ಉಡುಪಿ

10 ವರ್ಷದಲ್ಲಿ ನೀರಿಗೆ ಭಾರಿ ಕೊರತೆ: ಸಾಯಿನಾಥ್

Published On :

ಮಣಿಪಾಲ: ಮುಂದಿನ 10 ವರ್ಷಗಳಲ್ಲಿ ದೇಶ ಎದುರಿಸಬೇಕಾಗಿರುವ ಅತೀ ದೊಡ್ಡ ಸಮಸ್ಯೆ ಎಂದರೆ ನೀರಿನ ಕೊರತೆ ಎಂದು ಹಿರಿಯ ಪತ್ರಕರ್ತ ಡಾ.ಪಿ. ಸಾಯಿನಾಥ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಆರಂಭಗೊಂಡ 3 ದಿನಗಳ 'ಉಡುಪಿ 360 ಡಿಗ್ರಿ' ಎಂಬ ಕಾರ್ಯಾಗಾರದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಉಡುಪಿಯಂತಹ ಜಿಲ್ಲೆಯಲ್ಲಿ ಮಳೆಗಾಲದಲ್ಲಿ 4000 ಮಿ.ಮಿ.ಗೂ ಅಧಿಕ ಮಳೆಯಾಗುತ್ತದೆ, ಬೇಸಿಗೆಗಾಲದಲ್ಲಿ ಬರ ಬರುತ್ತದೆ. ನೀರಿನ ಕೊರತೆ ಆಹಾರೋತ್ಪಾದನೆಯ ಕೊರತೆಗೆ ಕಾರಣವಾಗುತ್ತದೆ. ಇದು ಇನ್ನೂ ಅನೇಕ ಸಮಸ್ಯೆಗಳಿಗೆ ಹೇತುವಾಗುತ್ತದೆ. ಆದ್ದರಿಂದ ಈ ವಿಚಿತ್ರ ಸಮಸ್ಯೆಯ ಪರಿಹಾರಕ್ಕೆ ಜಿಲ್ಲಾಡಳಿತ ಸರಿಯಾಗಿ ಯೋಚಿಸಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾಯಿನಾಥ್ ಸಲಹೆ ಮಾಡಿದರು.
ಅನೇಕ ಮಂದಿ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡುವುದಕ್ಕೆ ಸಿದ್ಧರಿದ್ದಾರೆ, ಆದರೆ ಅವರ ಕೆಲಸಕ್ಕೆ ತಕ್ಕ ವಾತಾವರಣ ಇಲ್ಲ, ಆದರೂ ಕೆಲಸ ಮಾಡದಿದ್ದರೇ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಅವರು ತಪ್ಪು ಮಾಹಿತಿಗಳನ್ನು ನೀಡಿ, ಕೆಲಸ ಮಾಡುತ್ತಿದ್ದೇವೆ ಎಂದು ತೋರಿಸುತ್ತಿದ್ದಾರೆ ಎಂದ ಅವರು ಅಧಿಕಾರಿಯೊಬ್ಬರು 10 ವರ್ಷಗಳಲ್ಲಿ ಆದ ಮಳೆಯ ಸುಳ್ಳು ಲೆಕ್ಕವನ್ನು ಕೊಟ್ಟ ಉದಾಹರಣೆ ನೀಡಿದರು. ಅಧಿಕಾರಿಗಳಿಗೆ ಇಂತಹ ಅನಿವಾರ್ಯತೆಗಳು ಬರಬಾರದು ಎಂದವರು ಆಗ್ರಹಿಸಿದರು.
ಇದಕ್ಕೂ ಮೊದಲು ಪಿ. ಸಾಯಿನಾಥ್ ಅವರು ಬರೆದ ಆಂಗ್ಲ ಕೃತಿಯ, ಜಿ.ಎನ್. ಮೋಹನ್ ಅನುವಾದಿಸಿದ 'ಬರ ಎಂದರೆ ಎಲ್ಲರಿಗೂ ಇಷ್ಟ' ಇದರ 3ನೇ ಮುದ್ರಣವನ್ನು ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್‌ನ ನಿರ್ದೇಶಕ ಪ್ರೊ. ವರದೇಶ ಹಿರೇಗಂಗೆ ಬಿಡುಗಡೆ ಮಾಡಿದರು.
ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಕುಮಾರ್ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಶರ್ಮ ವೇದಿಕೆಯಲ್ಲಿದ್ದರು. ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ನಿರೂಪಿಸಿದರು.
ಅಧಿಕಾರಿಗಳು ಜನರ ಸೇವಕರು...
ಜನರ ಹಕ್ಕುಗಳು, ಸಂಪನ್ಮೂಲಗಳ ಸರಿಯಾದ ಬಳಕೆ ಮತ್ತು ಅಭಿವೃದ್ಧಿ ಯಾರ ಪರವಾಗಿರಬೇಕು ಎಂಬುದನ್ನು ಮರುಚಿಂತನೆ ಮಾಡುವ ಕಾಲ ಈಗ ಬಂದಿದೆ. ಸರ್ಕಾರಿ ಅಧಿಕಾರಿಗಳು ತಮ್ಮ ಬಳಿ ಬರುವ ಜನಸಾಮಾನ್ಯರು ಒಂದು ಹೊರೆ ಎಂದು ಭಾವಿಸಿದರೆ ಆಗ ಸಮಸ್ಯೆ ಆರಂಭವಾಗುತ್ತದೆ, ಅದರ ಬದಲು ತಾವು ಜನಸಾಮಾನ್ಯರ ಸೇವೆ ಮಾಡುವುದಕ್ಕಾಗಿಯೇ ಇರುವವರು ಎಂದು ಭಾವಿಸಿದರೇ ಆಗ ಸಮಸ್ಯೆಗೆ ಪರಿಹಾರ ಸಿಗುತ್ತದೆ.
- ಡಾ.ಪಿ. ಸಾಯಿನಾಥ್,
ಹಿರಿಯ ಪತ್ರಕರ್ತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.