ಉಡುಪಿ

ಮುಂಬೈನಂತೆ ಮಂಗ್ಳೂರು- ಉಡುಪಿ ಅಭಿವೃದ್ಧಿ

Published On :

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಮಂಗಳೂರು- ಉಡುಪಿ ನಗರಗಳನ್ನು ದೇಶದ ಅತ್ಯಂತ ಅಭಿವೃದ್ಧಿ ಹೊಂದಿರುವ ಮುಂಬೈ ನಗರದಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಹೇಳಿದ್ದಾರೆ.
ಭಾನುವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಸ್ವಚ್ಛ ಆಡಳಿತ ಮತ್ತು ಸಮರ್ಥ ನಾಯಕತ್ವ' ಎಂಬುದು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಧ್ಯೇಯವಾಕ್ಯವಾಗಿದ್ದು, ರಾಜ್ಯದಲ್ಲಿ ಮಹಿಳೆಯರ ರಕ್ಷಣೆ ಮತ್ತು ಅವರಿಗೆ ರಾಜಕೀಯ ಹೊಣೆಗಾರಿಕೆಯನ್ನು ನೀಡಲು ಸಂಕಲ್ಪಿಸಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ರಾಜ್ಯದಲ್ಲಿ ಬಡ ಮತ್ತು ವಸತಿರಹಿತರಿಗೆ 11 ಲಕ್ಷ ಮನೆಗಳನ್ನು ವಿತರಿಸಲಾಗಿತ್ತು. ಬಿಜೆಪಿ ಸರ್ಕಾರ ಇದರಲ್ಲಿ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮತ್ತೇ ಈ ಯೋಜನೆಯನ್ನು ಕೈಗೆತ್ತಿರಕೊಳ್ಳಲಾಗುತ್ತದೆ ಎಂದವರು ಹೇಳಿದರು.
ನಗರಾಡಳಿತ ಚುನಾವಣೆಯಲ್ಲಿ ಈಗಾಗಲೇ ಮತದಾರರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಬಗ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ವಿಶ್ವಾಸ ಇಟ್ಟು ಮತ ನೀಡಿ ಗೆಲ್ಲಿಸಿದ್ದ ಮತದಾರರ ವಿಶ್ವಾಸಕ್ಕೆ ಬಿಜೆಪಿ ದ್ರೋಹ ಬಗೆದಿದೆ. ಈ ಬಾರಿಯ ಚುನಾವಣೆಯಲ್ಲಿ ಅದೇ ಮತದಾರರು ಬಿಜೆಪಿಯನ್ನು ಸೋಲಿಸಲಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶವಾಗಲಿದೆ ಎಂದವರು ಭವಿಷ್ಯ ನುಡಿದರು.
ಸಭೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ, ಕಾಪು ಕ್ಷೇತ್ರದ ಅಭ್ಯರ್ಥಿ ವಿನಯಕುಮಾರ್ ಸೊರಕೆ, ಬೈಂದೂರು ಕ್ಷೇತ್ರದ ಅಭ್ಯರ್ಥಿ ಗೋಪಾಲ ಪೂಜಾರಿ, ಕುಂದಾಪುರ ಕ್ಷೇತ್ರದ ಅಭ್ಯರ್ಥಿ ಮಲ್ಯಾಡಿ ಶಿವರಾಮ ಶೆಟ್ಟಿ, ಕಾಂಗ್ರೆಸ್ ನಾಯಕರಾದ ನರಸಿಂಹಮೂರ್ತಿ, ಕಿಶನ್ ಹೆಗ್ಡೆ, ಸರಳಾ ಕಾಂಚನ್, ವೆರೋನಿಕಾ ಕರ್ನೇಲಿಯೋ, ನೀರೆ ಕೃಷ್ಣ ಶೆಟ್ಟಿ ಮುಂತಾದವರಿದ್ದರು.

ಉಡುಪಿ ಅಭ್ಯರ್ಥಿಯೂ ಇಲ್ಲ, ಸಾರ್ವಜನಿಕ ಸಭೆಯೂ ಇಲ್ಲ...
ಉಡುಪಿಯಲ್ಲಿ ನಡೆದ, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಭಾಗವಹಿಸಿದ್ದ ಈ ಕಾರ್ಯಕರ್ತರ ಸಭೆಯಲ್ಲಿ ಬೈಂದೂರು, ಕುಂದಾಪುರ ಮತ್ತು ಕಾಪು ಕ್ಷೇತ್ರದ ಅಭ್ಯರ್ಥಿಗಳು ಭಾಗವಹಿಸಿದ್ದರೂ, ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಅವರೇ ಗೈರು ಹಾಜರಾಗಿದ್ದುದು ಎದ್ದು ಕಾಣುತ್ತಿತ್ತು.
ಖುದ್ದು ಕೆಪಿಸಿಸಿ ಅಧ್ಯಕ್ಷ, ಪ್ರಚಾರ ಸಮಿತಿ ಅಧ್ಯಕ್ಷರು ಬಂದಿದ್ದರೂ ಜಿಲ್ಲೆಯಲ್ಲಿ ಒಂದು ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯನ್ನು ಆಯೋಜಿಸಲಾಗಿರಲಿಲ್ಲ. ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಅವರಿಬ್ಬರೂ ಜಿಲ್ಲೆಯ ಬೇರೆ ಕ್ಷೇತ್ರಗಳಿಗೂ ಹೋಗದೇ ಪಕ್ಷ ಕಚೇರಿಯಲ್ಲಿ 1 ಗಂಟೆ ಕೆಲವೇ ಕಾರ್ಯಕರ್ತರ ಸಭೆ ನಡೆಸಿ ಮಡಿಕೇರಿಗೆ ಹೊರಟು ಹೋದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.