ರೊಳಗಾಗಿ ಸಲ್ಲಿಸುವುದು. ಅರ್ಜಿಯೊಂದಿಗೆ 7ನೇ ತರಗತಿ ಅಂಕಪಟ್ಟಿ, ಜನ್ಮ ದಿನಾಂಕದ ದಾಖಲೆ ಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಲಗತ್ತಿಸಬೇಕು ಎಂದು ತುಮಕೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ತುಮಕೂರು: ತಿಪಟೂರು ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾ ವತಿಯಿಂದ ನಡೆಯುತ್ತಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು ಹಾಗೂ ಆಶ್ರಮ ಶಾಲೆ ಮತ್ತು ಅನುದಾನಿತ ವಿದ್ಯಾರ್ಥಿ ನಿಲಯಗಳ ಹಾಗೂ ಅನಾಥಾಲಯಗಳು ಇವುಗಳಲ್ಲಿ 2014-15ನೇ ಸಾಲಿಗಾಗಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಗಳನ್ನು ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಿಪಟೂರು ತಾಲೂಕು ಅಥವಾ ವಿದ್ಯಾರ್ಥಿಗಳು ಸೇರಬಯಸುವ ವಿದ್ಯಾರ್ಥಿ ನಿಲಯಗಳಿಂದ ಉಚಿತವಾಗಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 5 ರೊಳಗಾಗಿ ಸಲ್ಲಿಸುವುದು. ನವೀಕರಣ ವಿದ್ಯಾರ್ಥಿಗಳು ಮೇ 30 ರೊಳಗೆ ಅರ್ಜಿ ಸಲ್ಲಿಸತಕ್ಕದ್ದು.
ಮಾಹಿತಿ ಪ್ರಚಾರ ಸಪ್ತಾಹ
ತಿಪಟೂರು: ತಾಲೂಕಿನ ಕೃಷಿ ಇಲಾಖೆಯ ಭೂ ಚೇತನ ಯೋಜನೆಯಡಿಯಲ್ಲಿನ ಯೋಜನೆ ಮಹತ್ವ ಕುರಿತಾಗಿ ಗುರುವಾರದಿಂದ ತಾಲೂಕಿನ ಎಲ್ಲಾ ಗ್ರಾಮದ ರೈತರಿಗೆ ಅರಿವು ಮೂಡಿಸಲಾಗುವುದು.
ಕರಪತ್ರ, ಸ್ವಿಕರ್ಸ್, ಸೈಕಲ್ ಜಾಥಾ, ಬೈಕ್ ಜಾಥಾದ ಮುಖೇತ ಮಾಹಿತಿ ಪ್ರಚಾರ ಸಪ್ತಾಹವನ್ನು ಇಲಾಖೆಯ ಅಧಿಕಾರಿಗಳು ಮತ್ತು ರೈತ ಅನುವುಗಾರರ ಮುಖೇನ ಹಮ್ಮಿಕೊಂಡಿದ್ದು ಸದರಿ ಯೋಜನೆಯಡಿ ರೈತರಿಗೆ ಲಭ್ಯವಿರುವ ವಿವಿಧ ಸವಲತ್ತುಗಳು, ತಾಂತ್ರಿಕ ಹಾಗೂ ಪರಿಕರಗಳ ಕುರಿತಾಗಿ ಮಾಹಿತಿ ನೀಡಲಿದ್ದು, ರೈತ ಬಾಂದವರು ಸಪ್ತಾಹಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾಹಿತಿ ಪಡೆದು ಯಶಸ್ವಿಗೊಳಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಶ್ರೀ ಕಾಯಕಯೋಗಿ ಸಂಘದ ವಾರ್ಷಿಕ ಸಭೆ ಇಂದು
ತಿಪಟೂರು: ಪಟ್ಟಣದ ಶ್ರೀ ಕಾಯಕಯೋಗಿ ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಗುರುವಾರಸಂಘದ ಆವರಣದಲ್ಲಿ ಏರ್ಪಡಿಸಲಾಗಿದೆ.
ಅಧ್ಯಕ್ಷತೆಯನ್ನು ಶಾಸಕ ಕೆ.ಷಡಕ್ಷರಿ ವಹಿಸಲಿದ್ದು, ಉದ್ಘಾಟನೆಯನ್ನು ಲೋಕಸಭಾ ಸದಸ್ಯ ಎಸ್.ಪಿ. ಮುದ್ದಹನುಮೇಗೌಡರು, ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ಸಚಿವ ವೆಂಕಟರಮಣಪ್ಪ, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ನೆರವೇರಸಲಿದ್ದಾರೆ. ಸಂಘದ ಅಧ್ಯಕ್ಷ ಶಂಕರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಚಂದ್ರಕಲಾಗೆ ಪಿಎಚ್.ಡಿ ಪದವಿ
ತಿಪಟೂರು: ಪಟ್ಟಣದ ಕಲ್ಪತರು ಎಂಜಿನಿಯರಿಂಗ್ ಕಾಲೇಜು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹೆಚ್.ಎನ್.ಚಂದ್ರಕಲಾ ಅವರು ತುಮಕೂರು ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ.ಶಿವಕುಮಾರಯ್ಯ ಹಾಗೂ ಮೈಸೂರು ಎಸ್.ಜೆ.ಕಾಲೇಜು ಆಫ್ ಎಂಜಿನಿಯರಿಂಗ್ ವಿಭಾಗದ ಪಾಲಿಮರ್ ಸೈನ್ಸ್ ಅಂಡ್ ಟೆಕ್ನಾಲಜಿ ಪ್ರಾಧ್ಯಾಪಕರಾದ ಡಾ. ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ನ್ಯಾನೊ ಮೆಟಲ್ ಆಕ್ಸೈಡ್ಸ್ ಇನ್ ಕಾರ್ಪೋರೇಟೆಡ್ ವಾಟಲ್ ಸೊಲ್ಯುಬಲ್ ಪಾಲಿಮರ್ ಯಾನೊ ಕಂಪೋಸಿಟ್ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಹೆಚ್.ಡಿ.ಪದವಿ ನೀಡಿ ಗೌರವಿಸಿದೆ.
ಭಾವೈಕ್ಯತೆಯಿಂದ ಜೀವಿಸಿ: ನರಸಿಂಹ
ಪಾವಗಡ: ಪರಿಶಿಷ್ಟ ಜಾತಿ ಹಾಗೂ ವರ್ಗ ಸಮುದಾಯಗಳು ಗ್ರಾಮಗಳಲ್ಲಿ ಭಾವೈಕ್ಯತೆಯಿಂದ ಜೀವಿಸಬೇಕೆಂದು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಆರ್.ಎಂ. ನರಸಿಂಹ ಅವರು ಸಲಹೆ ನೀಡಿದರು. ಅವರು ತಾಲೂಕಿನ ಕ್ಯಾತಗಾನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ದಲಿತರು ಸೇರಿದಂತೆ ಎಲ್ಲಾ ಸಮುದಾಯದವರು ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ರೂಪಿಸಿ ಎಂದು ಕರೆ ನೀಡಿದರು. ಸಮುದಾಯದ ಸರ್ವ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಸರ್ವರು ಪಾಲುದಾರರಾಗಿ ಮಾದರಿಯಾಗಬೇಕು ಎಂದು ಅವರು ಹೇಳಿದರು. ಗ್ರಾಮಗಳಲ್ಲಿ ಇತರೆ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ಪಕ್ಷಪಾತ ಬಿಟ್ಟು ಎಲ್ಲಾ ವರ್ಗದ ದಲಿತರಿಗೆ ಸೌಲಭ್ಯ ಕಲ್ಪಿಸುವ ಮೂಲಕ ಸಮಾಜ ಸೇವೆಯಲ್ಲಿ ನಿರತರಾಗಿ ಎಂದು ಸಲಹೆ ನೀಡಿದರು.
ಆರೋಗ್ಯ ಉಚಿತ ತಪಾಸಣೆ ಶಿಬಿರ
ಶಿರಾ: ತಾಲೂಕು ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾಸಮಿತಿ ವತಿಯಿಂದ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಮೇ 29 ಗುರುವಾರ ಬೆಳಿಗ್ಗೆ 9 ಗಂಟೆಯಿಂದ 3 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಗರದ ಕೆ. ಮಲ್ಲಣ್ಣ ಸ್ಮಾರಕ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಹೃದಯ ಸಂಬಂಧಿ ಕಾಯಿಲೆ, ಚಿಕ್ಕ ಮಕ್ಕಳ ಕಾಯಿಲೆ, ಗರ್ಭಕೋಶದ ತೊಂದರೆ, ಹೃದಯರೋಗಕ್ಕೆ ಸಂಬಂಧಿಸಿದಂತೆ ಅವಶ್ಯಕತೆ ಇದ್ದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸುವ ಅನುಕೂಲವಿದ್ದು, ಸದರಿ ಶಿಬಿರವನ್ನು ಸಾರ್ವಜನಿಕರು ಉಪಯೋಗಿಸಕೊಳ್ಳಬೇಕೆಂದು ಆಟೋ ಸಂಘದ ಅಧ್ಯಕ್ಷ ಜೆ. ಸಿದ್ದೇಶ್ವರ ತಿಳಿಸಿದ್ದಾರೆ.
ವಿಮಾನ ಗೋಪುರ ಕಳಸ ಸ್ಥಾಪನೆ
ಶಿರಾ: ತಾಲೂಕಿನ ಮಾದೇನಹಳ್ಳಿಯಲ್ಲಿ ಶ್ರೀರಾಮಾಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗೂ ವಿಮಾನ ಗೋಪುರದ ಕಳಸ ಸ್ಥಾಪನಾ ಮಹೋತ್ಸವ ಬುಧವಾರದಿಂದ ಪ್ರಾರಂಭಗೊಂಡಿದ್ದು ಮೇ 30ರ ವರೆಗೆ ವಿಜೃಂಭಣೆಯಿಂದ ನಡೆಯುತ್ತದೆ ಎಂದು ದೇವಸ್ಥಾನದ ಸಮಿತಿ ತಿಳಿಸಿದೆ. ವಿಮಾನ ಗೋಪುರದ ಕಳಸ ಸ್ಥಾಪನೆಯನ್ನು ನಂಜಾವಧೂತ ಸ್ವಾಮೀಜಿಗಳು ನೆರವೇರಿಸಲಿದ್ದು, ಸಚಿವ ಟಿ.ಬಿ ಜಯಚಂದ್ರ, ಶಾಸಕ ಬಿ. ಸುರೇಶ್ಬಾಬು, ಸಂಜಯಕುಮಾರ ಸ್ವಾಮೀಜಿ ಮತ್ತಿತರರು ಪಾಲ್ಗೊಳ್ಳುವರು ಎಂದು ತಿಳಿಸಲಾಗಿದೆ.
ಬಿಲ್ ಪಡೆಯಲು ದಾಖಲೆ ಸೃಷ್ಟಿ: ಆರೋಪ
ಶಿರಾ ತಾಲೂಕಿನ ರತ್ನಸಂದ್ರ ಗ್ರಾ.ಪಂ ವ್ಯಾಪ್ತಿಯ ಚಿಕ್ಕಗೂಳ ಪರಿಶಿಷ್ಟ ಜಾತಿಯ ಕಾಲೊನಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಿಸಿ ಚರಂಡಿ ಕಾಮಗಾರಿ ನಡೆಸದೇ ಬಿಲ್ ಪಡೆಯಲು ಗ್ರಾ.ಪಂ ಅಧಿಕಾರಿಗಳು ದಾಖಲೆ ಸೃಷ್ಟಿಸಿದ್ದಾರೆ. ಎಂದು ಗ್ರಾಮಸ್ಥರು ಹಾಗೂ ಗ್ರಾ.ಪಂ ಸದಸ್ಯ ಜಿ.ಎಸ್. ನಾಗೇಶಗೌಡ ಆರೋಪಿಸಿದ್ದಾರೆ. ಎನ್ಎಂಆರ್ ಮತ್ತು ಹಾಜರಾತಿ ಪುಸ್ತಕ ಸೇರಿದಂತೆ ಅಳತೆ ಪುಸ್ತಕವನ್ನೂ ಸೃಷ್ಟಿಸಲಾಗಿದೆ. ಚರಂಡಿಯಲ್ಲಿ ಈ ಹಿಂದೆ ಅದನ್ನು ರಿಪೇರಿಗೊಳಿಸಲು ತಂದಿದ್ದ ಕಲ್ಲು ಚಪ್ಪಡಿಗಳನ್ನು ಸ್ವಂತಕ್ಕೆ ಅಧಿಕಾರಿ ಮತ್ತು ಗುತ್ತಿಗೆದಾರರು ಬಳಸಿಕೊಂಡಿದ್ದಾರೆ. ಸಿಸಿ ಚರಂಡಿ ನಿರ್ಮಾಣವನ್ನು ನೆನೆಗುದಿಗೆ ತಳ್ಳಿದ್ದಾರೆ ಎಂದು ಆರೋಪಿಸಿರುವ ಅವರು ಗ್ರಾ.ಪಂ ವ್ಯಾಪ್ತಿಯಲ್ಲಿ ಅಕ್ರಮಗಳು ನಡೆದಿರುವ ಸಾಧ್ಯತೆ ಇದ್ದು, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

