'ಮನಸ್ಸು ವಿಶಾಲವಾದಾಗ ಮಾನವ ಮಾಧವನಾಗುವ'
ಉಡುಪಿ: ಭಗವಂತನಿಗೆ ವಜ್ರ, ಧನಕನಕಗಳು, ಆಸ್ತಿ, ಕಿರೀಟಗಳು ಬೇಕಾಗಿಲ್ಲ. ಶುದ್ಧ ಭಕ್ತಿಯಿದ್ದಲ್ಲಿ ಭಗವಂತನಿದ್ದಾನೆ. ದೇಶದ ಸಮಾಜದ ಸೇವೆಯೇ ಭಗವಂತನ ಸೇವೆ. ಮನಸ್ಸಿನ ವ್ಯಾಪ್ತಿ ವಿಶಾಲವಾದಾಗ ಮನುಷ್ಯತ್ವದ ಸಾಕ್ಷತ್ಕಾರವಾಗಿ ಮನುಷ್ಯ ಮಾಧವನಾಗುತ್ತಾನೆ ಎಂದು ಸಂಸ್ಕಾರ ಭಾರತಿ ಮಂಗಳೂರು ವಿಭಾಗದ ಸಂಚಾಲಕ ಆದರ್ಶ ಗೋಖಲೆ ನುಡಿದರು.
ಅವರು ಶಿರ್ವ ಸಮೀಪದ ಬಂಟಕಲ್ಲು, ಹೇರೂರು ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿ ವತಿಯಿಂದ ಜರಗಿದ 30 ನೇ ವರ್ಷದ ಶ್ರೀಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.
ಸಮಾಜಕ್ಕೋಸ್ಕರ ಬದುಕಿದ ಸ್ವಾತಂತ್ರ್ಯ ಹೋರಾಟಗಾರರು, ಹಗಲು ರಾತ್ರಿ ದೇಶದ ಗಡಿ ಕಾಯುತ್ತಿರುವ ನಮ್ಮ ಸೈನಿಕರು, ವಿದ್ಯಾಪೀಠ, ಶಿಕ್ಷಣ ಸಂಸ್ಥೆಗಳ ಮೂಲಕ ದೇಶದ ಪರಂಪರಾಗತ ಆಧ್ಯಾತ್ಮಿಕ, ಸಂಸ್ಕೃತಿ, ಸಂಸ್ಕಾರಗಳಿಂದ ಸಮಾಜ ಕಟ್ಟುವ ಕಾರ್ಯ ಮಾಡಿದ ವ್ಯಕ್ತಿಗಳು ಹೀರೋಗಳಾಗಬೇಕೇ ಹೊರತು ಸಿನೆಮಾದ ನಟರಲ್ಲ ಎಂದು ಹೇಳಿದರು.
ದೂರದರ್ಶನ ಮನೆಯೊಳಗೆ ಬಂದಂದಿನಿಂದ ದೇವರ ದರ್ಶನ ದೂರವಾಗುತ್ತಿದೆ. ಮಕ್ಕಳನ್ನು ಸಂಸ್ಕಾರದ ಮೂಲಕ ಸಮಾಜದ ಆಸ್ತಿಯನ್ನಾಗಿ ಪರಿವರ್ತಿಸುವ ಹೊಣೆ ತಾಯಂದಿರ ಮೇಲಿದೆ. ಭಾರತದ ಚಿತ್ರಣವನ್ನು ಬದಲಾಯಿಸಲು ನಮಗೆ ಅಮೆರಿಕಾದ ಒಬಾಮ ಬೇಕಾಗಿಲ್ಲ. ಮನೆಯಲ್ಲಿರುವ ಒಬ್ಬ ಅಮ್ಮ ಸಾಕು. ಅದೇ ನಮ್ಮ ಸಂಸ್ಕೃತಿ ಎಂದು ತಾಯಂದಿರನ್ನು ಎಚ್ಚರಿಸಿದರು.
ಸಂಘದ ದಿನೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್ ಶೆಟ್ಟಿ ಪಾದೂರು, ಮಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಶುಭ ಹಾರೈಸಿದರು. ಸಂಘದ ಗೌರವ ಅಧ್ಯಕ್ಷ ಗಣೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಅರ್ಚಕ ಗುರುರಾಜ ಭಟ್, ಭಜನಾಮಂಡಳಿಯ ಹಿರಿಯ ಸದಸ್ಯ ಶಂಕರ ದೇವಾಡಿಗ ಇವರ ಜೊತೆ ಮದ್ಯವರ್ಜನ ಶಿಬಿರದ ಮೂಲಕ ಪರಿವರ್ತನೆಗೊಂಡ ಮದ್ಯಮುಕ್ತ ಜೀವನ ನಡೆಸುತ್ತಿರುವ ಸುಂದರ ಕುಲಾಲ್ ಹಾಗೂ ಗೋಪಾಲ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಮಾಧವ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಉದಯ ದೇವಾಡಿಗ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

