ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ವಿರುದ್ಧ ಪ್ರತಿಭಟನೆ
ಉಡುಪಿ: ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೊಂಡರೆ ಹಿಂದೂಗಳ ಮಠ, ಮಂದಿರಗಳು, ಶ್ರದ್ಧಾಸ್ಥಾನಗಳು ಮುಂತಾದವುಗಳು ನೇರವಾಗಿ ಸಂಕಷ್ಟಕ್ಕೊಳಗಾಗುತ್ತವೆ. ಈ ಕಾನೂನು ತರುವ ಪ್ರಯತ್ನಗಳಾದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಹಿಂದೂ ಜನಜಾಗೃತಿ ಸಮಿತಿ ವಕ್ತಾರ ವಿಜಯ ಕುಮಾರ್ ಎಚ್ಚರಿಸಿದ್ದಾರೆ.
ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಬೋರ್ಡ್ ಹೈಸ್ಕೂಲ್ ಮುಂಭಾಗದಲ್ಲಿ, ಹಿಂದೂ ಜನಜಾಗೃತಿಯ ಸಮಿತಿ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಲು ಹೊರಟಿರುವ 'ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ'ಯ ವಿರುದ್ಧ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪುರಾಣ, ರಾಮಾಯಣದ ಕಾಲದಿಂದಲೂ ನಂಬಿಕೆಗಳೇ ಹಿಂದೂಗಳಿಗೆ ಮಾರ್ಗಸೂಚಿಯಾಗಿವೆ. ಅದಕ್ಕಿಂತ ಮುಖ್ಯವಾಗಿ ಹಿಂದೂ ಧರ್ಮವು ಮೂಲದಲ್ಲಿ ಶ್ರದ್ಧೆ ಮತ್ತು ನಂಬಿಕೆಗಳ ಮೇಲೆಯೇ ನಿಂತಿದೆ. ಹೀಗಿರುವಾಗ ಸರ್ಕಾರ ಹಿಂದೂ ಧರ್ಮೀಯರ ನಂಬಿಕೆ ಚ್ಯುತಿ ತರುವ ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೊಳಿಸುವಲ್ಲಿ ಮುಂದಾಗಿರುವುದನ್ನು ಹಿಂದೂ ಜನಜಾಗೃತಿ ಸಮಿತಿಯು ಖಂಡಿಸುತ್ತದೆ ಎಂದರು.
ನಂಬಿಕೆಗೆ ಧಕ್ಕೆ ಸಲ್ಲದು: ಭಾರತೀಯ ದಂಡ ಸಂಹಿತೆ ಮೂಢನಂಬಿಕೆ ಸಂದರ್ಭದಲ್ಲಿನ ದೌರ್ಜನ್ಯ ತಡೆಯಲು ಸಕ್ಷಮ ಇರುವಾಗ ಪ್ರತ್ಯೇಕ ಕಾನೂನು ಜಾರಿ ಮಾಡಬಾರದು, ಮಸೂದೆ ರಚನಾ ಸಮಿತಿಯಲ್ಲಿ ಹಿಂದೂ ಧಾರ್ಮಿಕ ಮುಖಂಡರಿಗೂ ಭಾಗವಹಿಸಲು ಅವಕಾಶ ನೀಡಬೇಕು. ಹಿಂದೂ ಧರ್ಮೀಯರ ನಂಬಿಕೆಗೆ ಧಕ್ಕೆ ಬರುವಂತ ಕಾನೂನನ್ನು ಜಾರಿಗೊಳಿಸಬಾರದು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟರು.
ಸಮಿತಿಯ ಉದಯಕುಮಾರ್ ಶೆಟ್ಟಿ, ಚಿತ್ತರಂಜನ ಹೆಗ್ಡೆ ಆರ್.ಕೆ. ಮಣಿಪಾಲ, ಉಷಾ ಶಶಿಧರ, ಭುಜಂಗ ಶೆಟ್ಟಿ ಇದ್ದರು.
--
ಜೆಡಿಎಸ್ ಜಿಲ್ಲಾ ಸಮಿತಿ ವಿಸರ್ಜನೆ:
ದೇವಿಪ್ರಸಾದ್
ಉಡುಪಿ: ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷವನ್ನು ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಳಮಟ್ಟದಲ್ಲಿ ಸಂಘಟಿಸುವುದಕ್ಕಾಗಿ, ಇತ್ತೀಚೆಗೆ ಉಡುಪಿಗೆ ಬಂದಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಸೂಚನೆಯಂತೆ ಜಿಲ್ಲಾ ಸಮಿತಿಯನ್ನು ವಿಸರ್ಜಿಸಲಾಗಿದ್ದು, ಪುನರ್ ಸಂಘಟಿಸಲಾಗುತ್ತಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷರನ್ನು ಹೊರತುಪಡಿಸಿ ಜಿಲ್ಲಾ ಸಮಿತಿಯ ಎಲ್ಲ ಪದಾಧಿಕಾರಿಗಳನ್ನು ರಾಜ್ಯಕ್ಕೆ ಆಯ್ಕೆಯಾದ ವಿವಿಧ ಸಮಿತಿಯ ಪದಾಧಿಕಾರಿಗಳನ್ನು, ಜಿಲ್ಲೆಯ ಎಲ್ಲ ಘಟಕಗಳ ಪದಾಧಿಕಾರಿಗಳನ್ನು ಮತ್ತು ಬ್ಲಾಕ್ ಹಾಗೂ ವಲಯ ಪದಾಧಿಕಾರಿಗಳನ್ನು ತಕ್ಷಣದಿಂದಲೇ ಜಾರಿ ಬರುವಂತೆ ಬರ್ಖಾಸುಗೊಳಿಸಲಾಗಿದೆ.
ಪಕ್ಷ ಸಂಘಟನೆ, ನಾಯಕರ ಮೇಲೆ ವಿಶ್ವಾಸ ಮತ್ತು ಪಕ್ಷಕ್ಕಾಗಿ ಪೂರ್ಣಾವಧಿ ತೊಡಗಿಸುವ ನಾಯಕರನ್ನು ಗುರುತಿಸಿ ಪಟ್ಟಿ ಮಾಡಲಾಗುವುದು. ಗ್ರಾಮ ಸಮಿತಿ, ವಲಯ ಸಮಿತಿ ಮತ್ತು ಬ್ಲಾಕ್ ಸಮಿತಿ ರಚನೆಗೆ ಉಸ್ತುವಾರಿಗಳ ನೇಮಕ ಮಾಡಲಾಗುವುದು. ಜಿಲ್ಲೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಪಕ್ಷದ ಹಿರಿಯ ನಾಯಕರ ಸಮನ್ವಯ ಸಮಿತಿ ರಚಿಸಲಾಗುವುದು. ಪಕ್ಷದ ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರ ಅನುಮೋದನೆಯೊಂದಿಗೆ ಪ್ರಕಟಿಸಲಾಗುವುದು ಎಂದು ಶೆಟ್ಟಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

