ಉಡುಪಿ

ಉಡುಪಿ ಜಿಲ್ಲೆ: 10 ಅಭ್ಯರ್ಥಿಗಳಿಂದ ನಾಮಪತ್ರ

Published On :

ಉಡುಪಿ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಏ. 10ರಿಂದಲೇ  ಅವಕಾಶ ಇದ್ದರೂ, ಮೊದಲ 4 ದಿನ ನಾಮಪತ್ರ ಸಲ್ಲಿಸದ ಉಡುಪಿ ಜಿಲ್ಲೆಯ 5 ಕ್ಷೇತ್ರಗಳ ಬಹುತೇಕ ಅಭ್ಯರ್ಥಿಗಳು ಸೋಮವಾರ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
 ಕಾರಣ ಪಂಚಾಂಗದ ಪ್ರಕಾರ ಸೋಮವಾರ ಅತ್ಯಂತ ಪ್ರಶಸ್ತ ದಿನ ಎಂದು ಜ್ಯೋತಿಷಿಗಳು ಹೇಳಿದ್ದರಿಂದ ಪಂಚಾಂಗವನ್ನು ನಂಬುವ ಅಭ್ಯರ್ಥಿಗಳು ಸೋಮವಾರ ಅದೂ ಮುಹೂರ್ತವನ್ನು ನೋಡಿ ಅದೇ ಹೊತ್ತಿಗೆ ಬಂದು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
 ಸೋಮವಾರ ಜಿಲ್ಲೆಯಲ್ಲಿ ಬಿಜೆಪಿಯ 3 ಮಂದಿ, ಕಾಂಗ್ರೆಸ್‌ನಿಂದ 3, ಬಿಸ್ಪಿ ಯಿಂದ 2 ಮತ್ತು 1 ಪಕ್ಷೇತರ ಅಭ್ಯರ್ಥಿ ಸೇರಿ ಒಟ್ಟು 10 ಮಂದಿ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದರು.
 ಬಿಜೆಪಿಯಿಂದ ಉಡುಪಿಯ ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿ ಅವರು ನಗರದಲ್ಲಿ ಭಾರಿ ಮೆರವಣಿಗೆ ನಡೆಸಿ ಮಧ್ಯಾಹ್ನ 12.25ಕ್ಕೆ ಉಡುಪಿ ತಾಲೂಕು ಕಚೇರಿಯಲ್ಲಿ ನಾಮಾಪತ್ರ ಸಲ್ಲಿಸಿದರು. ಕಾಪು ಕ್ಷೇತ್ರದ ಅಭ್ಯರ್ಥಿ ಲಾಲಾಜಿ ಮೆಂಡನ್ ಅವರು ಕೂಡ ಕಾಪುವಿನಿಂದ ಉಡುಪಿವರೆಗೆ ವಾಹನ ರ್ಯಾಲಿಯಲ್ಲಿ ಆಗಮಿಸಿ ಉಡುಪಿ ತಾಲೂಕು ಕಚೇರಿಯಲ್ಲಿ 1.30 ಗಂಟೆಗೆ ನಾಮಪತ್ರ ಸಲ್ಲಿಸಿದರು. ಕಾರ್ಕಳದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅವರು ಕೂಡ ಭಾರಿ ಮೆರವಣಿಗೆಯಲ್ಲಿ ಅಭಿಮಾನಿಗಳೊಂದಿಗೆ ಕಾರ್ಕಳ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
 ಉಡುಪಿಯ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ತಮ್ಮ ಅಭಿಮಾನಿಗಳೊಂದಿಗೆ ಬ್ರಹ್ಮಾವರದಿಂದ ಉಡುಪಿವರೆಗೆ ಎಲ್ಲ ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ತೆರಳಿ ಮಧ್ಯಾಹ್ನ 2.15ಕ್ಕೆ ಉಡುಪಿ ತಾಲೂಕು ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದರು. ಕುಂದಾಪುರದ ಕಾಂಗ್ರೆಸ್ ಅಭ್ಯರ್ಥಿ ಮಲ್ಯಾಡಿ ಶಿವರಾಮ ಶೆಟ್ಟಿ ಮತ್ತು ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಕೂಡ ತಮ್ಮ ಅಭಿಮಾನಿಗಳೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಕುಂದಾಪುರ ತಾಲೂಕು ಕಚೇರಿಯಲ್ಲಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
 ಆದರೆ ಬಿಎಸ್ಪಿಯ ಕಾರ್ಕಳದ ಅಭ್ಯರ್ಥಿ ಸುನಿಲ್ ತೋನ್ಸ್, ಬೈಂದೂರಿನ ಅಭ್ಯರ್ಥಿ ಉದಯಕುಮಾರ್ ತಲ್ಲೂರು, ಸಿಪಿಎಂ ಪಕ್ಷದ ಕುಂದಾಪುರ ಕ್ಷೇತ್ರದ ಅಭ್ಯರ್ಥಿ ಕೆ. ಶಂಕರ್ ಅವರು ಸರಳವಾಗಿ ಯಾವುದೇ ಗದ್ದಲ ಇಲ್ಲದೇ ಬಂದು ನಾಮಪತ್ರಗಳನ್ನು ಸಲ್ಲಿಸಿದರು.
 ಕುಂದಾಪುರದಿಂದ ಸ್ಪರ್ಧಿಸುತ್ತಿರುವ ಬಿಜೆಪಿಯ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಬೆರಳೆಣಿಕೆಯ ಬೆಂಬಲಿಗರೊಂದಿಗೆ ಕುಂದಾಪುರ ತಾಲೂಕು ಕೇಂದ್ರಕ್ಕೆ ಹೋಗಿ ನಾಮಪತ್ರ ಸಲ್ಲಿಸಿದರು. ವಿಶೇಷವೆಂದರೆ ಪಕ್ಷೇತರ ಅಭ್ಯರ್ಥಿಗಳಾದ ಅಲೆವೂರು ಯೋಗೀಶ್ ಆಚಾರ್ಯ ಮತ್ತು ಅವರ ಪತ್ನಿ ವಂದನಾ ಆಚಾರ್ಯ ಅವರು ಕೂಡ ಮೆರವಣಿಗೆಯಲ್ಲಿ ಬಂದು ಇಬ್ಬರೂ ಕೂಡ ಉಡುಪಿ ಕ್ಷೇತ್ರಕ್ಕೆ ಪ್ರತ್ಯೇಕ ನಾಮಪತ್ರಗಳನ್ನು ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.