ಹಿಂದೂ ಧರ್ಮ ಉಳಿಯಲು ದೇವಸ್ಥಾನಗಳೇ ಕಾರಣ
ಹಿಂದೂ ಧರ್ಮದ ಮೇಲೆ ಶತಮಾನಗಳಿಂದ ಆಘಾತ ಮತ್ತು ಆಕ್ರಮಣಗಳು ನಡೆಯುತ್ತಾ ಬಂದಿದೆ...
ಉಡುಪಿ: ಹಿಂದೂ ಧರ್ಮದ ಮೇಲೆ ಶತಮಾನಗಳಿಂದ ಆಘಾತ ಮತ್ತು ಆಕ್ರಮಣಗಳು ನಡೆಯುತ್ತಾ ಬಂದಿದೆ. ಆದರೂ ಹಿಂದೂ ಧರ್ಮ ಇಂದಿಗೂ ಸದೃಢವಾಗಿ ಉಳಿದಿದೆ, ಇದಕ್ಕೆ ಪ್ರಮುಖ ಕಾರಣ ದೇವಾಲಯಗಳು ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ವತಿಯಿಂದ ಶನಿವಾರ ನಡೆದ ಜಿಲ್ಲೆಯ ಅಧಿಸೂಚಿತ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮರಕ್ಕೆ ಕಾಲಕಾಲಕ್ಕೆ ನೀರು ಹಾಕಿದರೆ ಮಾತ್ರ ಮರ ಫಲಪುಷ್ಪಗಳನ್ನು ನೀಡುತ್ತದೆ. ಹಾಗೆಯೇ ಈ ಹಿಂದೂ ಸಮಾಜದ ಮುಖ್ಯ ಬೇರು ದೇವಾಲಯಗಳು. ಈ ದೇವಾಲಯಗಳ ಅಭಿವೃದ್ಧಿ, ಉತ್ಸವ, ಪೂಜೆ ಇನ್ನಿತರ ಕೆಲಸಕಾರ್ಯಗಳು ಕಾಲಕಾಲಕ್ಕೆ ಸರಿಯಾಗಿ ನಡೆದರೆ ಮಾತ್ರ ಅಲ್ಲಿ ಹಿಂದೂ ಧರ್ಮದ ರಕ್ಷಣೆ ಆಗುತ್ತದೆ ಎಂದು ಶ್ರೀಗಳು ಹೇಳಿದರು.
ದೇವಾಲಯ ಪೂಜೆಗೆ ಸೀಮಿತವಲ್ಲ, ಅಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳ ಬಗ್ಗೆ ವಿಶೇಷ ಕಾರ್ಯಕ್ರಮಗಳು ನಡೆಯಬೇಕು. ಇಂದು ಚರ್ಚುಗಳು ಅನೇಕ ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿವೆ. ಅಂತಹ ಒಂದು ಮಾದರಿಯನ್ನು ಇಂದು ಹಿಂದೂ ದೇವಾಲಯಗಳು ಆಳವಡಿಸಿಕೊಳ್ಳಬೇಕು ಎಂದವರು ಕರೆ ನೀಡಿದರು.
ಅನುದಾನ ಬಿಡುಗಡೆ : ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸುಮಾರು 481 ದೇವಾಲಯಗಳಿಗೆ 19.80 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದ ಪ್ರವಾಸಿ ದೇವಾಲಯಗಳೆಂದು ಕರೆಸಿಕೊಳ್ಳುವ 25 ದೇವಾಲಯಗಳಿಗೆ ತಲಾ 1 ಕೋಟಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಉಡುಪಿ ಜಿಲ್ಲೆಯ ಅಮೃತೇಶ್ವರಿ ಮತ್ತು ನೀಲಾವರದ ಮಹಿಷಮರ್ದಿನಿ ದೇವಾಲಯಗಳೂ ಸೇರಿವೆ ಎಂದರು.
ರಾಜ್ಯದ ಎ ದರ್ಜೆಯ 25 ದೇವಸ್ಥಾನದಲ್ಲಿ ಗೋರಕ್ಷಣಾ ಕೇಂದ್ರಗಳನ್ನು ಸ್ಥಾಪನೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಹಲವಾರು ದಿನಗಳನ್ನು ಈಗಾಗಲೇ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ದಿನ ಆಚರಿಸಬೇಕಂಬ ಉದ್ದೇಶದಿಂದ ಚಾಂದ್ರಮಾನ ಯುಗಾದಿ ದಿನದಂದು ಧಾರ್ಮಿಕ ದಿನಾಚರಣೆಯನ್ನು ಆಚರಿಸಲು ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು.
ಅಲ್ಲದೆ ಬರುವ ತಿಂಗಳಿಂದ ಇಲಾಖೆ ಒಂದು ಪತ್ರಿಕೆ ಹೊರತರುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದ ಅವರು, ಹಿಂದೂ ದೇವರನ್ನು ಅವಹೇಳನಕಾರಿಯಾಗಿ ಬಿಂಬಿಸುವುದನ್ನು ಸ್ಪಷ್ಟವಾಗಿ ನಿಷೇಧಿಸಲು ಹಾಗೂ ಮಾಟ ಮಂತ್ರದ ಹೆಸರಿನಲ್ಲಿ ಬಡವರು, ಮಕ್ಕಳು, ಹೆಣ್ಣು ಮಕ್ಕಳನ್ನು ಶೋಷಿಸುತ್ತಿರುವುದನ್ನು ಕಣ್ಗಾವಲು ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಉಡುಪಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ನಗರಸಭಾ ಅಧ್ಯಕ್ಷ ಕಿರಣ್ ಕುಮಾರ್, ಜಿಪಂ ಸಿಇಒ ಎಸ್.ಎ. ಪ್ರಭಾಕರ ಶರ್ಮ, ತೆಂಗಿನನಾರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕೆ. ಶೀಲಾ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯರಾದ ಜಯರಾಮ್ ಭಟ್, ನಯನಾ ಗಣೇಶ, ನವೀನ್ ನಾಯಕ್, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಅಪ್ಪಣ್ಮ ಹೆಗ್ಡೆ, ರಾಮಚಂದ್ರ ಭಟ್ ಇದ್ದರು.
ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿಯ ಕರ್ತವ್ಯ ಹಾಗೂ ಹೊಣೆಗಾರಿಕೆ ವಿಷಯದ ಬಗ್ಗೆ ನಿವೃತ್ತ ನ್ಯಾಯಾಧೀಶ, ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ ಕೆ.ಡಿ. ದೇಶಪಾಂಡೆ ವಿಶೇಷ ಉಪನ್ಯಾಸ ನೀಡಿದರು.
ದೇವಾಲಯಗಳಿಂದ ಮತಾಂತರ ತಡೆ ಸಾಧ್ಯ
ಹಿಂದೂಗಳು ಮತಾಂತರವಾಗುವುದನ್ನು ತಡೆಯುವಲ್ಲಿ ದೇವಾಲಯಗಳು ಬಹುಮುಖ್ಯ ಪಾತ್ರ ವಹಿಸಬೇಕು ಎಂದು ಪೇಜಾವರ ಶ್ರೀಗಳು ಕರೆ ನೀಡಿದ್ದಾರೆ. ದೇವಾಲಯಗಳು ಹಿಂದೂ ಸಮಾಜದ ಬಡಜನರಿಗೆ ಮುಟ್ಟುವಂತಹ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಆಗ ಈ ಬಡವರು ಆರ್ಥಿಕ ಕಾರಣಗಳಿಗಾಗಿ ಮತಾಂತರಗೊಳ್ಳುವುದನ್ನು ನಿಲ್ಲಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ದೇವಾಲಯಗಳು ಹಿಂದೂಗಳನ್ನು ಒಗ್ಗೂಡಿಸುವುದಕ್ಕೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಧಾರ್ಮಿಕ ಶಿಕ್ಷಣ, ಸಾಮಾಜಿಕ ಸೇವೆ ಜತೆಗೆ ಸಾಮೂಹಿಕವಾಗಿ ಪ್ರಾರ್ಥನೆ, ಭಜನೆ ಇತ್ಯಾದಿ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಟ್ಟರೆ ಹಿಂದೂಗಳ ಎಲ್ಲಾ ಜಾತಿಗಳ ಮಧ್ಯೆ ಒಗ್ಗಟ್ಟು ಸಾಧ್ಯವಾಗುತ್ತದೆ. ಇದು ಮತಾಂತರ ಪೀಡುಗಿಗೆ ಅತ್ಯುತ್ತಮ ಪರಿಹಾರವಾಗಿದೆ ಎಂದು ಶ್ರೀಗಳು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

