ಹುಳಿಯಾರು ಸುತ್ತ-ಮುತ್ತ ಉತ್ತಮ ಮಳೆ
ಹುಳಿಯಾರು: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಗುಂಡಿ, ಗೊಟರು ಸೇರಿದಂತೆ ತೋಟಗಳಲ್ಲಿ ನೀರು ನಿಲ್ಲುವಂಥ ಮಳೆಯಾಗಿದೆ.
ಪಟ್ಟಣದಲ್ಲಿ ಸುಮಾರು ಒಂದು ತಾಸಿಗೂ ಮೀರಿ ಮಳೆಯಾಗಿ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ನೀರು ನಿಲ್ಲುವಂತಾಗಿತ್ತು. ಗಾಂಧಿಪೇಟೆಯ ಕೆಲವೊಂದು ಮನೆಗಳಿಗೆ ನೀರು ನುಗ್ಗಿ ಆತಂಕ ಎದುರಾಗಿತ್ತು. ಬಸ್ ನಿಲ್ದಾಣದ ಪಂಚಾಯ್ತಿ ಮಳಿಗೆಗಳಿಗೂ ಸಹ ನೀರು ನುಗ್ಗಿ ಕೆಲ ಮಟ್ಟಿನ ಹಾನಿಯಾಗಿದೆ. ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಹಾಗೂ ಇರುವ ಚರಂಡಿಯು ಕಟ್ಟಿದ್ದರಿಂದ ರಸ್ತೆಯಲೆಲ್ಲಾ ನೀರು ಹರಿದು ರಸ್ತೆ ತುಂಬೆಲ್ಲಾ ಕಸಕಡ್ಡಿ ತುಂಬಿತ್ತು.
ಹೋಬಳಿಯಲ್ಲಿ ಪೂರ್ವ ಮುಂಗಾರು ಆರಂಭದ ನಂತರ ಇದೇ ಮೊದಲ ಬಾರಿಗೆ ಉತ್ತಮ ಮಳೆಯಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಹುಳಿಯಾರು ಭಾಗದಲ್ಲೂ ಸಹ ಈ ಬಾರಿ ಉತ್ತಮ ಮಳೆಯಾಗಿದ್ದು ಹೊಲ, ತೋಟಗಳಲ್ಲಿ ನೀರು ಶೇಖರಣೆಯಾಗಿದೆ. ಬಿಸಿಲಿನ ತಾಪಕ್ಕೆ ಒಣಗುತ್ತಿದ್ದ ತೆಂಗಿನ ತೋಟಗಳಿಗೆ ಈ ಮಳೆಯಿಂದ ಚೇತರಿಕೆ ಕಂಡಂತಾಗಿದೆ..ಹೋಬಳಿಯ ದಸೂಡಿ, ದಬ್ಬಗುಂಟೆ, ಸೋಮನಹಳ್ಳಿ ಭಾಗದಲ್ಲಿ ಈ ಹಿಂದೆಯೂ ಮಳೆಯಾಗಿದ್ದು, ಈ ಮಳೆಯಿಂದಾಗಿ ಈ ಹಿಂದೆ ಬಿತ್ತನೆ ಮಾಡಿದ್ದ ಹೆಸರು, ಅಲಸಂದೆ, ಉದ್ದು, ಜೋಳ ಮತ್ತಿತರ ಬೆಳೆಗಳಿಗೆ ಉತ್ತಮವಾಗಿ ಹದವಾಗಿದೆ. ಮಳೆ ಮಾಪನ ಕೇಂದ್ರದ ಪ್ರಕಾರ ಹುಳಿಯಾರು ಭಾಗದಲ್ಲಿ 6 ಸೆಂ.ಮೀ ಮಳೆಯಾದರೆ ಬೋರನ ಕಣಿವೆ ಭಾಗದಲ್ಲಿ 1 ಸೆಂ.ಮೀ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಹೋಬಳಿ ಕೆಲವು ಭಾಗಗಳಲ್ಲಿ ಬಿದ್ದ ಹದಮಳೆಗೆ ಹೆಸರು ನಳನಳಿಸುತ್ತಿದ್ದರೆ ಯಳನಡು ಸೇರಿದಂತೆ ವಿವಿಧ ಭಾಗಗಳಲ್ಲಿ ಕೆಂಪು ಕಂಬಳಿ ಹುಳುಗಳ ಕಾಟ ಹೆಚ್ಚಾಗಿದೆ. ದಬ್ಬಗುಂಟೆ,ದಸೂಡಿ , ಸೋಮನಹಳ್ಳಿ, ರಂಗನಕೆರೆ ಭಾಗದಲ್ಲಿ ಹೆಸರು ಹೂ ಬಿಡುವ ಹಂತದಲ್ಲಿದ್ದು ಗುರುವಾರ ರಾತ್ರಿ ಬಿದ್ದ ಮಳೆಗೆ ಹೂ ಕಾಳುಕಟ್ಟಲು ಸಹಕಾರಿಯಾಗಿದೆ.
ಕಂಬಳಿಹುಳು ಕಾಟ: ಹೊಸದುರ್ಗ ತಾಲೂಕಿನಲ್ಲಿ ಕಳೆದ ಐದಾರು ವರ್ಷಗಳ ಹಿಂದಿನಿಂದ ಕಾಡುತ್ತಿರುವ ಕಂಬಳಿ ಹುಳುಗಳ ಕಾಟ ಕಳೆದ ವರ್ಷದಿಂದಲೇ ಹೋಬಳಿಯ ಯಳನಡು, ಕೋರಗೆರೆ ಗ್ರಾಪಂ ವ್ಯಾಪ್ತಿಯ ಮೋಟಿಹಳ್ಳಿ ಉಪ್ಪಾರಹಳ್ಳಿ ಹಾಗೂ ಹಂದನಕೆರೆ ಹೋಬಳಿಯ ದೊಡ್ಡ ಎಣ್ಣೇಗೆರೆ ಸುತ್ತಮುತ್ತಲ ಹೊಲಗಳಲ್ಲಿ ಕಾಣಿಸಿಕೊಂಡಿದ್ದು, ಈ ಬಾರಿಯೂ ಮತ್ತೆ ಹುಳುಗಳ ಭಾದೆ ಶುರುವಾಗಿದೆ.
ಕಳೆದ ಬಾರಿಯೂ ಸಹ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕೀಟ ಶಾಸ್ತ್ರಜ್ಞರ ತಂಡಗಳು, ಆಗಮಿಸಿ ಇವುಗಳ ಬಗ್ಗೆ ಸಮಗ್ರ ವರದಿ ಮಾಡಿದ್ದರು. ಸಂಪೂರ್ಣ ನಿರ್ಮೂಲನೆಗೆ ಕೆಲವು ಅಗತ್ಯ ಕ್ರಮಗಳನ್ನು ಸೂಚಿಸಿದ್ದರು. ಆದರೆ, ರೈತರು ಕಂಬಳಿಹುಳುಗಳ ಲಾರ್ವಾವಸ್ಥೆಯಲ್ಲಿ ಕೀಟನಾಶಕಗಳನ್ನು ಬಳಸಿ ನಾಶಪಡಿಸದೆ ಇರುವುದರಿಂದ ಈಗ ಹತೋಟಿಗೆ ಬರುತ್ತಿಲ್ಲ ಎನ್ನಲಾಗಿದೆ.ಈಗಾಗಲೇ ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಳುಗಳ ಹತೋಟಿಗೆ ರಾಸಾಯನಿಕ ಬಳಸುವಂತೆ ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

