ಅಕ್ಕಿ ಬೆಲೆ ಏರಿಕೆ ವಿರುದ್ಧ ತಟ್ಟೆ ಹಿಡಿದು 'ಮಕ್ಕಳ ಪ್ರತಿಭಟನೆ'!
ಉಡುಪಿ: ಅಕ್ಕಿ ಬೆಲೆ ಏರಿಕೆ ಮತ್ತು ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ವಿರುದ್ಧ ಉಡುಪಿ ಜಿಲ್ಲಾ ನಾಗರಿಕ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಬೀಡಿನಗುಡ್ಡೆಯ ಕೊಳಚೆ ಪ್ರದೇಶದ ನೂರಾರು ಮಕ್ಕಳು ಕೈಯಲ್ಲಿ ಖಾಲಿ ತಟ್ಟೆ ಹಿಡಿದುಕೊಂಡು ನಗರದ ಡಯಾನ ವೃತ್ತದಿಂದ ಕವಿ ಮುದ್ದಣ ಮಾರ್ಗವಾಗಿ ಸಾಗಿ ಕ್ಲಾಕ್ ಟವರ್ವರೆಗೆ ಮೆರವಣಿಗೆ ನಡೆಸಿದರು.
ಮಕ್ಕಳ ಖಾಲಿ ತಟ್ಟೆಗೆ ಅನ್ನದ ಬದಲು ರಸ್ಕ್, ಟೋಸ್ಟ್ ಹಾಕಿ, ಅಕ್ಕಿ ಬೆಲೆ ಏರಿರುವುದರಿಂದ ಇನ್ನು ಮುಂದೆ ನಿಮಗೆ ಅನ್ನ ಇಲ್ಲ, ಇದನ್ನೇ ತಿನ್ನಬೇಕು ಎಂದು ಹೇಳಿ ಪ್ರತಿಭಟನೆಯ ನೇತತ್ವ ವಹಿಸಿದ್ದ ನಾಗರಿಕ ಸಮಿತಿ ಕಾರ್ಯಕರ್ತರು ಸಾಂಕೇತಿಕವಾಗಿ ಪ್ರತಿಭಟಿಸಿದರು.
ಈ ಸಂದರ್ಭ ಮಾತನಾಡಿದ ನಾಗರಿಕ ಸಮಿತಿ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಒಂದು ಕಡೆಯಿಂದ ವಿದ್ಯುತ್ ಇಲ್ಲ, ಇನ್ನೊಂದೆಡೆ ಅಕ್ಕಿಯ ಬೆಲೆಯೂ ಜಾಸ್ತಿಯಾಗಿದೆ.
ಇದರಿಂದ ಬಡ ಜನರಿಗೆ, ಕೂಲಿ ಕಾರ್ಮಿಕರಿಗೆ ಊಟ ಮಾಡುವುದು ಸಾಧ್ಯವಾಗುತ್ತಿಲ್ಲ. ಶಾಲಾ ಮಕ್ಕಳಿಗೆ ಓದುವುದಕ್ಕೆ ಬರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ, ಈ ಬಡ ಕೂಲಿ ಕಾರ್ಮಿಕರ ಮಕ್ಕಳು ಹೊಟ್ಟೆಗೆ ಅನ್ನ ತಿನ್ನುವುದಕ್ಕೂ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಬಡವರಿಗೆ ಉಚಿತವಾಗಿ ವಿದ್ಯುತ್ ಮತ್ತು ಅಕ್ಕಿ ವಿತರಿಸುವ ವ್ಯವಸ್ಥೆ ಮಾಡಬೇಕು. ಮಧ್ಯಮ ವರ್ಗಕ್ಕೆ ಕೆಜಿಗೆ ರು. 2ರಂತೆ ಅಕ್ಕಿ ನೀಡಬೇಕು, ಶಾಲಾ ಕಾಲೇಜುಗಳ ಈ ಪರೀಕ್ಷಾ ಸಮಯದಲ್ಲಿ ವಿದ್ಯುತ್ ಕಡಿತ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಾಲಾ ವಿದ್ಯಾರ್ಥಿ ಸಮೀರ್ ಮಾತನಾಡಿ, ಅಪ್ಪ ಅಮ್ಮ ಕೂಲಿ ಕೆಲಸ ಮಾಡುತ್ತಿದ್ದು, ಅವರು ದುಡಿದು ತಂದ ಹಣ ಅಕ್ಕಿಗೆ ಸಾಲುತ್ತಿಲ್ಲ.
ನಾವು ಶಾಲೆಯಿಂದ ಬಂದು ಮನೆಯಲ್ಲಿ ಓದುವ ಎಂದು ಲೈಟ್ ಹಾಕಿದರೆ ಕರೆಂಟ್ ಇರುವುದಿಲ್ಲ ಎಂದು ಅಲವತ್ತುಕೊಂಡ.
ನಗರದ ಮಹಾತ್ಮಗಾಂಧಿ ಹಿರಿಯ ಪ್ರಾಥಮಿಕ ಶಾಲೆ, ವಳಕಾಡು ಸಂಯುಕ್ತ ಪ್ರೌಢಶಾಲೆ ಹಾಗೂ ಸಂಸ್ಕೃತ ಮಹಾಪಾಠ ಶಾಲೆಯಲ್ಲಿ ಓದುವ ಬೀಡಿನ ಗುಡ್ಡೆಯ ಎಲ್ಲ ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

