ಬಿಜೆಪಿ ಮಾನ ಉಳಿಸಲು ಸಂಘಪರಿವಾರ ಬೀದಿಗೆ!
ಮಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕರಾವಳಿಯ ತನ್ನ ಗಟ್ಟಿ ನೆಲದಲ್ಲೇ ಸೋಲುಂಡ ಬಿಜೆಪಿ ನೆರವಿಗೆ ಸಂಘಪರಿವಾರ ಧಾವಿಸುತ್ತಿದೆ. ಅಂದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಂಘಪರಿವಾರ ಸಂಘಟನೆಗಳು ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಧುಮುಕಲಿವೆ.
ವಿಶ್ವಹಿಂದೂ ಪರಿಷತ್ ಏಪ್ರಿಲ್ನಲ್ಲಿ ದೇಶಾದ್ಯಂತ ನಡೆಸುವ ರಾಮನಾಮ ಜಪಯಜ್ಞ ಅಭಿಯಾನ ಯಶಸ್ಸಿಗೆ ರೂಪುರೇಷೆಗೆ ಈ ಬೈಠಕ್ ಕರೆದಿತ್ತಾದರೂ, ಮಧ್ಯಾಹ್ನ ಹೊತ್ತಿಗೆ 3 ಜಿಲ್ಲೆಗಳಲ್ಲಿ ಬಿಜೆಪಿ ನೆಲೆ ಭದ್ರಪಡಿಸುವ ವಿಚಾರ ಪ್ರಸ್ತಾಪಿಸಲಾಗಿದೆ. ಆರ್ಎಸ್ಎಸ್ ಮುಖಂಡ ಡಾ.ಪ್ರಭಾಕರ ಭಟ್ ಮಾರ್ಗದರ್ಶನ ಮಾಡಿದ್ದು, ಬೈಠಕ್ನಲ್ಲಿ ಬಿಜೆಪಿ, ಆರ್ಎಸ್ಎಸ್, ಪರಿವಾರ ಸಂಘಟನೆಗಳಾದ ವಿಶ್ವಹಿಂದೂ ಪರಿಷತ್, ಬಜರಂಗಳ, ಹಿಂದೂ ಜಾಗರಣಾ ವೇದಿಕೆ, ದುರ್ಗಾ ವಾಹಿನಿ, ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಂಸದ ನಳಿನ್ ಕುಮಾರ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಅಪ್ಪಚ್ಚು ರಂಜನ್, ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್ ಸೇರಿದಂತೆ ಜಿಲ್ಲೆಯ ಶಾಸಕರು, ಪಕ್ಷ ಪ್ರಮುಖರು ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ.
ಪುತ್ತೂರಲ್ಲಿ ಪ್ರಯೋಗ: ಕರಾವಳಿ ಜಿಲ್ಲೆಯಲ್ಲಿ 1994ರ ಬಳಿಕ ಬಿಜೆಪಿಗೆ ಶುಕ್ರ ದೆಸೆ. ಆಗ ಅವಿಭಜಿತ ದ.ಕ.ಜಿಲ್ಲೆಯಲ್ಲಿ 7 ಸ್ಥಾನ ಪಡೆದಿದ್ದ ಬಿಜೆಪಿ 1999ರಲ್ಲಿ 5 ಸ್ಥಾನಕ್ಕೆ ಕುಸಿದಾಗ ಮೇಲೆತ್ತಿದ್ದು ಸಂಘಪರಿವಾರ. 2004ರಲ್ಲಿ 11 ಸ್ಥಾನ ಗಳಿಸುವಲ್ಲಿ ಸಫಲವಾಯಿತು. ಇಷ್ಟಾದರೂ 2008ರಲ್ಲಿ ಪಕ್ಷದಲ್ಲಿ ಅಸಮಾಧಾನ ಕಾರಣಕ್ಕೆ 8 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
2008ರಲ್ಲಿ ಪುತ್ತೂರಲ್ಲಿ ಬಿಜೆಪಿ ಬಂಡಾಯದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದಾಗ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸಂಘಪರಿವಾರ. ಡಿ.ವಿ. ಸದಾನಂದ ಗೌಡ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕಾರಣ ಆ ಚುನಾವಣೆ ರಾಜ್ಯದ ಗಮನ ಸೆಳೆದಿತ್ತು.
ಬಿಜೆಪಿ ಹೆಗಲಿಗೆ ಸಾಥ್ ಪರಿವಾರ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ವ್ಯಕ್ತಿಗಿಂತ ಪಕ್ಷ, ತತ್ವ ಮುಖ್ಯ ಎಂದು ಸಾರಿ ಹೇಳಿದ್ದರು. ಇದಲ್ಲದೆ ಕಾಂಗ್ರೆಸ್ ಬಂಡಾಯ ಸ್ಪರ್ಧೆಯೂ ಕಾಂಗ್ರೆಸ್ ಗೆಲವಿಗೆ ಅಡ್ಡಿಯಾಗಿತ್ತು. ಕೊನೆಯಲ್ಲಿ ಕಾಂಗ್ರೆಸ್ ವಿರುದ್ಧ ಕೇವಲ 1,425 ಮತ ಅಂತರದಲ್ಲಿ ಬಿಜೆಪಿ ಜಯಿಸಿ ಸಂಘಪರಿವಾರ ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಪ್ರಚಾರಕ್ಕೆ ಧುಮುಕಲು ಸೂಚನೆ: ಈ ಬಾರಿ ನಾಮಸಲ್ಲಿಕೆ ಕೊನೆಗೊಳ್ಳುವುದು ಏ.17ರಂದು. ಅಲ್ಲಿವರೆಗೆ ಕಾಯದೆ ಈಗಿಂದೀಗಲೇ ಪ್ರಚಾರ ಕಾರ್ಯಕ್ಕೆ ತೊಡಗಿಸಿಕೊಳ್ಳುವಂತೆ ತಿಳಿಸಲಾಗಿದೆ. ಕಳೆದ ಬಜೆಟ್ನಲ್ಲಿ ಬಿಜೆಪಿ ಘೋಷಿಸಿದ ಯೋಜನೆಗಳು ಶೇ.80 ಈಡೇರಿದೆ. ಅದೇ ಸಾಧನೆಯನ್ನು ಜನರ ಮುಂದಿಡಬೇಕು. ಇಲ್ಲಿ ವ್ಯಕ್ತಿಗತ ಸಾಧನೆ ಬದಲು ಪಕ್ಷ ಸಾಧನೆ ಎಂದು ಪ್ರಚಾರದಲ್ಲಿ ಬಿಂಬಿಸಬೇಕು. ಹೇಗಾದರೂ ಮಾಡಿ ಅವಿಭಜಿತ ಜಿಲ್ಲೆಯ ಒಟ್ಟು 13 ಕ್ಷೇತ್ರ ಪೈಕಿ ಹಿಂದಿದ್ದ 8 ಕ್ಷೇತ್ರಗಳಲ್ಲದೆ, ಅದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಲ್ಲಿ ಬಿಜೆಪಿಗೆ ಹೆಗಲು ಕೊಡುವಂತೆ ಸೂಚನೆ ನೀಡಲಾಗಿದೆ. ಈ ವಿಚಾರವನ್ನು ಎಲ್ಲ ತಾಲೂಕು ಸ್ತರದ ಬೈಠಕ್ಗಳಲ್ಲಿ ಪರಿವಾರ ಕಾರ್ಯಕರ್ತರಿಗೆ ತಲಪಿಸುವಂತೆ ನಿರ್ದೇಶನ ನೀಡಲಾಗಿದೆ. ಬಹಳ ಯೋಜನಾಬದ್ಧವಾಗಿ ಬಿಜೆಪಿ ಮಾನ ಉಳಿಸಲು ಸಂಘಪರಿವಾರ ಸಂಘಟನೆಗಳು ಪ್ರಚಾರದ ಬೀದಿಗೆ ಇಳಿಯುತ್ತಿರುವುದು ಗಮನಾರ್ಹ.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

