ಉಡುಪಿ

ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಜೋಡಿಸಿ

Published On :

ಉಡುಪಿ: ಹೊರ ರಾಜ್ಯದಲ್ಲಿರುವ ಉಡುಪಿಯ ಜನರು ಉಡುಪಿ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಮತ್ತು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಆಹ್ವಾನಿಸಿದ್ದಾರೆ.
ಅವರು ಗುರುವಾರ ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 67ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಮಾಡಿ, ಜಿಲ್ಲೆಯ ಜನತೆಗೆ ಸಂದೇಶ ನೀಡಿದರು.
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದ್ದು, ಹೊರ ರಾಜ್ಯಗಳಲ್ಲಿ ಯಶಸ್ವಿಯಾಗಿರುವ ಉಡುಪಿ ಜಿಲ್ಲೆಯ ಉದ್ಯಮಿಗಳಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಹಕಾರ ಮತ್ತು ಸಹಭಾಗಿತ್ವವನ್ನು ನಿರೀಕ್ಷಿಸಲಾಗುತ್ತಿದೆ ಎಂದರು. ಜಿಲ್ಲೆಯ 7 ಪ್ರಮುಖ ಪ್ರವಾಸಿ ತಾಣಗಳ ರಸ್ತೆಗಳ ಅಭಿವೃದ್ಧಿಗೆ 7 ಕೋಟಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲೆಯ ಸಮುದ್ರ ತೀರದ 11 ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಲಾಗಿದೆ ಎಂದವರು ಹೇಳಿದರು.
ಉಡುಪಿ ಹೆರಿಟೇಜ್ ಸಿಟಿ: ಅಲ್ಲದೆ ಕೇಂದ್ರ ಸರ್ಕಾರದ ಸಾಮರ್ಥ್ಯ ಅಭಿವೃದ್ಧಿ ಯೋಜನೆಯಡಿ ಉಡುಪಿ ನಗರವನ್ನು ಪಾರಂಪರಿಕ ನಗರ (ಹೆರಿಟೇಜ್ ಸಿಟಿ)ವನ್ನಾಗಿ ಮಾಡಲು ಉದ್ದೇಶಿಸಲಾಗಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಜಿಲ್ಲೆಯ ಸಾಂಸ್ಕೃತಿಕ ಆಚರಣೆಯನ್ನು ಕೂಡ ಸಂರಕ್ಷಿಸಲಾಗುವುದು. ವಿಶ್ವ ಪರಂಪರೆಯ ತಾಣವಾಗಿ ಮಾನ್ಯತೆ ಪಡೆದಿರುವ ಪಶ್ಚಿಮಘಟ್ಟದ ಜೀವ, ಸಸ್ಯ ಸಂಪತ್ತನ್ನು ರಕ್ಷಿಸಲಾಗುವುದು ಎಂದು ಸಚಿವರು ಹೇಳಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಸಚಿವರು, ಪೊಲೀಸ್, ಎನ್‌ಸಿಸಿ, ಸೇವಾದಳ ಇತ್ಯಾದಿ ತಂಡಗಳ ಗೌರವ ರಕ್ಷೆ ಸ್ವೀಕರಿಸಿ ಆಕರ್ಷಕ ಪಥಸಂಚಲನ ವೀಕ್ಷಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಪ್ರತಿಭಾವಂತರು ಮತ್ತು ಸಾಧಕರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಶಾಸಕ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ ಎಂ.ಬಿ ಉಪಸ್ಥಿತರಿದ್ದರು. ಈ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ಜಿಪಂ ಸಿಇಒ ಪ್ರಭಾಕರ ಶರ್ಮ, ತಾಪಂ ಅಧ್ಯಕ್ಷ ಗೌರಿ ಪೂಜಾರಿ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.
ಸಚಿವರ ಭರವಸೆ...
- ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಭೂಮಿಯನ್ನು ಉಳಿಸಿಕೊಳ್ಳುವುದಕ್ಕಾಗಿ, ಈ ಭೂಮಿಯಲ್ಲಿ ಈಗಾಗಲೇ ಸರ್ಕಾರದಿಂದ ಮಂಜೂರಾಗಿರುವ ತೋಟಗಾರಿಕಾ ವಿವಿಯನ್ನು ಸ್ಥಾಪಿಸಲಾಗುವುದು.
- ಕುಂದಾಪುರ ತಾಲೂಕಿನ ವಾರಾಹಿ ನದಿ ಯೋಜನೆಯನ್ನು ಪುನಶ್ಚೇತನಗೊಳಿಸಿ, ಶೀಘ್ರವೇ ಪೂರ್ಣಗೊಳಿಸಿ, ಇದರಿಂದ ಉಡುಪಿ ನಗರಕ್ಕೂ ಕುಡಿಯುವ ನೀರು ಒದಗಿಸಲಾಗುವುದು. ಪಡುಬಿದ್ರಿ, ತೆಂಕ, ಉಳಿಯಾರಗೋಳಿ, ಉದ್ಯಾವರಗಳಲ್ಲಿ ಕಡಲು ಕೊರತೆ ತಡೆಯಲು 275 ಕೋಟಿ ವೆಚ್ಚದಲ್ಲಿ ಶಾಶ್ವತ ತಡೆಗೋಡೆ ಯೋಜನೆ ತಯಾರಿಸಲಾಗುವುದು. ಉಡುಪಿ ಜಿಲ್ಲೆಗೆ ಪ್ರತ್ಯೇಕ ಮಂಗಳೂರು ವಿವಿ ಘಟಕ ಮಂಜೂರಾಗಿದ್ದು, ಬೆಳಪು ಗ್ರಾಪಂನಲ್ಲಿ ಭೂಮಿ ಗುರುತಿಸಲಾಗಿದ್ದು, ಸದ್ಯವೇ ಕಾಮಗಾರಿ ಆರಂಭವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.