ಉಡುಪಿ

ಹಿಂದುಳಿದ ವರ್ಗಗಳ ತಲುಪದ ಅನುದಾನ: ಶರ್ಮ ವಿಷಾದ

Published On :

ಮಣಿಪಾಲ: ಜಿಲ್ಲೆಯಲ್ಲಿ ಮುಖ್ಯವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಪ್ರತಿ ವರ್ಷ ವಿನಿಯೋಗ ಮಾಡಲಾಗುತ್ತಿರುವ ಕೋಟ್ಯಂತರ ರುಪಾಯಿ ಹಣ ಯೋಜನಾಬದ್ಧವಾಗಿ ತಲುಪಿದ್ದರೆ, ಈ ವರ್ಗದ ಜನರೆಲ್ಲರೂ ಇಂದು ಬಡತನ ರೇಖೆಯ ಕೆಳಗಿನಿಂದ ಹೊರ ಬಂದು ಆರ್ಥಿಕವಾಗಿ ಸಬಲರಾಗಿರುತ್ತಿದ್ದರು. ಆದರೆ ಇಂದಿಗೂ ಈ ಹಿಂದುಳಿದ ವರ್ಗದ ಒಂದು ಕುಟಂಬವನ್ನು ಕೂಡ ಸಂಪೂರ್ಣವಾಗಿ ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲಗೊಳಿಸಲು ಸಾಧ್ಯವಾಗಿಲ್ಲ. ಅಂದರೆ ಪ್ರತಿವರ್ಷ ವಿನಿಯೋಗವಾಗುತ್ತಿರುವ ಹಣ ಅವರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದರ್ಥ ಎಂದು ಜಿಪಂ ಸಿಇಒ ಎಸ್.ಎ. ಪ್ರಭಾಕರ ಶರ್ಮ ವಿಷಾದಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾಡಳಿತ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ ರಾಮ್ ಅವರ 106ನೇ ಜನ್ಮಾದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು ಸುಮಾರು 25,000 ಹಿಂದುಳಿದ ವರ್ಗಗಳ ಕುಟುಂಬಗಳಿದ್ದು, ಸುಮಾರು 1,05,000 ಜನಸಂಖ್ಯೆ ಇದೆ. ಅವರೆಲ್ಲರಿಗೂ ಸೌಲಭ್ಯಗಳನ್ನು ನೀಡುವುದಕ್ಕಾಗಿ ಹಣವೇನೋ ವಿನಯೋಗವಾಗಿದೆ.
ಆದರೆ ಅವರಲ್ಲಿ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನದ ಕೊರತೆ ಇನ್ನೂ ಇದೆ. ಈ ಬಗ್ಗೆ ಎಲ್ಲರೂ ಆತ್ಮವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದ ಅವರು, ಈ ಅತ್ಮಾವಲೋಕನವೇ ಬಾಬು ಜಗಜೀವನರಾಂ ಅವರ ಜನ್ಮದಿನಾಚರಣೆಯನ್ನು ಹೆಚ್ಚು ಅರ್ಥಪೂರ್ಣ ಮಾಡಬಲ್ಲದು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಮುಖ್ಯ ಯೋಜನಾಧಿಕಾರಿ ವಿಜಯಕುಮಾರ ಶೆಟ್ಟಿ, ಉಪಕಾರ್ಯದರ್ಶಿ ಪ್ರಾಣೇಶ್ ರಾವ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಕಲ್ಯಾಣಾಧಿಕಾರಿ ಪ್ರಭುಲಿಂಗ ಸ್ವಾಗತಿಸಿ, ನಿರೂಪಿಸಿದರು.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸರಳವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಈ ಸಮಾರಂಭದಲ್ಲಿ, ಅಧಿಕಾರಿಗಳು ಚುನಾವಣಾ ಸಿದ್ಧತೆಯಲ್ಲಿ ವ್ಯಸ್ತರಾಗಿದ್ದರಿಂದ ಬಹುತೇಕ ಮಂದಿ ಭಾಗವಹಿಸಿರಲಿಲ್ಲ, ಕೇವಲ ಹತ್ತಿಪ್ಪತ್ತು ಮಂದಿ ಅಧಿಕಾರಿಗಳು ಮಾತ್ರ ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಜನರು, ಸಾರ್ವಜನಿಕರು ಭಾಗವಹಿಸಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.