ಅಡಿಗ ಕೊಲೆ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
ಕುಂದಾಪುರ: ಆರ್ಟಿಐ, ಕಾಂಗ್ರೆಸ್ ಕಾರ್ಯಕರ್ತ, ಇಲ್ಲಿನ ವಂಡಾರು ಗ್ರಾಮದ ಕೊಕ್ಕನಬೈಲು ನಿವಾಸಿ ವಾಸುದೇವ ಅಡಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜ್ಯೋತಿಷಿ ರಮೇಶ ಬಾಯರಿ (48) ಹಾಗೂ ಇತರ ಆರೋಪಿಗಳಿಗೆ ಫೆ.15ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸುಬ್ರಮಣ್ಯ ಉಡುಪ, ಉಮೆಶ, ಕೆ.ಎಸ್. ರಾಘವೇಂದ್ರ, ರವಿಚಂದ್ರ, ಮೋಹನ, ನವೀನ ಆರೋಪಿಗಳು. ಈ ಹಿಂದೆ ಕುಂದಾಪುರ ಜೆ.ಎಂ.ಎಫ್.ಸಿ. ನ್ಯಾಯಾಲಯ ಆರೋಪಿಗಳಿಗೆ ಫೆ. 7ರವರೆಗೆ ನ್ಯಾಯಾಂಗ ಬಂಧನ ಆದೇಶಿಸಿತ್ತು. ಅದರಂತೆ ಗುರುವಾರ ಮದ್ಯಾಹ್ನ ಈ 7 ಮಂದಿ ಆರೋಪಿಗಳನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳಿಗೆ ಮತ್ತೆ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಆರೋಪಿಗಳನ್ನು ಸದ್ಯ ಉಡುಪಿ ತಾಲೂಕಿನ ಹಿರಿಯಡ್ಕದ ಅಂಜಾರಿನಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ರವಾನಿಸಲಾಗಿದೆ.
ಹಲ್ಲೆ ಪ್ರಕರಣ: ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ
ಪುತ್ತೂರು: ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕೊಡೆಂಚಾರಮೂಲೆ ಎಂಬಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಪುತ್ತೂರಿನ ತ್ವರಿತಗತಿ ನ್ಯಾಯಾಲಯ ಗುರುವಾರ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕೊಡಿಪ್ಪಾಡಿ ಗ್ರಾಮದ ಕೊಡೆಂಚಾರಮೂಲೆ ನಿವಾಸಿಗಳಾದ ಕೃಷ್ಣಪ್ಪ ನಾಯ್ಕ, ಮೋಹನ್, ಕೂಸಪ್ಪ ಮತ್ತು ವಿಶ್ವನಾಥ ಶಿಕ್ಷೆಗೊಳಗಾದವರು.
ಪ್ರಕರಣ ಹಿನ್ನೆಲೆ: ಕೃಷ್ಣಪ್ಪ ನಾಯ್ಕ, ಮೋಹನ, ಕೂಸಪ್ಪ, ಮಲ್ಲಿಕಾ, ವಿಶ್ವನಾಥ ಮತ್ತು ಜಯರಾಮ ಗೌಡ ಎಂಬವರು 2008ರ ಸೆ.8ರಂದು ಕೊಡಿಪ್ಪಾಡಿ ಗ್ರಾಮದ ಕೊಡೆಂಚಾರಮೂಲೆ ನಿವಾಸಿ ಉಮಾನಾಥ ನಾಯ್ಕ ಎಂಬವರ ಮನೆಗೆ ಮಾರಕಾಯುಧಧಾರಿಗಳಾಗಿ ಅಕ್ರಮ ಪ್ರವೇಶಗೈದು ಉಮಾನಾಥ ನಾಯ್ಕಗೆ ಮಾರಣಾಂತಿಕ ಹಲ್ಲೆ ನಡೆಸಿ, ಹಲ್ಲೆ ತಡೆಯಲು ಬಂದಿದ್ದ ಅವರ ಪತ್ನಿ ಲೀಲಾವತಿ ಮೇಲೂ ತೀವ್ರ ಹಲ್ಲೆ ನಡೆಸಿದ್ದರೆಂಬ ಆರೋಪವಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ತ್ವರಿತಗತಿ ನ್ಯಾಯಾಲಯ ಆರೋಪಿಗಳ ಪೈಕಿ ಮಲ್ಲಿಕಾ ಮತ್ತು ಜಯರಾಮ ಗೌಡ ಅವರನ್ನು ನಿರಪರಾಧಿಗಳೆಂದು ಪರಿಗಣಿಸಿ ಬುಧವಾರ ತೀರ್ಪು ನೀಡಿತ್ತು. ಉಳಿದ ಆರೋಪಿಗಳಿಗೆ ಗುರುವಾರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆರೋಪಿಗಳ ಪೈಕಿ ಪ್ರಮುಖ ಆರೋಪಿ ಕೃಷ್ಣಪ್ಪ ನಾಯ್ಕಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಮೋಹನ ಮತ್ತು ಕೂಸಪ್ಪಗೆ 2 ವರ್ಷ ಕಠಿಣ ಶಿಕ್ಷೆ ಮತ್ತು ವಿಶ್ವನಾಥಗೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
ಪೆಟ್ರೋಲ್ ಬಾಂಬ್ ಪ್ರಕರಣ
ಪೂರ್ವನಿಯೋಜಿತ: ಉದ್ಯಮಿ
ಪುತ್ತೂರು: ತಾಲೂಕಿನ ನೆಲ್ಯಾಡಿಯಲ್ಲಿ ಎರಡು ದಿನಗಳ ಹಿಂದೆ ಪತ್ತೆಯಾದ ಬಾಂಬ್ ಮಾದರಿಯ ಸ್ಫೋಟಕ ವಸ್ತುಗಳ ವಿಚಾರಕ್ಕೆ ಸಂಬಂಧಿಸಿ ಸುಳ್ಳು ವದಂತಿ ಹಬ್ಬಿಸಲಾಗುತ್ತಿದ್ದು ಇದೊಂದು ಪೂರ್ವಯೋಜಿತ ದುಷ್ಕೃತ್ಯ ಎಂದು ನೆಲ್ಯಾಡಿಯ ಉದ್ಯಮಿ ಮಹಮ್ಮದ್ ಹನೀಫ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಯಾವುದೇ ಸಂಘಟನೆಯ ಮುಖಂಡ ಅಥವಾ ಕಾರ್ಯಕಕರ್ತ ಅಲ್ಲ. ಆದರೆ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶದಿಂದ ಈ ಷಡ್ಯಂತ್ರ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಲಿಖಿತ ದೂರು ನೀಡಿಲಾಗಿದೆ. ಈ ರೀತಿಯ ಷಡ್ಯಂತ್ರ ನಡೆಸಿ ಊರಿನ ಶಾಂತಿ ಕದಡಲು ಯತ್ನಿಸಿದವರನ್ನು ಪತ್ತೆ ಮಾಡಿ ನ್ಯಾಯ ಒದಗಿಸುವಂತೆ ಮತ್ತು ತಮಗೆ ರಕ್ಷಣೆ ನೀಡುವಂತೆ ಪುತ್ತೂರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು. ನೆಲ್ಯಾಡಿ ಮಸೀದಿ ಅಧ್ಯಕ್ಷ ಎನ್.ಎಸ್. ಸುಲೈಮಾನ್, ಉಪಾಧ್ಯಕ್ಷ ಉಮ್ಮರ್ ತಾಜ್, ಜೊತೆ ಕಾರ್ಯದರ್ಶಿ ಎನ್.ಕೆ.ಇಸ್ಮಾಯಿಲ್, ನೆಲ್ಯಾಡಿಯ ಎನ್.ಎಂ.ಎ. ಸಂಘಟನೆ ಅಧ್ಯಕ್ಷ ನಾಝಿಂ ಸಾಹೇಬ್ ಇದ್ದರು.
ಅವಿವಾಹಿತೆಯ ಅತ್ಯಾಚಾರಕ್ಕೆ ಯತ್ನ; ಯುವಕ ಬಂಧನ
ವಿಟ್ಲ: ಕೋಳಿಯ ವಿಷಯಕ್ಕೆ ಸಂಬಧಿಸಿ ಅವಿವಾಹಿತ ಹುಡುಗಿಯ ಮನೆಗೆ ಮಾತನಾಡಲು ಬಂದ ಯುವಕ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಅಡ್ಯನಡ್ಕ ಸಮೀಪದ ಕಾಯರ್ತಡ್ಕ ಎಂಬಲ್ಲಿ ಮಂಗಳವಾರ ನಡೆದಿರುವುದು ಬೆಳಕಿಗೆ ಬಂದಿದೆ. ಕೋಡಂದೂರು ನೇರೂಳ್ತಡ್ಕ ನಿವಾಸಿ ದಿ. ಈಶ್ವರ ನಾಯ್ಕ ಅವರ ಪುತ್ರ ಪ್ರಶಾಂತ್ (23) ಕಾಯರ್ತಡ್ಕದ ನಿವಾಸಿ ಅವಿವಾಹಿತ ಯುವತಿಯ ಮನೆಗೆ ಭೇಟಿ ನೀಡಿ ಕೋಳಿ ಬೇಕೆಂದು ಕೇಳಿದ್ದಾನೆ. ಈ ಸಂದರ್ಭದಲ್ಲಿ ಮನೆಯಲ್ಲಿ ಬೇರೆ ಯಾರೂ ಇಲ್ಲದ್ದನ್ನು ಗಮನಿಸಿದ ಪ್ರಶಾಂತ್ ಕೆಟ್ಟ ಶಬ್ದಗಳನ್ನು ಹೇಳಿಕೊಂಡು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವಿಷಯವನ್ನು ದಲಿತ ಸಂಘದ ಅಧ್ಯಕ್ಷರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಹುಡುಗಿ ದೂರಿನಲ್ಲಿ ತಿಳಿಸಿದ್ದಾಳೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

